ಅಪ್ಪ ಗಾಣದ ಎತ್ತು ಅಮ್ಮ ಅಡುಗೆಮನೆಯರಸಿ
ಇಬ್ಬರ ಯಾತನೆ ನೋಡಲಾಗುವುದಿಲ್ಲ
ನಾಟಕ ಸಿನೆಮಾ ಲೋಲಾಕು ಬುಲಾಕುಗಳಿಗೆ
ಕಾಸು ಕೇಳಲು ಬಾಯೇ ಬರುವುದಿಲ್ಲ
ಓದು ಮುಗಿದಿದೆ ಮನೆಯಲ್ಲಿ ಸುಮ್ಮನಿರು ಎಂದರೂ
ನನಗೆ ಮನೆಯಲ್ಲಿರಲು ಇಛ್ಛೆಯಿಲ್ಲ
ಕೆಲಸಕ್ಕೆ ಸೇರುವೆನೆಂದು ಸಾರಿ ಸಾರಿ ಹೇಳಿದರು
ಅವರನ್ನುವರು- ನಿನೆಮ್ಮಸಾಕಬೇಕಿಲ್ಲ
ವಯಸ್ಸಾಗುತಿದೆ ನಮಗೆ ಇವಳ ದಡ ಸೇರಿಸಬೇಕು
ಎನ್ನುವ ಚಿಂತೆ ಇವರ ಬಿಟ್ಟಿಲ್ಲ
ಸ್ವಲ್ಪ ವರ್ಷ ತಾಳಿ ಏನವಸರ ಮದುವೆಗೆಂದರೂ
ಇವರು ಕೇಳುವ ಹಾಗೆ ಕಾಣೊಲ್ಲ
ಭೀಮನ ಅಮಾವಾಸ್ಯೆ ಲಕ್ಷ್ಮೀ ಗೌರಿ ಗಣಪತಿಗೆ
ಆದ ಖರ್ಚು ಕಮ್ಮಿಯೇನು ಅಲ್ಲ
ಹಬ್ಬವೊಂದಕ್ಕೆ ಬಟ್ಟೆ ಕೊಡಿಸದಿರೆ ಹಲುಬುವಳು ತಂಗಿ
ನನಗೇಕೆ ದುಡಿವ ಅಣ್ಣನಿಲ್ಲ ?
ನನಗಾಗಿ ದುಡಿವೆ ನಿಮಗೆ ಹೊರೆಯಾಗಲಾರೆ
ಇಷ್ಟು ವರ್ಷ ಸಾಕಿದ್ದೀರಲ್ಲ
ಹೀಗೆನ್ನಲು ನಾನು ಉದ್ಗರಿಸುವರು ಅವರು
ಮಗಳು ಬೆಳೆದುಬಿಟ್ಟಳಲ್ಲಾ !