ನಾನು ಯಾರನ್ನಾದರು “ಹೇಗೆ ನಡೆಯುತ್ತಿದೆ ಜೀವನ ?” ಅಂತ ಕೇಳಿದರೆ, ಅವರು “ವಿಶೇಷವೇನಿಲ್ಲ ” ಎಂದಷ್ಟೇ ಹೇಳಿ ಮುಗಿಸಿಬಿಡುತ್ತಾರೆ. ಆದರೆ ದುರದೃಷ್ಟ ನೋಡಿ, ನನಗ್ಯಾಕೋ ಅವರಂತೆಯೇ ಹೇಳಿ ಮಾತು ಮುಗಿಸಲು ಬರುವುದಿಲ್ಲ. ನಾನು” ಚೆನ್ನಾಗಿದೆ, ಸಖತ್ತಾಗಿದೆ, ಚೆನ್ನಾಗಿಲ್ಲ, ಹೊಪ್ಲೆಸ್ಸಾಗಿದೆ” ಇವೆ ಮುಂತಾದ ಪದಗಳನ್ನ ಪ್ರಯೋಗಿಸಿಬಿಡುತ್ತೇನೆ. ಅವರು ನನ್ನನ್ನು ಮುಂದೆ ಮಾತಿಗೆಳೆಯುತ್ತಾರೆ. ಅದು ಎಲ್ಲೆಲ್ಲೋ ಸಾಗುತ್ತದೆ. ಆಮೇಲೆ ನನಗೆ ಬರುವ ಬಿರುದು “ಸಿಕ್ಕಾಪಟ್ಟೆ ಮಾತಾಡ್ತಾಳೆ” ಈ ಹುಡುಗಿ !ತಪ್ಪು ನನ್ನದಾ ? ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವುದೇ ತಪ್ಪಾ ? ಅಥವಾ ನಾವು ” ಜೀವನದಲ್ಲಿ ಏನು ನಡೆಯುತ್ತಿಲ್ಲ ” ಅಂದು ಹೇಳಿ ಪ್ರಶ್ನೆಗೆ, ಮಾತಿಗೆ, ಚರ್ಚೆಗೆ ತೆರೆಯೆಳೆಯುತ್ತಿದ್ದೆವಾ ?
ಅದಕ್ಕೆ , ಜನರ ಈ ಧೋರಣೆಯನ್ನು ಬಹಳ ಸರ್ತಿ ನೋಡಿ, ಕೇಳಿ ನಾನು ಇತ್ತೀಚಿಗೆ ಜನರೊಟ್ಟಿಗೆ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೇನೆ. ಚರ್ಚೆಗೆ ಇಳಿಯುವುದು, ಅದು ವಾದವಾಗುವುದು, ನಂತರ ಜಗಳ ಆಡುವುದು ಇವೆಲ್ಲಾ ಯಾಕೆ ಅಂತ ನಾನು ಸಹ ಅವರಂತೆಯೇ ಸುಮ್ಮನೆ ಇದ್ದುಬಿಡಲು ನಿರ್ಧರಿಸಿದ್ದೇನೆ. ಆದರು ನನ್ನೊಳಗೆ ಉಧ್ಭವಿಸಿರುವ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಮ್ಮ ಜೀವನದಲ್ಲಿ ದಿನಾಗಲು ಏನು ವಿಶೇಷ ನಡೆಯುವುದಿಲ್ಲವಾ?ಅಥವಾ ವಿಶೇಷ ನಡೆದರೂ ನಾವು ಅದನ್ನೂಸಹ ಹಂಚಿಕೊಳ್ಳದಷ್ಟು ಸ್ವಾರ್ಥಿಗಳಾಗಿದ್ದೆವಾ ? ನಮ್ಮ ಅನುಭವ ಬೇರೊಬ್ಬರಿಗೆ ದಾರಿದೀಪವಲ್ಲವೆ ? ನಮ್ಮ ಜೀವನದಲ್ಲಿ ಜರುಗುವ ಅತಿ ಸಾಮಾನ್ಯ ಸಂಗತಿ ಬೇರೊಬ್ಬರಿಗೆ ವಿಶೇಷವಾಗಿರಬಹುದು, ಅಥವಾ ನಮ್ಮ ಜೀವನದ ಅತ್ಯಂತ ವಿಶೇಷ ಸಂಗತಿ ಬೇರೊಬ್ಬರಿಗೆ ಅತಿಸಾಮಾನ್ಯ ಸಂಗತಿಯಾಗಿರಬಹುದು. ದೃಷ್ಟಿಯ ಈ ವೈಪರೀತ್ಯಗಳನ್ನು ಮೀರಿದ ಒಂದು ವಿಭಿನ್ನ, ವಿಶಿಷ್ಟ ದೃಷ್ಟಿಕೋನವನ್ನು ಪಡೆಯಲು ಈ ಅನುಭವ ಹಂಚಿಕೆ ಬಹುಮುಖ್ಯ ಅಲ್ಲವೇ ?
ಮೊದಮೊದಲು ನಮ್ಮೊಟ್ಟಿಗೆ ಸುಖ ದುಃಖ ಹಂಚಿಕೊಳ್ಳಲು ಸ್ನೇಹಿತರು ನಮ್ಮ ಮನೆಯ ಸುತ್ತ ಮುತ್ತ, ಶಾಲೆಗಳಲ್ಲಿ ಇರುತ್ತಿದ್ದರು. ನಂತರ ನಾವು ನೆರೆಹೊರೆಯವರನ್ನೇ ಮಾತನಾಡಿಸದಷ್ಟು ದೊಡ್ದವರಾಗಿಬಿಟ್ಟೆವು.
ಶಾಲೆಗಳಲ್ಲಿಯೂ ಬರುಬರುತ್ತಾ ಗೆಳೆತನ ನೋಟ್ಸಿಗಾಗಿಯೇ ಮೀಸಲಾಗಿಹೋಯ್ತು. ಇನ್ನು ಕಂಪ್ಯೂಟರ್ರು, ಅಂತರ್ಜಾಲ ಇವೆಲ್ಲಾ ಬಂದಮೇಲೆ ಕಣ್ಣಿಗೆ ಕಾಣದವರೆಲ್ಲಾ ಮನಸ್ಸಿಗೆ ಹತ್ತಿರವಾಗಲು ಪ್ರಾರಂಭಿಸಿದರು. ಮಾನಿಟರ್ರು ನಮ್ಮ ಮನದ ಕಿಟಕಿಯಾಯ್ತು. ಭಾವನೆಗಳು ಅಕ್ಷರರೂಪ ತಾಳಲಾರಂಭಿಸಿದವು . ನಾವು ನಮ್ಮ ಖಾಸಗಿ ಡೈರಿಯನ್ನು ಅಂತರ್ಜಾಲದಲ್ಲಿ ಬರೆದಿಡುವಷ್ಟರಮಟ್ಟಿಗೆ ತಲುಪಿತು ನಮ್ಮ ಜೀವನ.
ಮುಖಕ್ಕೆ ಮುಖ ಕೊಟ್ಟು ಮಾತಾಡುವ ಸಂಪ್ರದಾಯ ಹೋಯ್ತು , ಫೋನ್ ಕಾಲ್ ಗಳು ಕಡಿಮೆಯಾಗತೊಡಗಿದವು. ಆದರೆ ಬ್ಲಾಗುಗಳು ಮಾತ್ರ ಶ್ರೀಮಂತವಾಗತೊಡಗಿದವು . ನಮ್ಮ ಅಪ್ಪ ಅಮ್ಮನ ಜೊತೆ ಒಂದು ನಿಮಿಷಕ್ಕಿಂತ ಹೆಚ್ಚು ಮಾತಾಡದ ನಾವು ಕಾಣದವರ ಜೊತೆ ಘಂಟೆಗಟ್ಟಲೆ ಆರ್ಕುಟ್ಟು ಫೆಸ್ ಬುಕ್ಕುಗಳಲ್ಲಿ ಹರಟೆ ಕೊಚ್ಚೋದು ವಿಪರ್ಯಾಸವೋ, ವಿಶೇಷವೋ, ಇದನ್ನ ನಾವಿನ್ನು ಕಂಡುಹಿಡಿದುಕೊಳ್ಳಬೇಕಾಗಿದೆ . ಇತ್ತೀಚಿಗೆ ಇದು ಬೇಜಾರಾಗಿಹೋಗಿದೆ.
ಇದೆಲ್ಲ ನೋಡಿ, ನನ್ನ ತಲೆ ಕೆಟ್ಟು ನಾನು ಕಂಗಾಲಾಗಿರುವುದು ನನ್ನ ಜೀವನದಲ್ಲಿ ನಡೆಯುತ್ತಿರುವ ಸಧ್ಯದ ವಿಶೇಷ . ಹಾಗಾಗಿ, ನಾನು ಈಗ ಮೌನವನ್ನಾಧರಿಸಿ, ಇದೆಲ್ಲಾ ಏನು ಹಿಂಗಾಗಿಹೋಯ್ತಲ್ಲ ಅಂತ ಕಾರಣ ಹುಡುಕುತ್ತಿದ್ದೇನೆ. ನನಗೆ ಪರಿಚಯವಿರುವ ಎಲ್ಲರು ಇತ್ತೀಚಿಗೆ ಮೌನವಾಗಿದ್ದಾರೆ. ಅವರು ಪ್ರಾಯಶಃ ಇದೆ ಅವಲೋಕನದಲ್ಲಿ ಮಗ್ನರಾಗಿರಬಹುದು. ಈಗ ನಾನು ಅವರ ತರಹವೇ ಮೌನದ ಮೊರೆಹೋಗುತ್ತಿದ್ದೇನೆ. ಇದು ಇವತ್ತಿನ, ಈ ಕ್ಷಣದ ವಿಶೇಷ.
ಇನ್ಮೇಂದ ಯಾರಾದರೂ ನನ್ನನ್ನು ಕುರಿತು , ” ಏನ್ಸಮಾಚಾರ ?” ಅಂದರೆ ನನ್ನ ಉತ್ತರ ಮೌನ. ” ಹೇಗೆ ನಡೆಯುತ್ತಿದೆ ಜೀವನ ?” ಅಂತಂದರೆ ನನ್ನ ಉತ್ತರ ಮುಗುಳ್ನಗು ಅಷ್ಟೇ.
ಎಲ್ರೂ ಹಾಗಾಗೋದ್ರೂ ಅಂತ ಹೇಳಿ (ಕೊರಗಿ), ಬೇಸರ ಮಾಡಿ ಕೊನೆಗೆ ನೀವು ಹಾಗೇ ಆಗೋಕೆ ಹೊರಟಿದ್ದೀರಲ್ಲ. ಇದು ನ್ಯಾಯಮಾ? ಧರ್ಮಮಾ?!
ಏನಾದರೂ ಸರಿಯಿಲ್ಲ ಅನ್ನಿಸಿದರೆ, ಬದಲಾವಣೆ ಬೇಕು ಅನ್ನಿಸಿದರೆ, ಆ ಮೊದಲ ’ಬದಲಾವಣೆ’ ನೀನೇ ಆಗು ಅನ್ನುತ್ತದೆ ಉಪನಿಷತ್ತು 🙂
ಪ್ರತಿಕ್ರಿಯೆ by vikas — ಜುಲೈ 8, 2010 @ 4:14 ಅಪರಾಹ್ನ |
ಹೌದು, ನಂಗೂ ಬಹಳ ಹಿಂದೆ ಹೀಗೇ ಅನ್ನಿಸ್ತು.. ದಿನವಿಡೀ ಬ್ಲಾಗ್ ಲೋಕ, ಇಂಟರ್ನೆಟ್ಟು.. ಈಗ ಮನೆಲಿ ಇಂಟರ್ನೆಟ್ ಅವಶ್ಯವಿದ್ದಲ್ಲಿ ಮಾತ್ರ ಓಪನ್ ಮಾಡೋದು.. ಒಂದೊಂದ್ ಸಲ ಚಾಟಿಂಗಿಗೆ ನಿಂತ್ರೆ, ಮನೆಯವ್ರು ಮಾತನಾಡಿಸಿದ್ರೂ ಬಾವಿಯೊಳಗಿಂದ ಕೂಗಿದಂತೆ ಊಂ ಅಂತೀವೆ ಹೊರ್ತು, ಪಕ್ಕದಲ್ಲಿರೋರ್ ಜೊತೆ ಮಾತನಾಡೋದಿಲ್ಲ!
ಪ್ರತಿಕ್ರಿಯೆ by PaLa — ಜುಲೈ 8, 2010 @ 4:40 ಅಪರಾಹ್ನ |
Tumba chennagide nimma article.
ಪ್ರತಿಕ್ರಿಯೆ by anjanaa — ಫೆಬ್ರವರಿ 17, 2011 @ 4:53 ಅಪರಾಹ್ನ |