ಟೈಂ ಪಾಸ್ ಬರಹಗಳು

ನವೆಂಬರ್ 28, 2008

ಮಳೆಯಲ್ಲಿ ಅಳಬೇಕು !

Filed under: ಜಸ್ಟ್ ಲೈಕ್ ದಟ್ — saagari @ 12:02 ಫೂರ್ವಾಹ್ನ

ಮಳೆ  ಕೆಲವರಿಗೆ romantic, ಕೆಲವರಿಗೆ  irritating, ಮತ್ತೊಬ್ಬರಿಗೆ ಮತ್ತಿನ್ನೇನೊ! ಆದರೆ ನಾನು ಚಾರ್ಲಿ ಚಾಪ್ಲಿನ್ ಅವರ ಮಾತನ್ನು ಅನುಮೋದಿಸುತ್ತೇನೆ. ಮಳೆ ಬಂದಾಗ ನಾವು ಅತ್ತರೆ ಯಾರಿಗೂ ಕಾಣುವುದಿಲ್ಲ ಅನ್ನುವ ಅವರ ಮಾತು ತುಂಬಾ ನಿಜ. ನಾನು ಅಳುವುದು ಇಂಥಾ ಸಂದರ್ಭಗಳಲ್ಲಿಯೇ.

ಅನಿರೀಕ್ಷಿತ ಮಳೆಯಾದರೆ ಸಂದರ್ಭ ತಂತಾನೆ ಒದಗಿ ಬಂದಹಾಗಾಗುತ್ತೆ. ದಿನಗಟ್ಟಲೆ ತಡೆದಿಟ್ಟುಕೊಂಡಿರುವ ಯಾರದೋ ಮೇಲಿನ ಸಿಟ್ಟು, ಫಲಕೊಡದ ನನ್ನ ಪಾಕಪ್ರಯೋಗಗಳು, ಬ್ಲಾಗ್ ಅಪ್ಡೇಟ್ ಮಾಡಲು ಹೊರಟಾಗ ಡೌನಾಗುವ ಸರ್ವರ್ರು..ಇವೆಲ್ಲದರ ಮೇಲೆ ನಾನು ಆಗಾಗಲೇ ಕಿರ್ಚಾಡಿದರೆ ಜನ ಹುಬ್ಬೇರಿಸುತ್ತಾರೆ…ಶಾಂತ ಸ್ವಭಾವದವರು ಹೀಗೆ ಜ್ವಾಲಾಮುಖಿಯಂತೆ ಹೇಗಾದರಪ್ಪಾ ಅಂತ.ಅದಕ್ಕೆ ಯಾರ್ಗೂ ಗೊತ್ತಾಗ್ದೆ ಇರೋ ಹಾಗೆ ಅಳ್ಬೇಕು ಯಾವಾಗ್ಲು. ನಮ್ಮ ಅಳು, ದುಃಖ ಮತ್ತು ಕೋಪದ ಕಾರಣ ಕೇಳುವಷ್ಟು ವಿವೇಕಿಗಳಾಗಿಲ್ಲ ಜನ ಇನ್ನು…ಕೋಪಕ್ಕೆ ಕೋಪವೇ ಉತ್ತರ ಅಷ್ಟೆ ಅನ್ನೋ ಲೆವೆಲ್ಲಲ್ಲೇ ಇದಾರೆ…ಇರ್ಲಿ ಪಾಪ…ಇಷ್ಟಾ ಬಂದಾಗ ಮೇಲೆ ಬರ್ಲಿ ಜನ.No compulsion.

ಮಳೆ ನೋಡ್ತಾ ಅಳೋದು ಒಂಥರಾ. ಆಗ ಮನೆಯಲ್ಲಿ ಯಾರೂ ಇರ್ಬಾರ್ದು. ಮಳೆ ಥರಾನೆ ನಾವು ಒಂದೇ ಸಮ ಅತ್ತುಬಿಡಬೇಕು. ಗುಡುಗಿದಾಗ ಜಾಸ್ತಿ ಬಿಕ್ಕಳಿಸೋದು…ಮಿಂಚಿದಾಗ ಸಮಾಧಾನದ ನಗು ಬೀರೋದು ಇದೆಲ್ಲಾ ಆಗ್ಬೇಕು. ಆಗ್ಲೆ ಮಳೆಯ ಪ್ರಯೋಜ್ನ ಆಗೋದು.

ಇನ್ನೊಂದು ಮಳೇಲಿ ನೆನೆಯುತ್ತಾ ಅಳೋದು. ಇದು ನನ್ನ ಫೇವರೆಟ್. ಛತ್ರಿ ನಾಮ್ಕೆ ವಾಸ್ತೆ ಇಟ್ಕೊಳ್ಳೋದು. ದುಪಟ್ಟ ನ ಸ್ಕಾರ್ಫ್ ಹಾಗೆ ಸುತ್ತ್ಕೊಳ್ಳೋದು…ರಸ್ತೆಯ ನೀರಲ್ಲಿ ಟಪ ಟಪ ಕಾಲ್ ಹಾಕೋದು…ಬೇಕಂತಲೇ ಹೈ ಹೀಲ್ಡ್ ಚಪ್ಪಲಿ ಹಾಕಿ ಕಾಲ್ ಉಳುಕಿಸಿಕೊಳ್ಳೋದು…ಛತ್ರಿ ಮುಚ್ಚಿ, ಕಾಲ್ ಎಳೆದುಕೊಂಡು ಕುಂಟುತ್ತಾ ನಡೆಯೋದು. ಅದು ಅಳುವಿಗೆ ಸ್ಟಾರ್ಟಿಂಗ್ ಪಾಯಿಂಟು. ಕುಂಟುತ್ತಾ ಅತ್ಕೊಂಡ್ ಹೋಗ್ತೀವಲ್ಲಾ…ಸಾರ್ಥಕ ಅಳು ಅದು. ಜೀವನದಲ್ಲಿ ನಾವು ತಪ್ಪು ಬೇಕಂತಲೇ ಮಾಡಿರ್ತಿವೋ, ಗೊತ್ತಿಲ್ದೇ ಮಾಡಿರ್ತಿವೋ…ಎಲ್ಲಾ ಆವಾಗ್ಲೆ ನಮ್ಮ ಕೈಕೊಟ್ಟ ಹೀಲ್ಸ್ ಚಪ್ಪಲಿ ರೂಪದಲ್ಲಿ ನೆನಪಾಗ್ತವೆ. ನಮಗರಿವಿಲ್ಲದಂತೆಯೇ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿರುತ್ತೇವೆ.

ಇನ್ನು ನಾಸ್ಟಾಲ್ಜಿಯಾ ಅಳು. ಈ ಅಳುಗೆ ಮನೆಯ ಬಾಲ್ಕನಿ ಸರಿಯಾದ ಜಾಗ. ಬಾಲ್ಕನಿ ಇಲ್ದೇ ಇದ್ದೋರು ಅವರ ರೂಮಿನ ಕಿಟ್ಕಿಗೆ compromise ಮಾಡ್ಕೊಳ್ಳಿ. ಕೈಯಲ್ಲಿ ಒಂದು ಕಪ್ ಕಡಕ್ ಚಹಾ…(ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು) ಹೆಗಲ ಮೇಲೆ ದಪ್ಪ ಕರ್ಚೀಫು.. ಉಯ್ಯಾಲೆಯೋ ಚೇರೋ ನೆಲವೋ..ಯಾವ್ದಾದ್ರು ಸರಿ..ಅದರಮೇಲೆ ಕೂತು… ಹಿಂದೆ ಯಾರೊಂದಿಗೋ ಕುಡಿದ ಕಾಫಿ/ಟೀ/ ಜ್ಯೂಸು ನೆನೆಸಿಕೊಂಡು ಸಂತೋಷಕ್ಕೋ ದುಃಖಕ್ಕೋ ಅಳೋದು…ಇನ್ನು ಆ ಸಮಯ ಬರಲ್ವಲ್ಲಾ…ಅಂತ. ಅಥ್ವಾ…ಇಂಥಾ ಮಳೆಲಿ ಅವನ/ಅವಳ ಜೊತೆ ಬಿಸಿಬಿಸಿಯಾಗಿ ಚಹಾ ಹೀರುತ್ತಾ ಬೆಚ್ಚಗೆ ಇರ್ಬಹುದಿತ್ತು… ನಾ ಹೋಗಲಾರದೇ/ ಅವಳು ಸಿಗಲಾರದೇ/ ಅವ ಕರೆಯದೇ/ ನಾನ್ ಕೇಳದೇ..ಅನ್ಯಾಯ ಮಳೆ ವೇಸ್ಟ್ ಆಗೋಯ್ತಲ್ಲಾ ಅನ್ನೋ ಜಿಗುಪ್ಸೆ…ಮೊಟ್ಟಮೊದಲ ಕ್ರಶ್ಷ್ಹು…ಅವ ಬೇರೆ ಹುಡ್ಗಿ ಗೊತೆ ಹೋದಾಗ ಆದ ಹಾರ್ಟ್ ಬ್ರೇಕು..ಮತ್ತೊಂದಿಷ್ಟು ಬ್ರೇಕಪ್ಪು ಪ್ಯಾಚಪ್ಪುಗಳು…ಪ್ರೊಪೋಸಲ್ , ರಿಜೆಕ್ಷನ್ ಗಳು…ಹ್ಮ್ಮ್ಮ್ಮ್ಮ್…ಇವೆಲ್ಲಾ ನೆನೆಸ್ಕೊಂಡ್ ಚೆನ್ನಾಗಿ ಅತ್ತುಬಿಡಬೇಕು…ಅಮೇಲೆ ತಪ್ಪದೆ ಶುಂಟಿ ಹಾಕಿದ ಚಹಾ ಕುಡಿಬೇಕು. ತಲೆ ನೋವಿದ್ದ್ರೆ  ಮುಂದಿನ ಮಳೆಯಲ್ಲಿ ಅಳಕ್ಕೆ  interest  ಇರಲ್ಲ.

ಹೀಗೆ ಅತ್ತ ಮೇಲೆ ಯಾರಿಗೇನಾಗತ್ತೋ ಬಿಡತ್ತೋ, ನನಗಂತೂ ಒಂಥರಾ ಸಮಾಧಾನ ಆಗತ್ತೆ. ಮನುಷ್ಯರಿಗೆ ನನ್ನ ಮಾತು ಕೇಳುವ ವ್ಯವಧಾನ ಇದ್ಯೋ ಇಲ್ವೊ, ಆ ಪ್ರತ್ಯೊಂದು ಮಳೆಹನಿ ನನ್ನ ಮಾತು ಕೇಳಿಸಿಕೊಂಡ ಹಾಗಾಗತ್ತೆ ನನಗೆ. ಜನ ನನ್ನ ಮಾತನ್ನು ಮುಂದೆ ಹೊಗಳಿ ಹಿಂದೆ ತೆಗಳಬಹುದು…ಆದ್ರೆ ಈ ಮಳೆ ಹನಿಗಳು ನಿಶ್ಕಲ್ಮಷ. ಅವು ಸ್ಪಂದನೆಯ ಮುಖವಾಡ ಹಾಕೊಲ್ಲ, ನಿಜವಾಗಿಯೂ ಸ್ಪಂದಿಸುತ್ತವೆ. ಅವುಗಳ ಸ್ಪರ್ಶದಲ್ಲಿ ಅದೆಂಥದ್ದೋ ಮಮತೆ, ಅದೆಂಥದ್ದೋ ಸಾಂತ್ವನ. ಮನುಷ್ಯರು ತಿಪ್ಪರ್ಲಾಗ ಹಾಕಿದ್ರೂ ಕೊಡಕ್ಕಾಗಲ್ಲ ಇಂಥಾ ಸಂತ್ವಾನ ನ.

ನನಗೆ ಮಳೆಯಲ್ಲಿ ಯಾಕಪ್ಪಾ ಅಳಾಬೇಕು ಅನ್ನಿಸತ್ತೆ ಅಂದ್ರೆ ಮೇಲಿಂದ ಕೆಳಗೆ ಬಿದ್ದು ಒಡೆದರೂ ಮಳೆ ಹನಿ ಮತ್ತೆ ಒಟ್ಟುಗೂಡಿ ಹನಿಯಾಗುತ್ತದೆ. ಇಂಥದ್ದೇ ಜಲಮೂಲಗಳ ಆಸೆಯಿಲ್ಲದೇ ಎಲ್ಲದರಲ್ಲೂ ಒಂದೇ ಭಾವದಿಂದ ಒಡಗೂಡುತ್ತದೆ. ಮಣ್ಣಿಗೆ ಹೋದರೂ ಕೆಳಗೆ ಸೇರಿ ಮುಂದೆ ಬಾವಿಯಾಗುತ್ತದೆ. ಬದುಕಿನ ಹೋರಾಟದಲ್ಲಿ ಕಾದಾಡಿ ಸುಸ್ತಾದವರಿಗೆ ಮಳೆ ಹೋರಾಟ ಮುನ್ನಡೆಸಲು ಸಾಂತ್ವನಪೂರ್ವಕ ಚೈತನ್ಯ ನೀಡುತ್ತದೆ. ಇದನ್ನು ಅನುಭವಿಸಲಿಕ್ಕಾದರೂ ಮಳೆಯಲ್ಲಿ ಅಳಬೇಕು !

ನನ್ನನ್ನು ತುಂಬಾ ಜನ ಕೇಳುವುದುಂಟು..ನೀನು ಜನರ ಹತ್ತಿರ ಹೆಚ್ಚು ಭಾವನಾತ್ಮಕವಾಗಿಲ್ಲ, ಸಖತ್ practical. ಕಡ್ಡಿ ತುಂಡಾದ ಹಾಗೆ ಮಾತಾಡ್ತೀಯ. ಆದ್ರೆ ಪ್ರಕೃತಿಯ ಹತ್ತಿರ ಹೆಚ್ಚು ಭಾವನಾತ್ಮಕವಾಗಿರ್ತಿ…ಯಾಕೆ ಅಂತ. ನಾನನ್ನುವೆ – ”  Earth deserves emotions, world does not ” ಅಂತ. ಇದು ಅರ್ಥವಾಗಬೇಕಿದ್ದರೆ ಒಮ್ಮೆ ಮಳೆಯಲ್ಲಿ ಅಳಬೇಕು !

PS : Quote ನನ್ನದು…ಕಾಪಿರೈಟ್ ಇದೆ ಅದಕ್ಕೆ 🙂

ನವೆಂಬರ್ 19, 2008

ದೇವಹಿತ

Filed under: Short stories — saagari @ 10:57 ಅಪರಾಹ್ನ

ನಾನು ಬರೆದ ಪ್ರಪ್ರಥಮ ಕಥೆಯನ್ನು ಓದುಗ ಬಂಧುಗಳಿಗೆ ಪ್ರಸ್ತುತಪಡಿಸುತ್ತಿದ್ದೇನೆ. ನಿಮ್ಮ ಸಲಹೆ, ಮಾರ್ಗದರ್ಶನ, ಅಭಿಪ್ರಾಯಗಳಿಗೆ ಸ್ವಾಗತ.

” ನೀವು ಈ ಮಗುವಿನ ಆಸೆ ಬಿಟ್ಟುಬಿಡಿ. ಈ ಔಷಧಿಯ ದುಷ್ಪರಿಣಾಮ ಹೇಳಿ ನಾನು ನಿಮ್ಮನ್ನು ಹೆದರಿಸಲಿಚ್ಛಿಸುವುದಿಲ್ಲ.”

ಭಯಗ್ರಸ್ಥ ತಂದೆತಾಯಿಗಳಿಗೆ ಡಾಕ್ಟರ್ ಹೀಗೆ ಹೇಳಿಬಿಟ್ಟರು. ಬೇರೊಬ್ಬ ವೈದ್ಯ  ಮಾಡಿದ ತಪ್ಪಿಗೆ ಮಗುವೊಂದನ್ನು ಬಯಸಿದ ನವವಿವಾಹಿತ ದಂಪತಿಗಳು, ಜೀವ ಪಡೆದುಕೊಳ್ಳಲು ಹವಣಿಸುತ್ತಿದ್ದ ಪುಟ್ಟಮಗುವೊಂದು, ಒಟ್ಟು ಮೂರು ನಿಶ್ಪಾಪಿ ಜೀವಗಳು ಶಿಕ್ಷೆಯನುಭವಿಸುತ್ತಿದ್ದವು.

ಡಾಕ್ಟರ್ ಮಾತು ಕೇಳಿದ ತಕ್ಷಣ ತಾಯಿ ಬಿಕ್ಕಿ ಬಿಕ್ಕಿ ಅತ್ತಳು. ಮೊದಲನೆಯ ಮಗುವದು. ಹೇಗೆ ಕಳೆದುಕೊಳ್ಳಲಾಗುತ್ತದೆ ?  ವಿಚಿತ್ರ ರೀತಿಯ ಉದರಬೇನೆಯೆಂದು ಡಾಕ್ಟರ್ ಬಳಿ ಹೋದರೆ ಡಾಕ್ಟರ್ ಅಪ್ಪೆಂಡಿಸೈಟಿಸ್ ಎಂದು ಯಾವುದೋ ಒಂದು ಮಾತ್ರೆ ಕೊಟ್ಟು ಆಪರೇಷನ್ನಿಗೆ ತಾರೀಖೂ ಗೊತ್ತು ಮಾಡಿ ಪ್ರೀ ಆಪರೇಟಿವ್ ಚಿಕಿತ್ಸೆಯೆಂದು ಮಾತ್ರೆಗಳ ಗಂಟನ್ನೇ ಕೊಟ್ಟರು. ಸ್ಕಾನಿಂಗ್ ಹೊಸದು ಆಗ, ದುಬಾರಿಯೂ ಸಹ. ಆದರೂ, ಸೆಕೆಂಡ್ ಒಪಿನಿಯನ್   ತೆಗೆದುಕೊಳ್ಳಬೇಕೆಂದು ಹಿರಿಯರೊಬ್ಬರು ಸಲಹೆ ನೀಡಿದ್ದು ಸಿಹಿಸುದ್ದಿ ತಂದಿದ್ದರೂ ಅದರಲ್ಲಿ ಕಹಿಯ ಪಾಲೇ ಹೆಚ್ಚಿತ್ತು.

ಅಳುತ್ತಿದ್ದ ತಾಯಿಗೆ ಅದೇಕೋ ಥಟ್ಟನೆ ವಿಚಿತ್ರ ಧೈರ್ಯ ಬಂದಿತು. ಡಾಕ್ಟರು ಅಬಾರ್ಷನ್ ಗೆ ಸೂಚಿಸಬಹುದೆಂದು ಆಕೆ ಎಣಿಸಿದಳು. ಮದುವೆಯಾಗಿ ಆರು ತಿಂಗಳು ಕಳೆದಿದ್ದವಷ್ಟೆ. ಜೀವನವೇನೂ ಮುಗಿದುಹೋಗಿರಲಿಲ್ಲ. ಮಗುವಿನ ಆಸೆ ಬಿಟ್ಟುಬಿಡಿ ಎಂದು ಪೀಠಿಕೆ ಹಾಕಿದ್ದು ಈ ಅನುಮಾನಕ್ಕೆ ಎಡೆಯಾಯ್ತು, ಮನಸ್ಸಿಗೆ ಬಹಳ ನೋವಾಗಿದ್ದರೂ, ನಿಧಾನವಾಗಿ ಸಾವರಿಸಿಕೊಳ್ಳುತ್ತಾ, ” ಡಾಕ್ಟರ್, ಒಂದು ಸ್ಕಾನಿಂಗ್ ಮಾಡಿ ಮಗು ಬದುಕಿದೆಯೋ ಇಲ್ಲವೋ ನೋಡಬಹುದಲ್ಲವೇ ?” ತಾಯಿಯ ಕರುಳನ್ನು ಅರಿತ ಡಾಕ್ಟರ್, “ನೋಡಿ ಮಾ, ಮಗು ಬದುಕಿದ್ದರೆ ನಮಗೆ ಬಹಳ ಸಂತೋಷ, ಆದರೆ ಆ ಮಗು ಭೂಮಿಗೆ ಬಂದರೆ ನಿಮಗೆ ಸಂತೋಷ ಹೆಚ್ಚುತ್ತೆ ಎಂದು ನಾನು ಖಂಡಿತಾ ಆಶ್ವಾಸನೆ ಕೊಡಲಾರೆ ” ಎಂದರು.

ತಾಯಿ ಸ್ವಲ್ಪ ಧೈರ್ಯ ಮಾಡಿ, ” ಡಾಕ್ಟರ್, ಈ ಔಷಧದ ಪರಿಣಾಮ ಏನಾಗತ್ತೋ ಹೇಳಿಬಿಡಿ. ನಾವು ಮನಸ್ಸು ಗಟ್ಟಿ ಮಾಡಿಕೊಂಡು ದೇವರ ಮೇಲೆ ಭಾರ ಹಾಕುತ್ತೇವೆ. ಕೊಡುವವನೂ ಅವನೇ, ಕಿತ್ತುಕೊಳ್ಳುವವನೂ ಅವನೇ ! ಅವನಾಟ ನಡೆಯಲಿ. ನಮ್ಮದೂ ಪ್ರಯತ್ನ ಮಾಡಿ ನೋಡಿಯೇ ಬಿಡುವ.ಆದರೆ ನಾನು ಅಬಾರ್ಷನ್ ಗೆ ತಯಾರಿಲ್ಲ. ಇದನ್ನು ದೇವರು ಮೆಚ್ಚುವುದಿಲ್ಲ”

ತಂದೆಯೂ ಕೂಡಾ ಒಂದು ಹತಾಶ ನೋಟ ಬೀರಿದರು.

ಡಾಕ್ಟರ್ ನಿಟ್ಟುಸಿರು ಬಿಟ್ಟು ” ನೋಡಿ, ಈ ಔಷಧದಿಂದ ಮೂರು ದುಷ್ಪರಿಣಾಮಗಳು ಆಗುವ ಸಾಧ್ಯತೆಯಿದೆ. ಒಂದು – ಮಗು ಈಗಾಗಲೇ ಸತ್ತಿರಬಹುದು. ಎರಡು- ಈ ಮಗುವಿನ ದೇಹ ಚೆನ್ನಾಗಿ ಬೆಳೆದು ಬುದ್ಧಿ ಮಂದವಾಗಿರಬಹುದು. ನೀವೇನೆ ಮಾಡಿದರೂ ಇನ್ನು ಸರಿಪಡಿಸಲಾಗುವುದಿಲ್ಲ. ಮೂರು, ಬುಧ್ಧಿ ಅತೀ ಚುರುಕಾಗಿದ್ದು, ಕೈಯ್ಯೋ ಕಾಲೋ ಇಲ್ಲದಿರುವ, ಅಥವ ಊನವಾಗಿರುವ ಮಗು ಹುಟ್ಟಬಹುದು. ನೀವು ನಂಬಿದ ದೇವರು ನಿಮ್ಮ ಪಾಲಿಗಿದ್ದರೆ, ಏನೂ ಆಗದೆಯೂ ಇರಬಹುದು. ”

ಬಹುದುಗಳಲ್ಲಿ ಇವರಿಬ್ಬರ ಬದುಕು ಬಸವಳಿದುಹೋಗಿತ್ತು. ತಾಯಿ ಒಂದು ನಿಮಿಷ ಹಾಗೆಯೇ ದಿಗ್ಭ್ರಾಂತಳಾದಳು. ತಂದೆಗೂ ಏನೂ ಮಾತಾಡಲು ತೋಚಲಿಲ್ಲ. ಇವರಿಬ್ಬರೂ ಮನೆದೇವರು ಕುಲದೇವತೆಗಳಿಗೆ ಹರಕೆ ಹೊತ್ತರು. ಮರುಕ್ಷಣವೇ ಸ್ಕಾನಿಂಗ್ ಮಾಡಿಸಿಬಿಡೋಣವೆಂದು ನಿಶ್ಚಯಿಸಿದರು.

ಸ್ಕಾನಿಂಗ್ ನಲ್ಲಿ ಮಗು ಬದುಕಿರುವುದು ತಿಳಿದುಬಂತು. ದೇವರು ಅವರನ್ನು ಕಾಪಾಡಿದ್ದ. ಆದರೆ ಇನ್ನೆರಡು ಸಾಧ್ಯತೆಗಳನ್ನು ನೆನೆಸಿಕೊಂಡು ಒಂಭತ್ತು ತಿಂಗಳನ್ನು ಒಂಭತ್ತು ಯುಗದಂತೆ ಕಳೆದರು. ಮದ್ಯರಾತ್ರಿಯಲ್ಲಿ ಹೆಣ್ಣು ಮಗುವೊಂದು ಜಗತ್ತು ಎಷ್ಟು ಸುಂದರವಾಗಿದೆ, ನೋಡಿಯೇಬಿಡೋಣವೆಂದು ಭೂಮಿಗೆ ಬಂದಿತು.

ಮಗು ಚುರುಕಾಗಿತ್ತು. ಬುದ್ಧಿಮಾಂದ್ಯವಾಗಿರಲಿಲ್ಲ. ಆದರೆ ಅದರ ಬೆಳವಣಿಗೆಯ ಬಗ್ಗೆ ಡಾಕ್ಟರು ಧೈರ್ಯಕೊಡಲಿಲ್ಲ. ಹೆಣ್ಣೆಂದು ಹಳಗಳಿಯದೇ ಹರನ ಹಸಾದವೆಂದು ಎದೆಗೊತ್ತಿ ಮುದ್ದಿಸಿದರು. ಡಾಕ್ಟರ ಊಹೆ ತಪ್ಪಾಗಿ ಬೆಳವಣಿಗೆ ಸಹಜವಾಗೇ ಇತ್ತು. ಆದರೆ, ಮಗುವಿನ ಬಣ್ಣ ಬೆಳ್ಳಗಿದ್ದದ್ದು ಬೆಳೆಯುತ್ತ ಕಪ್ಪಾಗುತ್ತಾ ಹೋಯಿತು. ಇನ್ನೇನಾದರೂ ಚರ್ಮರೋಗವಿರಬಹುದೆಂದು ಮತ್ತೆ ವೈದ್ಯರ ಬಳಿಗೆ ಹೋದಾಗ ಔಷಧವು ತನ್ನ ಕರಾಳಛಾಯೆಯನ್ನು ಬೀರಿಯಾಗಿದೆಯೆಂದು, ಪುಣ್ಯಕ್ಕೆ ಬೇರಾವ ಚರ್ಮರೋಗಕ್ಕೂ ಎಣೆಮಾಡಿಕೊಟ್ಟಿಲ್ಲ, ಬೆಳವಣಿಗೆಯಲ್ಲಿ ಏನೂ ತೊಂದರೆಯಿಲ್ಲ ಎಂದು ಹೇಳಿ ಧೈರ್ಯ ಹೇಳಿ ಕಳಿಸಿದರು. ಏನೇನೋ ಆಗಬೇಕಿದ್ದಿದ್ದು ಇಷ್ಟರಲ್ಲೇ ಮುಗಿಯಿತಲ್ಲ ಎಂದು ಮನೆದೇವರ ಹರಕೆ ತೀರಿಸಿ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದರು.

ಆ ಮಗುವಿಗೆ ಹರಿಣಿ ಎಂದು ಹೆಸರಿಟ್ಟರು. ಮಗು ಸಾಕ್ಷಾತ್ ಹರಿಣವೇ ! ಜಿಂಕೆಯಂಥಾ ಕಣ್ಣು, ಅದರಷ್ಟೆ ವೇಗದ ಓಡಾಟ.ಅರಳು ಹುರಿದಂತೆ ಮಾತು.  ಕಡಿದಿಟ್ಟ ಕಪ್ಪು ಶಿಲೆಯಂತೆ ರೂಪು. ಹರಿಣಿ ಎಲ್ಲರ ಕಣ್ಮಣಿಯಾಗಿ ವರ್ಷಗಳಿಗೆ ಜೀವ ತುಂಬುತ್ತಾ ಬೆಳೆದಳು.

ಹರಿಣಿಯ ಸ್ವಭಾವ ಜಿಂಕೆಯಷ್ಟೇ ಸಾಧು. ಎಲ್ಲವನ್ನು ಅವಳ ಕಣ್ಣೇ ಮಾತಾಡುತ್ತಿದ್ದವೇ ಹೊರತು ಅವಳು ಬಾಯಿ ಬಿಟ್ಟು ಅನಿಸಿಕೆಗಳನ್ನು ಹೇಳಿಕೊಂಡಿದ್ದು ಕಡಿಮೆ. ಹವ್ಯಾಸವಾಗಿ ಲೇಖನಿ ಹಿಡಿದಳು, ಕವನಗಳು ಹಾಳೆಗಳಲ್ಲಿ ನಲಿದಾಡಿದವು. ಅವಳು ಬರೆಯುತ್ತಿದ್ದ ಕಥೆಗಳ ಪಾತ್ರಗಳು ಸತ್ಯವೆಂಬಂತೆ ಭಾಸವಾಗುತ್ತಿದ್ದವು. ಒಮ್ಮೆ ಸುಮ್ಮನೇ ಕುಂಚ ಹಿಡಿದಳು…ಪ್ರಪಂಚ ಅವಳಿಗೆ ಇನ್ನಷ್ಟು ಸುಂದರವಾಗಿ, ಕಾವ್ಯಮಯವಾಗಿ ಕಂಡು ಆಕಾಶವೇ ಅವಳ ಚಿತ್ರಪಟ, ಕಾಮನಬಿಲ್ಲೇ ಬಣ್ಣದಾಗರವಾಯಿತು. ಈ ಕಲೆಯನ್ನ ಗುರುತಿಸಿದ ಹರಿಣಿಯ ತಂದೆತಾಯಿಗಳು ಅವಳನ್ನು ಚಿತ್ರಕಲಾ ಶಾಲೆಗೆ ಸೇರಿಸಿದರು. ಫೈನ್ ಆರ್ಟ್ಸ್ ನಲ್ಲಿ ಅಪ್ರತಿಮ ಸಾಧನೆಗಳನ್ನು ಹರಿಣಿ  ಮಾಡುತ್ತಿದ್ದಳು. ಕಲಾಸರಸ್ವತಿ ಅವಳಿಗೆ ಸಂಪೂರ್ಣವಾಗಿ ಒಲಿದಂತಿತ್ತು.

ಬಣ್ಣದ ಚಿತ್ತಾರವನ್ನು ಒಂದು ಕಪ್ಪುಮಸಿ ನುಂಗಿದಂತೆ, ಅವರ ಗೆಳತಿಯರೆಲ್ಲ ಇವಳು ಕಪ್ಪೆಂದು ಕೀಳಾಗಿ ಕಾಣುತ್ತಿದ್ದರು ! ಬಂಧುಗಳೂ ತಮ್ಮ ನಾಲಿಗೆಯನ್ನು ಸಾಕಷ್ಟು ಉದ್ದವೇ ಚಾಚಿದ್ದರು. ಆದರೆ ಹರಿಣಿ ಅವಳ ಹುಟ್ಟಿನ ಹಿಂದಿನ ಕಥೆಯನ್ನು ಯಾರಿಗೂ ಹೇಳಬಾರದೆಂದು ಕುಲಗುರುಗಳ ಫೋಟೋ ಎದುರು ಭಾಷೆತೆಗೆದುಕೊಂಡಿದ್ದಳು. ಅವಳಿಗೆ ಅನುಕಂಪದ ಅವಶ್ಯಕತೆ ಇರಲಿಲ್ಲ. ಸ್ವಭಾವ ಜಿಂಕೆಯದ್ದಾದರೂ ಸ್ವಾಭಿಮಾನ ಸಿಂಹದಂಥದ್ದು. ಅವಳು ಯಾರನ್ನೂ ಅವಲಂಬಿಸಿ ಬದುಕುತ್ತಿರಲಿಲ್ಲ…ಬಹಳ ಸ್ವಾವಲಂಬಿ. ಇಷ್ಟಕ್ಕೂ, ಬಣ್ಣ ಕಪ್ಪು ತಾನೆ ? ಇನ್ನೇನೂ ಇಲ್ಲವಲ್ಲ ! ಎಂದು ಅವಳೂ ವಿಷಯವನ್ನು ಅಷ್ಟೊಂದು ಹಚ್ಚಿಕೊಂಡಿರಲಿಲ್ಲ. ಬಂಧುಗಳ ಬಗ್ಗೆ ಕೆಲವೊಮ್ಮೆ ಕೋಪಬರುತ್ತಿತ್ತಾದರೂ ಅವಳಿಗೆ ಸಹನೆ ಸ್ವಲ್ಪ ಜಾಸ್ತಿಯೇ ಇತ್ತು. ಆದ್ದರಿಂದ ಅವಳ ಕೋಪದ ಕಟ್ಟೆ ಒಡೆದು ಅವಳು ಕೂಗಾಡಿ ಇಷ್ಟು ವರ್ಷ ಅವಳ ತಂದೆ ತಾಯಿ ಧಾರೆ ಎರೆದ ಸಂಸ್ಕಾರವನ್ನು ವ್ಯರ್ಥ ಮಾಡಲಿಚ್ಛಿಸದೇ ಮೌನವಾಗಿಯೇ ಎಲ್ಲ ಕುಹಕಗಳನ್ನು ಸಹಿಸುತ್ತಿದ್ದಳು. ಕಣ್ಣು ತುಂಬಿ ಬಂದರೂ ಅದನ್ನು ಕಾಣಗೊಡದೇ ಜಿಂಕೆ ಕಣ್ಣಿನ ಮುಗ್ಧನೋಟದಲ್ಲಿ ಎಲ್ಲ ನೋವನ್ನು ಕಾಣದಂತೆ ಅಡಗಿಸಿಟ್ಟಿದ್ದಳು. ಡಿಗ್ರಿಯ ಎರಡನೆಯ ವರ್ಷದವರೆಗು…..

ಅದೊಂದು ದಿನ ಸಾಯಂಕಾಲ ಎಂದಿನಂತೆ ತನ್ನ ಕ್ಯಾನ್ವಾಸು, ಹೊಸದೊಂದು ಚಿತ್ರ, ಪಾಲೆಟ್ಟ್ ಹೊತ್ತು ಬಣ್ಣಗೂಡಿದ್ದ ಕೈಗಳೊಂದಿಗೆ ಹರಿಣಿ ಮನೆಗೆ ಬಂದಳು. ಕಾಲಿಟ್ಟ ಕೂಡಲೇ ” ಭದ್ರಂ ಕರ್ಣೇಭಿಃ  ಶೃಣುಯಾಮ ದೇವಾಃ” ಶ್ಲೋಕ ಕೇಳಿಸಿತು. ತಕ್ಷಣ ಅವಳು ” ಭದ್ರ ಅಂಕಲ್ ” ಎಂದು ಕೂಗುತ್ತಲೇ ದೇವರಮನೆಯ ಕಡೆ ನೋಡಿದಳು.  ಆಗಷ್ಟೇ ಪೂಜೆ ಮುಗಿಸಿ ಈ ಶ್ಲೋಕವನ್ನು ಹೇಳುತ್ತಿದ್ದರು ಅನಂತರಾಮಯ್ಯ. ಆದರೆ ಹರಿಣಿಗೆ ಮಾತ್ರ ಇವರು ಭದ್ರ ಅಂಕಲ್ ಅಂತಲೇ ಪರಿಚಯ. ಭದ್ರಾವತಿಯಲ್ಲಿ ನೆಲೆಸಿದ್ದ ಇವರಿಗೆ ಭದ್ರ ಅಂಕಲ್ ಅಂತಲೇ ಹೆಸರಿಟ್ಟಿದ್ದಳು ಇವಳು. ಪ್ರತಿ ಬೇಸಿಗೆಯ ರಜೆಯಲ್ಲಿ ಭದ್ರಾವತಿಗೆ ಹೋಗದೇ ಇರುತ್ತಿರಲಿಲ್ಲ ಇವಳು. ಭದ್ರಾವತಿಯಿಂದ ಖುದ್ದು ಅಂಕಲ್ಲೇ ಬಂದಿದ್ದು ಇವಳಿಗೆ ಅತೀವ ಸಂತೋಷ ತಂದಿತ್ತು. ಅಂಕಲ್ ಪೂಜೆ ಮುಗಿಸಿಬಂದ ಮೇಲೆ ಹರಿಣಿಯನ್ನು ನೋಡಿ ” ಏನಮ್ಮಾ…ಕಾಗೆಬಂಗಾರ ? ಹೇಗಿದ್ದೀಯಾ ? ಮೈಕೈ ಎಲ್ಲ ಬಣ್ಣ ಮಾಡಿಕೊಂಡಿದ್ದೀಯಾ ? ಬಿಡು ಕಪ್ಪು ಬಣ್ಣದ ಮೇಲೆ ಇವೆಲ್ಲ ಎಲ್ಲಿ ಕಾಣತ್ತೆ ! ಬಣ್ಣ ಬಳಿದರೂ ಅಷ್ಟೇ, ಬಿಟ್ಟರೂ ಅಷ್ಟೇ ! ” ಎಂದು ನಕ್ಕರು.

ತಾಳ್ಮೆಯ ಅಣೆಕಟ್ಟನೊಡೆದು ಭೋರ್ಗರೆಯಲು ಹಾತೊರಯುತ್ತಿದ್ದ ಕೋಪವನ್ನು ಹರಿಣಿ ಹಾಗೆಯೇ ಮತ್ತೆ ಒಳಗೆ ತಳ್ಳಿದಳು. ಮುಗ್ಧ ನಗೆ ನಕ್ಕಳು.

ಭದ್ರ ಅಂಕಲ್ ಅಷ್ಟಕ್ಕೇ ನಿಲ್ಲಿಸುವ ಹಾಗೆ ಕಾಣಲಿಲ್ಲ. ” ಅಮ್ಮ ಶಾರದಾಂಬ, ನಿಮ್ಮ ಮಗಳಿಗೆ ಬೆಣ್ಣೆ ಹಚ್ಚಿ ಸ್ವಲ್ಪ, ಆಗ್ಲಾದ್ರೂ ಬೆಳ್ಳಗೆ ಆಗಬಹುದು.  ನಾನೇ ಬೆಣ್ಣೆ ಕಳಿಸ್ತೀನಿ ಬೇಕಿದ್ರೆ…ಬೆಂಗಳೂರಿನಲ್ಲಿ ಬೆಣ್ಣೆ ದುಬಾರಿ ಅಲ್ಲವೇ ? ನಿಮಗೆ ತೂಗಿಸಲು ಸಾಧ್ಯವಾಗತ್ತೋ ಇಲ್ವೋ !”

ಶಾರದಾಂಬಾ ಹಾಗೇ ಪಾತ್ರೆಯನ್ನು ಅಡಿಗೆಮನೆಯಲ್ಲಿ ಕುಕ್ಕಿ, ಒಮ್ಮೆ ನಕ್ಕರು. ಅವರಿಗೂ ಒಳಒಳಗೇ ಕೋಪ ಕುದಿಯುತ್ತಿತ್ತು. ಇನ್ನು ತಾನಲ್ಲಿದ್ದರೆ ಇನ್ನೂ ವ್ಯಂಗ್ಯವಾಡಬಹುದೆಂದು ಊಹಿಸಿದ  ಹರಿಣಿ, ಸ್ನೇಹಿತರ ಮನೆಗೆ ಹೋಗುವ ನೆಪದಲ್ಲಿ ಮನೆಯಿಂದ ಕಾಲ್ಕಿತ್ತಳು . ಪಾರ್ಕಲ್ಲಿ ಬಿಕ್ಕಿ ಬಿಕ್ಕಿ ಅತ್ತು, ಕಾಂಜಿಯ ನೀರಲ್ಲಿ ಮುಖ ತೊಳೆದು, ದಣಿದವಳಂತೆ ಮುಖ ಮಾಡಿಕೊಂಡು ಮನೆ ತಲುಪಿದರೆ ಭದ್ರ ಅಂಕಲ್ ಅವಳ ತಂದೆಯೊಂದಿಗೆ ಗಂಭೀರ ಚರ್ಚೆಯಲ್ಲಿ ನಿರತರಾಗಿದ್ದರು.

” ನೋಡೊ ಸದಾಶಿವ, ನೀನು ಹರಿಣಿಯನ್ನು ಬೆಳೆಸಲು ಎಷ್ಟು ಕಷ್ಟ ಪಟ್ಟಿದ್ಯಾ ಅಂತ ಗೊತ್ತು ಕಣೋ…ಆದ್ರೆ ಎಲ್ಲಾ ನೀರಲ್ಲಿ ಹೋಮ ಆಗೋಯ್ತಲ್ಲೋ, ಹುಡುಗಿ ಎಷ್ಟೋ ಕಪ್ಪೋ ! ಯಾರೋ ಮದುವೆ ಆಗ್ತಾರೆ ಇವ್ಳನ್ನ ? ಹೋಗ್ಲಿ, ತನ್ನ ಕಾಲ ಮೇಲೆ ತಾನೇ ನಿಂತುಕೊಳ್ಳೋ ಹಾಗೆ ಓದ್ಸಾದ್ರೂ ಓದ್ಸಿದ್ದ್ಯೇನೋ ? ಅವ್ಳು ಕಲೆ ಕಲೆ ಅಂತ ಕುಣಿದ್ಲಂತೆ, ಇವ್ನೂ ಅವಳ ತಾಳಕ್ಕೆ ಮೇಳ ಸೇರ್ಸಿದ್ದ್ನಂತೆ. ಆಡೊ ಅಂಥಾ ಮಾತೆನೋ ಇದು ? ನ್ಯಾಯವಾಗಿ ಡಾಕ್ಟರ್ರೋ ಎಂಜಿನಿಯರ್ರೋ ಮಾಡ್ಸೋದಲ್ವೇನೊ ? ಕಲೇಲಿ ಸಾಧನೆ ಮಾಡು ಅಂತ ಬಿಟ್ಟಿದಾನೆ. ಅವ್ಳೂ ಬ್ರಶ್ಶು ಕ್ಯಾನ್ವಾಸು ಇಟ್ಕೋಂಡ್ ಅಲಿತಿರ್ತಾಳೆ. ಮದ್ವೆ ಮಾಡಿ ಮನೇಲಿ ಬಿದ್ದಿರ್ಲಿ ನಾಕ್ ಗೋಡೆ ಮಧ್ಯ ಅಂದ್ರೆ ನೆಟ್ಟಗೆ ಮನೆ ಕೆಲ್ಸ ನೂ ಬರಲ್ಲ ಇವಳಿಗೆ ಅನ್ಸತ್ತೆ ನಂಗೆ. ಇಂಥಾ ಮಗಳು ಹುಟ್ಟುತ್ತಾಳೆ ಅಂತ ಮೊದ್ಲೆ ಗೊತ್ತಾಗಿದ್ದಿದ್ದ್ರೆ ನಿಂಗೆ ಎಷ್ಟೋ ಚೆನ್ನಾಗಿರ್ತಿತ್ತು. ಇಂಥವರು ಭೂಮಿಗೆ ಭಾರ ಕಣೋ. ಹೀಗಾಗತ್ತೆ ಅಂತ ಗೊತ್ತಿದ್ದಿದ್ದ್ರೆ ಮಗು ಬೇಡಾ ಅಂತಲೇ ಅನ್ನಬಹುದಿತ್ತಲ್ಲವೇನೋ ? ಮದ್ವೆ ಮಾಡಿರೂ ಅವ್ಳು ಸುಖವಾಗಿರಲ್ಲ ನೋಡು , ನಾನ್ ಬರ್ಕೊಡ್ತಿನಿ . ಸುಮ್ನೆ ಸನ್ಯಾಸಕ್ಕೆ ಅಟ್ಟಬೇಕಷ್ಟೆ….ನಿನಗೆ ಹೀಗಾಗಬಾರದಿತ್ತೋ ಸದಾ…”

ಸದಾಶಿವರಾಯರಿಗೆ ಮಾತಾಡಲು ಅವಕಾಶ ಕೊಡದೆ, ಬಿಕ್ಕುತ್ತಿದ್ದ ಶಾರದಾಂಬ ಅವರ ಮುಖವನ್ನು ಒಮ್ಮೆಯೂ ನೋಡದೇ ಭದ್ರ ಅಂಕಲ್ ಹೀಗೇ ಬಡಬಡಿಸುತ್ತಿದ್ದರು. ಈ ಬಡಬಡಿಕೆಯಲ್ಲಿ ಹರಿಣಿ ಬಂದದ್ದೂ ಅವರಿಗೆ ಕಾಣಿಸಲಿಲ್ಲ. ಹರಿಣಿ ಸಹನೆಯ ಕಟ್ಟೆ ಒಡೆದು ಹೋಯ್ತು. ಜೋರಾಗಿ ಬಿಕ್ಕಿದ್ದೇ ಒಮ್ಮೆಯೇ ಕೋಣೆ ಸೇರಿ ಬಾಗಿಲು ಭದ್ರಪಡಿಸಿದಳು. ಸದಶಿವರಾಯ ದಂಪತಿಗಳಿಗೆ ಒಮ್ಮೆಲೇ ದಿಗಿಲಾಯ್ತು. ಭದ್ರ ಅಂಕಲ್ ಗೂ ತಾವು ಆಡಿದ ಮಾತು ಮಿತಿ ಮೀರಿತೆಂದು ಆಗ ಅರಿವಾಯ್ತು. ಎಷ್ಟು ಬಾಗಿಲು ಬಡಿದರೂ ಹರಿಣಿ ಬಾಗಿಲು ತೆರೆಯಲೇ ಇಲ್ಲ. ಶಾರದಾಂಬಾ ಆಘಾತವನ್ನು ತಡೆಯಲಾಗದೇ ಪ್ರಜ್ಞೆ ತಪ್ಪಿ ಬಿದ್ದರು. ಸದಶಿವರಾಯರು ಕೋಪದಲ್ಲಿ ಅನಂತರಾಮಯ್ಯರನ್ನು ಆ ಕ್ಷಣವೇ ಮನೆ ಬಿಟ್ಟು ಹೋಗಬೇಕೆಂದು ಕಟುವಾಗಿಯೇ ಹೇಳಿದರು. ಆದರೆ ಅನಂತರಾಮಯ್ಯ ತನ್ನದು ತಪ್ಪಾಯ್ತೆಂದು, ಹರಿಣಿಗೆ ಏನಾದರೂ ಅದಕ್ಕೆ ತಾನೆ ಹೊಣೆಯೆಂದು, ಏನೂ ಆಗದಂತೆ ನಾನು ನೋಡಿಕೊಳ್ಳುವೆನೆಂದು ಸದಾಶಿವರಾಯರನ್ನು ಸಮಾಧಾನಗೊಳಿಸಿ ಡಾಕ್ಟರಿಗೆ ಫೋನ್ ಮಾಡಿದರು.

ಹೊರಗೆ ನಡೆಯುತ್ತಿರುವ ವಿಪ್ಲವ ಹರಿಣಿಗೊಂದೂ ತಿಳಿಯದಾಯ್ತು. ಅವಳ ಮನಸ್ಸು ಆಗಲೇ ಛಿದ್ರವಾಗಿಹೋಗಿತ್ತು. ಬಾಲ್ಯದಿಂದ ಹಿಡಿದು ಈವರೆಗಿನ ಅನೇಕ ಘಟನೆಗಳು ಅವಳ ಕಣ್ಮುಂದೆ ಹಾಗೇ ಹಾದು ಹೋಗುತ್ತಿದ್ದವು.ಅವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದು, ಅವಳ ತಂದೆ ತಾಯಿ ಅವಳಿಗೆ ಆತ್ಮಸ್ಥೈರ್ಯ ತುಂಬಲು ಹೆಣಗಾಡಿದ್ದು… ಎಲ್ಲ. ಅವರ ತಂದೆ ತಾಯಿ ಅವಳಿಗೆ ಅವಳ ಎಲ್ಲ ಕೆಲಸಗಳಿಗೆ ನೀಡುತ್ತಿದ್ದ ಉತ್ತೇಜನ ಒಂದೇ ಅವಳ ಆಸರೆ ಆಗಿತ್ತು. ಆದರೆ ಇವತ್ತು ಭದ್ರ ಅಂಕಲ್ ತಂದೆ ತಾಯಿಯ ಉತ್ಸಾಹವನ್ನೇ ಉಡುಗಿಸುವ ಪ್ರಯತ್ನ ಮಾಡಿದ್ದರು. ಅವಳಿಗೆ ಅದೇ ಬೇಜಾರು ತಂದಿತ್ತು. ಅವಳು ಜಗಳಕ್ಕೆ ನಿಲ್ಲಲು ಸಂಸ್ಕಾರ ಅಡ್ಡಬರುತ್ತಿತ್ತು, ಜಗಳವಾಡದೇ ಇರಲು ಮನಸ್ಸು ನಿರಾಕರಿಸುತ್ತಿತ್ತು. ಅವಳು  ತಂದೆ ತಾಯಿಗೆ ನೋಯಿಸದೇ, ಭದ್ರ ಅಂಕಲ್ ಗೆ ಪಾಠ ಕಲಿಸಲು ದಾರಿಗಾಣದೇ ಒದ್ದಾಡುತ್ತಿದ್ದಳು.

ಆಗ ಅವಳಿಗೆ ಒಂದು ದಾರಿ ತೋರಿತು. ಸ್ಟಡಿ ಟೇಬಲ್ ಕಡೆ ಹೆಜ್ಜೆ ಹಾಕಿದಳು…

****************************

ಡಾಕ್ಟರ್ ಬಂದು ಶಾರದಮ್ಮನವರಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಸದಾಶಿವರಾಯರಿಗೆ ಹೇಳಿ, ಔಷಧ ಕೊಟ್ಟು ಬೆಳಕು ಹರಿದೊಡನೆ ಪರಿಸ್ಥಿತಿಯನ್ನು ನೋಡಿ ಆಸ್ಪತ್ರೆಗೆ ಬನ್ನಿ ಎಂದು ಹೇಳಿದ್ದರು. ಸೂರ್ಯನ ಕಿರಣಗಳು ಕಿಟಕಿ ಮೂಲಕ ಬಂದು ಎಬ್ಬಿಸುವವರೆಗೂ ಮಂಚದ ಪಕ್ಕ ಕುರ್ಚಿಯಲ್ಲಿ ತೂಕಡಿಸಿದ್ದ ಸದಾಶಿವರಾಯರಿಗಾಗಲೀ, ಹಾಲಲ್ಲಿ ಚಾಪೆ ದಿಂಬಿನ ಆಸರೆಯಿಲ್ಲದೇ, ಹೊದಿಕೆಯ ನೆರವಿಲ್ಲದೇ ಮಲಗಿದ್ದ ಭದ್ರ ಅಂಕಲ್ಲಿಗಾಗಿ ಎಚ್ಚರವೇ ಇರಲಿಲ್ಲ. ಶಾರದಾಂಬಾ ಔಷಧಿಯ ಪರಿಣಾಮವೆಂಬಂತೆ ಇನ್ನು ಕಣ್ಣು ಬಿಟ್ಟಿರಲಿಲ್ಲ. ಮೊದಲು ಎದ್ದದ್ದು ರಾಯರು. ಮಲಗಿರುವ ಪತ್ನಿಯತ್ತ ಒಮ್ಮೆ ಪ್ರೇಮಪೂರ್ಣ ನೋಟ ಬೀರಿದರು. ” ನೀನನ್ನ ಬಿಟ್ಟು ಹೋದರೆ ನನ್ನಗತಿಯೇನು, ನಾವಿಬ್ಬರೂ ಕಳೆದ ಇಪ್ಪತ್ತು ವರ್ಷದಿಂದ ಸುಖ ದುಃಖಗಳಲ್ಲಿ ಜೊತೆಯಾಗಿದ್ದೀವಲ್ಲ, ನೀನೋಬ್ಳೆ ಮೊದಲು ಸ್ವರ್ಗಕ್ಕೆ ಹೋಗಬೇಕೆಂಬ ಸ್ವಾರ್ಥ ಯಾತಕ್ಕೆ ? ನಾನು ಬರುತ್ತೇನೆ ಇರು …. ” ಎಂಬು ಬೇಡಿಕೊಳ್ಳುವಂತಿತ್ತು ಆ ನೋಟ. ಥಟ್ಟನೆ ಅವರಿಗೆ ಹರಿಣಿಯ ನೆನಪಾಯ್ತು. ನೆನೆಯುವುದಾದರೇ ಕೆಟ್ಟದ್ದನ್ನೇ ಮೊದಲು ನೆನೆಯಬೇಕೆಂದು ಮನಸ್ಸಿನ ಅಲಿಖಿತ ನಿಯಮವೇನೋ ! ಹರಣಿಯ ಸ್ಥಿತಿಯೇನೆಂದು ರಾಯರು ಊಹಿಸಿ, ಅವಳು ನಮ್ಮನ್ನು  ಬಿಟ್ಟು ಹೊರಟೇ ಹೋಗಿದ್ದಾಳೆ ಎಂಬ ಊಹಾಸೌಧವನ್ನು ಕಟ್ಟಲು ಅವರಿಗೆ ಹೆಚ್ಚು ಸಮಯ ಬೇಕಿರಲಿಲ್ಲ. ಶಾರದಾಂಬರ ಸ್ಥಿತಿಯೂ ಗಂಭೀರವಾಗಿಯೇ ಇತ್ತು. ಇಬ್ಬರನ್ನ ಕಳೆದುಕೊಂಡು ತಾನು ಅನಾಥವಾಗುವ ಭಯ, ದುಃಖಗಳು ಉಮ್ಮಳಿಸಿಬಂದವು. ಒಮ್ಮೆಲೇ ಹರಿಣಿಯ ಕೋಣೆಗೆ ಧಾವಿಸಿದರು.

ಮುಚ್ಚಿದ್ದ ಹರಿಣಿಯ ಕೋಣೆಯ ಬಾಗಿಲು ತೆರೆದಿದ್ದನ್ನು  ನೋಡಿ ಮನಸ್ಸಿಗೆ ಅದೇನೋ ಒಂಥರಾ ಸಮಾಧಾನವಾಯ್ತು ರಾಯರಿಗೆ. “ಹರಿಣೀ…” ಎನ್ನುತ್ತಲೇ ಒಳಗೆ ಓಡಿಬಂದರು. ಕೋಣೆ ಖಾಲಿಯಿತ್ತು. ಬಚ್ಚಲುಮನೆಯ ಬಾಗಿಲೂ ತೆರೆದೇ ಇತ್ತು. ಕಿಟಕಿಗಳೆಲ್ಲ ಹಾಕಿಯೇ ಇದ್ದವು.ಆದರೆ ಹರಿಣಿ ಕಾಣಲಿಲ್ಲ. ಮಂಚದ ಮೇಲೆ ಎರಡು ಭದ್ರಪಡಿಸಿದ ಲಕೋಟೆಗಳಿದ್ದವು. ಸದಶಿವರಾಯರಿಗೆ ಗಾಬರಿಯಾಗಿ ಕಣ್ಣೆಲ್ಲಾ ಮಂಜಾಯ್ತು. ಹಾಗೆಯೇ ನೆಲಕ್ಕೆ ಬಿದ್ದರು. ಹೇಗೋ ಸಾವರಿಸಿಕೊಂಡು ಮಂಚ ತಲುಪಿ ಲಕೋಟೆಗಳನ್ನೊಮ್ಮೆ ನೋಡಿದರು. ಒಂದರ ಮೇಲೆ ” ಅಪ್ಪನಿಗೆ ” ಮತ್ತು ಇನ್ನೋದರ ಮೇಲೆ “ಭದ್ರ  ಅಂಕಲ್ ” ಎಂದು ಬರೆದಿತ್ತು. ಅವರಿಗೆ ಇಟ್ಟಿದ್ದ ಲಕೋಟೆಯನ್ನು  ಒಡೆದು ರಾಯರು ಪತ್ರವನ್ನು ಓದಲು ಪ್ರಾರಂಭಿಸಿದರು.

“ಅಪ್ಪ, ಕ್ಷಮೆ ಇರಲಿ. ನನಗೆ ಈ ಮನೆಯನ್ನು ತೊರೆಯದೇ ಬೇರೆ ದಾರಿಯಿರಲಿಲ್ಲ. ಹಾಗಂತ ನಾನು ಅತ್ಮ ಹತ್ಯೆ ಮಾಡಿಕೊಳ್ಳಲು ಹೊರಟಿದ್ದೇನೆ ಎಂದು ಭಾವಿಸಬೇಡಿ. ನಾನು ಬೇರೆಯೊಂದು ನೆಲೆಯನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ನನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದು ಅನಿವಾರ್ಯವಾಗಿದೆ. ಧೃತಿಗೆಟ್ಟು ಅನಾಹುತಕ್ಕೆ ಅವಕಾಶ ಮಾಡಿಕೊಡಬೇಡಿ. ನಾನು ಎಲ್ಲೇ ಇರಲಿ, ನಿಮ್ಮಾಶೀರ್ವಾದದಿಂದ ಖಂಡಿತಾ ಚೆನ್ನಾಗಿರಬಲ್ಲೆ. ನನ್ನನ್ನು ನಾನು ನೋಡಿಕೊಳ್ಳಬಲ್ಲೆ ಎಂಬ ವಿಶ್ವಾಸ ನನಗಿದೆ. ಆದರೆ ಅಮ್ಮನ ಬಗ್ಗೆ ಸ್ವಲ್ಪ ಭಯ, ಕಾಳಜಿ ಬಹಳ. ದಯವಿಟ್ಟು ಅವರನ್ನು ನೋಡಿಕೊಳ್ಳಿ. ಹರಿಣಿ ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾಳೆ, ಬರುತ್ತಾಳೆ ಅಂತ ಹೇಳಿ ಅವರನ್ನು ಸಂತೈಸಿ. ನಾವು ಮತ್ತೆ ಸಂತೋಷದಿಂದ ಇರಬೇಕಾದರೆ ಈ ಅಲ್ಪಾವಧಿಯ ವಿಯೋಗದ ಅವಶ್ಯಕತೆ ಇದೆ.

ಆಶೀರ್ವಾದ ಕೋರುತ್ತಿದ್ದೇನೆ ಅಪ್ಪ…ಇಲ್ಲವೆನ್ನಬೇಡಿ, ಮನಃಪೂರ್ವಕವಾಗಿ ಹರಸಿ.

ಹಾ…ಭದ್ರ ಅಂಕಲ್ ಗೆ ಆ ಲಕೋಟೆ ತಲುಪಿಸಿ. ನೀವು ಅದನ್ನು ಒಡೆಯದಿದ್ದರೆ ಚೆನ್ನ.

– ಹರಿಣಿ.

ಇದನ್ನು ನೋಡಿ ಸದಾಶಿವರಾಯರು ಕಿಂಕರ್ತವ್ಯಮೂಢರಾದರು. ಒಂದು ನಿಮಿಷದ ಮಟ್ಟಿಗೆ ಅವರು ಈ ಜಗತ್ತಲ್ಲೇ ಇಲ್ಲ ಎನ್ನುವಂತೆ ಭಾಸವಾಯ್ತು. ಎಲ್ಲಾ ಶೂನ್ಯವೆಂದು ಎನಿಸುತ್ತಿತ್ತು. ಆಗಸದ ಅನಂತ ಶೂನ್ಯತ್ವದಲ್ಲಿ ಅಲೆಮಾರಿಯಾಗಿ ಅಲೆಯುತ್ತಿದ್ದ ಅವರನ್ನು ಧುತ್ತೆಂದು ಧರೆಗಿಳಿಸಿದ್ದು ಶಾರದಾಂಬಾ ಅವರ ಅಳು. ರಾಯರ ಹಿಂದೆಯೇ ನಿಂತು ಅವರೂ ಪತ್ರವನ್ನು ಓದಿದ್ದರು. ದುಃಖ ಎಲ್ಲೆ ಮೀರಿ ಮತ್ತೆ ಶಾರದಾಂಬಾ ಪ್ರಜ್ಞಾಶೂನ್ಯರಾದರು. ಆಗಷ್ಟೇ  ಎದ್ದು ಕಣ್ಣುಜ್ಜುತ್ತಾ , ಇವರಿಬ್ಬರನ್ನು ಹುಡುಕುತ್ತಾ ಹರಿಣಿಯ ಕೋಣೆ ತಲುಪಿದ ಭದ್ರ ಅಂಕಲ್ ಅಳುತ್ತಿದ್ದ ಸದಾಶಿವರಾಯರು, ಪ್ರಜ್ಞಾರಹಿತರಾದ ಶರದಾಂಬಾರನ್ನು ನೋಡಿ, ಅವರೂ ಒಂದು ಕ್ಷಣ ಗಾಬರಿಯಾದರು. ನಂತರ ಅಂಬ್ಯುಲನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಭದ್ರ ಅಂಕಲ್ ಅನ್ನು ಮನೆ ನೋಡಿಕೊಳ್ಳಲು ಹೇಳಿದ ಸದಾಶಿವರಾಯರು, ಹರಿಣಿಕೊಟ್ಟಿದ್ದ ಕೋಟೆಯನ್ನು ಅವರ ಕೈಗೆ ಕೊಟ್ಟು “ನಿನಗೆ, ಹರಿಣಿ ಕೊಟ್ಟಿದ್ದು, ಓದು. ಮನೆ ಸಂಭಾಳಿಸು. ನಾನು ಆಸ್ಪತ್ರೆಯಿಂದ ಫೋನ್ ಮಾಡ್ತಿನಿ ” ಎಂದದ್ದೇ ಆಸ್ಪತ್ರೆಯೆಡೆಗೆ ಧಾವಿಸಿದರು.

ಅಂಬ್ಯುಲನ್ಸ್ ಹೊರಟ ಮೇಲೆ ಮನೆ ಬಾಗಿಲನ್ನು ಭದ್ರಪಡಿಸಿ ಹಾಲಲ್ಲಿ ಕುಳಿತು ಭದ್ರ ಅಂಕಲ್  ಲಕೋಟೆ ಒಡೆದರು. ಪತ್ರ ಓದುತ್ತಾ ಹಾಗೆಯೇ ಕುರ್ಚಿಯಿಂದ ಎದ್ದರು. ಏನು ಮನಸ್ಸು ಬಂತೋ, ಪತ್ರವನ್ನು ಓದಿದ ತಕ್ಷಣ ಮನೆಗೆ ಬೀಗ ಹಾಕಿ, ಎದುರು ಮನೆಯವರಿಗೆ ವಿಷಯ ತಿಳಿಸಿ, ಊರಲ್ಲಿ ಅವರ ಅಮ್ಮನ ಮೈ ಕೂಡಾ ಸರಿಯಿಲ್ಲ , ತಾವು ಹೊರಡದೇ ಬೇರೆ ದಾರಿಯಿಲ್ಲವೆಂದು ತಾವು ಹೊರಟ ಕಾರಣ ಹೇಳಿ, ಇದನ್ನು  ಸದಾಶಿವರಾಯರಿಗೆ ತಿಳಿಸಿಬಿಡಿ ಎಂದರು. ರಾಯರು ಅನ್ಯಥಾ ಭಾವಿಸಬಾರದಂತೆ ಎಂದು ವಿನಂತಿಸಿಕೊಂಡಿದ್ದೇನೆ ಎಂದು ತಿಳಿಸಿಬಿಡಿ ಎಂದೂ ಹೇಳದರು. ರಸ್ತೆಯ ಕಡೆಯಲ್ಲಿ ಮರೆಯಾಗಿ ನಿಂತು ಭದ್ರಾವತಿಗೆ ಫೋನ್ ಮಾಡಿ, ತಾವು ಊರಿಗೆ ಬರುವವರೆಗೂ ಯಾವ ಫೋನ್ ಕಾಲನ್ನೂ ರಿಸೀವ್ ಮಾಡಬಾರದೆಂದು ಕಟ್ಟಪ್ಪಣೆ ಮಾಡಿದರು. ಭಾರದ ಹೆಜ್ಜ ಹಾಕುತ್ತಾ ಬಸ್ ಸ್ಟ್ಯಾಂಡಿನ ದಾರಿ ಹಿಡಿದರು.

******************************

ಇತ್ತ ಶಾರದಾಂಬಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಹರಿಣಿ ಬರುತ್ತಾಳೆ, ಬಂದೇ ಬರುತ್ತಾಳೆ ಎಂದು ರಾಯರು ಅವರ ಕಿವಿಯಲ್ಲಿ ಉಸುರುತ್ತಲೇ ಇದ್ದರು. ..

*******************************

” ಸಾಯಂಕಾಲ ನಾಲ್ಕುವರೆಯ ಸುಮಾರಿಗೆ ಅಂಗಳದಲ್ಲಿ ಕಳಿತು ಹೆಸರುಕಾಳನ್ನು ಹಸನು ಮಾಡುತ್ತಿದ್ದರು ಶಾರದಾಂಬಾ. ರಾಯರು ಈಜೀ ಚೇರ್ ಮೇಲೆ ಕುಳಿತು ನ್ಯೂಸ್ ಪೇಪರ್ರನ್ನು ಮೂರನೆಯ ಸರ್ತಿ ಕೂಲಂಕುಷವಾಗಿ ಓದುತ್ತಿದ್ದರು.ಶ್ವೇತ ವರ್ಣದ ಕಾರೊಂದು ಮನೆಯ ಮುಂದೆ ನಿಂತಿತು. ಕಾರಿಂದ ಇಬ್ಬರು ಸೂಟು ಟೈಧಾರಿ ಹುಡುಗರು ಕೆಳಗಿಳಿದರು. ಗೇಟ್ ಮುಂದೆ ಬಂದು ನಿಂತು, “ಇದು ಹರಿಣಿಯವರ ಮನೆಯಲ್ಲವಾ ?” ಎಂದು ಕೇಳಿದರು. ದಂಪತಿಗಳಿಬ್ಬರಿಗೂ ಒಮ್ಮೆಲೇ ಸಖೇದಾಶ್ಚರ್ಯ ಆಯ್ತು. ಬರೋಬ್ಬರಿ ಒಂದು ವರೆ ವರ್ಷ, ಹರಿಣಿಗಾಗಿ ಇವರಿಬ್ಬರು ತಪಸ್ಸು ಮಾಡಿದ್ದರು. ಹರಿಣಿಯ ಹೆಸರು ಕೇಳಿದಾಕ್ಷಣ ಖುಶಿಯಾಗಿ, ” ಹೌದಪ್ಪ… ನೀವ್ಯಾರು ? ಎಲ್ಲಿಂದ ಬಂದಿರಿ ? ಹರಿಣಿ ಎಲ್ಲಿದ್ದಾಳೆ ಗೊತ್ತಾ ? ನಿಮ್ಮನ್ನು ಅವಳೇ ಕಳಿಸಿದಳಾ ? ” ಎಂದು ಒಮ್ಮೆಲೇ ಪ್ರಶ್ನೆಗಳ ಮಳೆಗೆರೆದರು. ಅವರು  ” ನಾವು ಪ್ಯಾರಾಡೈಸ್ ಗ್ರೂಪ್ ಆಫ್ ಹೋಟೆಲ್ಸ್ ನವರು. ಹರಿಣಿಯವರು ನಿಮ್ಮನ್ನು ಕರೆತರಲು ಹೇಳಿದ್ದಾರೆ . ದಯವಿಟ್ಟು  ಬನ್ನಿ ನಮ್ಮೊಡನೆ ” ಎಂದರು. ಇವರಿಗೆ ಮೊದಲು ಖುಷಿಯಾಯ್ತಾದರೂ, ಬೆಂಗಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ಕ್ರೈಮ್ ರೇಟ್  ಅವರಿಗೆ ಅನುಮಾನವೂ ತರಿಸಿತು. ಇದನ್ನು ಅರಿತ ಆ ಹುಡುಗರು ಫೋನ್ ನಲ್ಲಿ ಹರಿಣಿಯ ನಂಬರ್ ಡಯಲ್ ಮಾಡಿದರು. ಹರಿಣಿಯ ಮಾತು ಕೇಳಿ ದಂಪತಿಗಳಿಬ್ಬರು ಸಂತೋಷದಿಂದ ಕುಣಿಯುವುದೊಂದು ಬಾಕಿ. ಕೈಗೆ ಸಿಕ್ಕ ಸೀರೆ ಉಟ್ಟರು ಶಾರದಾಂಬ. ಆದರೆ ರಾಯರು ಇದು ಒಂಚೂರು ಚೆನ್ನಾಗಿಲ್ಲವೆಂದು ಜರಿದು, ಜರಿಯ ರೇಷ್ಮೆ ಸೀರೆ ಉಡಲು ಒತ್ತಾಯಿಸಿದರು. ಅವರು ಯಾವುದೋ ಅಂಗಿ ತೊಟ್ಟಾಗ ಬೈಯ್ಯುವ ಸರದಿ ಶಾರದಾಂಬನವರದ್ದಾಗಿತ್ತು. ರೇಷ್ಮೆ  ಶರ್ಟನ್ನು ತೊಡಲು ಆಜ್ಞೆ ಮಾಡಿದರು. ಸರಿ ಇಬ್ಬರೂ ಸಂಭ್ರಮದಿಂದ ತಯಾರಾಗಿ  ಹೊರಟರು ಅವರಮುದ್ದಿನ ಮಗಳನ್ನು ನೋಡಲು.

ಹೋಟೆಲ್ ನಿಜವಾಗಿಯೂ ಅಮರಾವತಿಯ ಹಾಗೇ ಇತ್ತು. ಮುಖ್ಯದ್ವಾರದಿಂದ ಬ್ಯಾಂಕ್ವೆಟ್ ಹಾಲಿಗೆ ಬರುವ ಹೊತ್ತಿಗೇ ಇಬ್ಬರಿಗೂ ಸುಸ್ತಾಗಿ ಹೋಗಿತ್ತು. ಬ್ಯಾಂಕ್ವೆಟ್ ಹಾಲಿಗೆ ಬಂದೊಡನೆ ಅವರು ಹರಿಣಿಯ ಹುಡುಕಾಟದಲ್ಲಿ ತೊಡಗಿದರು. ಆದರೆ ಅವಳೆಲ್ಲೂ ಕಾಣಿಸಲೇ ಇಲ್ಲ. ಮಹದಾಸೆ ಹೊತ್ತು ಬಂದಿದ್ದವರಿಗೆ ಈಗ ಹತಾಶ ಭಾವ ಕಾಡತೊಡಗಿತು. ತಮ್ಮ ಹಣೆಯಬರಹ ಇಷ್ಟೇ ಎಂದುಕೊಂಡು ಅವರು ಹೊರಟೇ ಬಿಡಲು ನಿರ್ಧರಿಸಿದರು. ಆಗ ವ್ಯಕ್ತಿಯೊಬ್ಬರು ಇವರನ್ನು ಎದುರುಗೊಂಡು ” ಹರಿಣಿಯ ತಂದೆ ತಾಯಿಗಳಲ್ಲವೇ ನೀವು ? ಬನ್ನಿ ಬನ್ನಿ, ನಿಮಗಾಗಿ ಕುರ್ಚಿ ಕಾದಿರಿಸಲಾಗಿದೆ. ಇನ್ನೊಂದು ಹತ್ತು ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗುತ್ತದೆ ” ಎಂದು ಅವರೇ ಸ್ವತಃ ಕರೆದುಕೊಂದು ಹೋಗಿ ಮುಂದಿನ ಸಾಲಲ್ಲಿ ಕೂರಿಸಿದರು. ಇವರು ಹರಿಣಿಯ ಆಗಮನಕ್ಕಾಗಿ ಬಕಪಕ್ಷಿಗಳಂತೆ ಕಾಯತೊಡಗಿದರು.

ಕಾರ್ಯಕ್ರಮವಾರಂಭವಾಗುತ್ತಿದ್ದಂತೆ ಅವರನ್ನು ಎದುರುಗೊಂಡ ವ್ಯಕ್ತಿ ಬೇರೆ ಯಾರೂ ಅಲ್ಲ, ಈ ಹೋಟೆಲ್ಲಿನ ಮಾಲೀಕರೆಂಬುದು ಅವರಿಗೆ ಆಗ ಗೊತ್ತಾಯ್ತು. ಅವರೇ ಸ್ವತಃ ಹರಿಣಿಯನ್ನು ವೇದಿಕೆಗೆ ಸ್ವಾಗತಿಸಿದರು.ಶುಭ್ರ ಬಿಳಿ ಬಣ್ಣದ ರೇಷ್ಮೆ ಸೀರೆಯುಟ್ಟು ಹರಣಿ ವೇದಿಕೆಗೆ ಬಂದಳು. ತಂದೆ ತಾಯಿಗಳಿಗೆ ಅವಳನನ್ನು ನೋಡಿದಾಕ್ಷಣ ಆನಂದ ಬಾಷ್ಪಗಳು ಹರಿಯತೊಡಗಿದವು. ಹರಿಣ ತಂದೆ ತಾಯಿಯರನ್ನು ಒಮ್ಮೆ ನೋಡಿ ಪ್ರೀತಿಯಿಂದ ನಕ್ಕಳು. ಹರಿಣಿಯ ಹಿಂದೆಯೇ ಸ್ಫುರದ್ರೂಪಿ ಹುಡುಗನೊಬ್ಬ ಬಂದು ಹರಿಣಿಯ ಪಕ್ಕದಲ್ಲಿದ್ದ ಆಸನದಲ್ಲಿ ಮಂಡಿಸಿದ್ದನ್ನು ನೋಡಿ ಇವರಿಬ್ಬರು ಒಮ್ಮೆ ಹುಬ್ಬೇರಿಸಿದರು. ಹರಿಣಿಯ ಕುತ್ತಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ತಾಳಿಯಾಗಲಿ, ತಾಳಿಯನ್ನು ಹೋಲುವ ಯಾವುದೇ ಸರಗಳೂ ಕಾಣಲಿಲ್ಲವಾದ್ದರಿಂದ ಸ್ವಲ್ಪ ಸಮಾಧಾನವಾದರೂ, ಅನುಮಾನವಂತೂ ಪರಿಹಾರವಾಗಲಿಲ್ಲ. ಹೋಟೆಲ್ಲಿನ ಮಾಲೀಕರು ಮಾತನಾಡಲು ಪ್ರಾರಂಭಿಸಿದರಾದ್ದರಿಂದ ಇವರಿಗೆ ಉಹನೆಗಳನ್ನು ಮಾಡಿಕೊಳ್ಳಲು ಸಮಯ ಸಾಲಲಿಲ್ಲ.

” ಇಂದು, ಪ್ಯಾರಡೈಸ್ ಗ್ರೂಪ್ ಆಫ್ ಹೋಟೆಲ್ಸ್ ಪಾಲಿಗೆ ಒಂದು ಸುದಿನ. ಅತಿಥಿ ದೇವೋಭವ ಎಂಬುದು ನಮ್ಮ ಧ್ಯೇಯ ವಾಕ್ಯ. ಅವರನ್ನು ಸಂತುಷ್ಟ ಪಡಿಸಿ ದೇವರನ್ನು ಮೆಚ್ಚಿಸಿ ಸತ್ಕಾರ್ಯದಲ್ಲಿ ನಿರತರಾಗಿರಬೇಕೆಂದು ನಮ್ಮ ಆಶಯ. ನಮ್ಮ ಹೋಟೆಲ್ಲಿನಲ್ಲಿ ಮೊದಲು ಇನ್ನೂರೈವತ್ತು ರೂಮುಗಳಿದ್ದವು. ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಹೋಟೆಲ್ಲಿಗೆ ಹತ್ತಿರವಾಗಿದೆಯಾದ್ದರಿಂದ ಹರಿದು ಬರುತ್ತಿರುವ ಜನಸಾಗರಕ್ಕೆ ಕೋಣೆಗಳನ್ನ ಪೂರೈಸಲು ನೂರು ರೂಮುಗಳ ಹೊಸದೊಂದು ಸಮುಚ್ಚಯವನ್ನು ಕಟ್ಟಿಸಿ ಇಂದು ಉದ್ಘಾಟಿಸಲಿದ್ದೇವೆ. ನಮ್ಮ ಹೋಟೆಲ್ಲಿನಲ್ಲಿ ಬಂದ ಅತಥಿಗಳೆಲ್ಲರೂ ನಮ್ಮ ಹೋಟೆಲ್ಲಿನ ಇಂಟೀರಿಯರ್ ಡಿಸೈನ್ ಮತ್ತು ತೈಲವರ್ಣ ಚಿತ್ರಗಳನ್ನು ಅಪಾರವಾಗಿ ಮೆಚ್ಚಿ ಕೆಲವೊಂದು ಚಿತ್ರಗಳನ್ನು ಆರ್ಡರ್ ಮಾಡಿ ಹೋಗಿದ್ದಾರೆ. ಇದಕ್ಕೆಲ್ಲ ಕಾರಣ ನಮ್ಮ ಹೋಟೆಲ್ಲಿಗೆ ಇಂಟೀರಿಯರ್ ಮಾಡಿಕೊಟ್ಟ ಹರಿಣಿ ಸದಾಶಿವ. ಅವರ ಕಾಲ್ಗುಣ ಎಷ್ಟು ಚೆನ್ನಾಗಿದೆ ಅಂದರೆ, ಅವರು ಕಾಲಿಟ್ಟ ಒಂದೇ ತಿಂಗಳಲ್ಲಿ ನಮ್ಮ ಹೋಟೆಲ್ಲಿನ ವ್ಯಾಪಾರ ವಹಿವಾಟುಗಳು ಹೆಚ್ಚತೊಡಗಿದವು. ಅವರೇ ಸ್ವತಃ ನಿಂತು ಎಲ್ಲಾ ಕೆಲಸಗಳನ್ನ ಮಾಡಿಸಿ, ತಮ್ಮ ವ್ಯಾಸಂಗವನ್ನೂ ಮಾಡಿಕೊಂಡು, ಮಕ್ಕಳಿಗೆ ಕಲೆಯ ಪಾಠ ಹೇಳಿಕೊಟ್ಟು ಅವರು ಬದುಕಲು ದಾರಿ ಮಾಡಿಕೊಂಡವರು. ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂದು ಧೃಢ ನಿರ್ಧಾರ ಮಾಡಿ ಯಾರ ಸಹಾಯವನ್ನೂ ತೆಗೆದುಕೊಳ್ಳದ ಮಹಾನ್ ಛಲಗಾರ್ತಿ. ಇವತ್ತಿಗೆ ಸರಿಯಾಗಿ ಒಂದುವರೆ ವರ್ಷದ ಹಿಂದೆ ಅವರ ಚಿತ್ರಕಲಾ ಶಾಲೆಗೆ ಭೇಟಿ ಕೊಟ್ಟ ನಾವು, ಅಂದು ಪ್ರದರ್ಶನದಲ್ಲಿ ಇಟ್ಟಿದ್ದ ಇವರ ತೈಲವರ್ಣ ಚಿತ್ರಗಳನ್ನು ನೋಡಿ ಬೆರಗಾಗಿ ಹೋಗಿ ಇವರ ಚಿತ್ರಗಳನನ್ನೇ ನಮ್ಮ ಹೋಟೆಲ್ಲಿನ ಇಂಟೀರಿಯರ್ ಗೆ ಬಳಸಿಕೊಳ್ಳುವೆವೆಂದು ನಿರ್ಧರಿಸಿದೆವು. ಆಗ ನಮಗೊಬ್ಬ ಇಂಟೀರಿಯರ್ ಡೆಕರೇಟರ್ ನ ಅವಶ್ಯಕತೆ ಇತ್ತು. ಇವರು ಅದರಲ್ಲೂ ಕೋರ್ಸೊಂದನ್ನು ಮಾಡಿದ್ದಾರೆಂದು ನಮಗೆ ತಿಳಿದ ಕೂಡಲೇ  ಇವರನ್ನು ಕೆಲಸದ ಬಗ್ಗೆ ವಿಚಾರಿಸಲು ಇವರ ತಂದೆತಾಯಿಗಳನ್ನೊಮ್ಮೆ ಕೇಳಿ ಹೇಳುತ್ತೇನೆಂದವರು ಮಾರನೆಯ ದಿನ ನಮ್ಮ ಆಫೀಸಿನ ಮುಂದೆ ಕ್ಯಾನ್ವಾಸ್ ಹಿಡಿದು ಕೆಲಸಕ್ಕೆ ತಯಾರಾಗಿಯೇ ಬಿಟ್ಟಿದ್ದರು. ಕಟ್ಟದ ನಿರ್ಮಾಣವಾಗುವಾಗ ಹೋಟೇಲ್ಲಿನಲ್ಲೇ ಇಳಿದುಕೊಂಡ ಇವರು ಆಮೇಲೆ ಅದರ ಬಿಲ್ಲನ್ನು ಮುರಿದುಕೊಂಡೇ ಪೇಮೆಂಟ್ ಕೊಡಿ ಎಂದು ಹೇಳಿ ನಮಗೇ ದಂಗುಬಡಿಸಿದರು. ಇಂಥವರು ನಮ್ಮೊಡನೆ ಇರುವುದು ನಮ್ಮ ಸೌಭಾಗ್ಯವೆಂದೇ ಹೇಳಬೇಕು. ಅವರ ತಂದೆ ತಾಯಿಗಳು ನಿಜವಾಗಿಯೂ ಪುಣ್ಯವಂತರು. ಇಂತಹಾ ಪುತ್ರಿಕಾರತ್ನವೊಂದನ್ನ ಲೋಕಕ್ಕೆ ಕೊಟ್ಟು ಅವರು ಕೃತಾರ್ಥರಾಗಿದ್ದಾರೆ. ಅವರು ಇಂದು ನಮ್ಮೊಡನೆ ಇದ್ದಾರೆ. ಅವರಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು.

ಹಾ…ನಮ್ಮೊಡನೆ ಇನ್ನೊಬ್ಬರಿದ್ದಾರೆ. ಅವರು ಹರಿಣಿಯ ಬಗ್ಗೆ ಒಂದಷ್ಟು ವಿಷಯಗಳನ್ನ ನಮ್ಮೊಡನೆ ಹಂಚಿಕೊಳ್ಳಬಯಸಿದ್ದಾರೆ. ಸರ್, ಬನ್ನಿ ” ಎಂದರು.

ವೇದಿಕೆಯ ಹಿಂಭಾಗದಿಂದ ಯಾರು ಬರಲಿದ್ದಾರೆ ಎಂದು ನೋಡಲು ರಾಯರು,ಶಾರದಾಂಬಾ ಮತ್ತು ಹರಿಣಿ ಮೂವರು ಕಾತರಾಗಿದ್ದರು. ಬಂದವರು ಭದ್ರ ಅಂಕಲ್. ಹರಿಣಿ ಆಶ್ಚರ್ಯಚಕಿತಳಾಗಿದ್ದಳು. ದಂಪತಿಗಳೂ ಮೂಕವಿಸ್ಮಿತರಾಗಿದ್ದರು. ಭದ್ರ ಅಂಕಲ್ ಸಭೆಗೊಮ್ಮೆ ನಮಸ್ಕರಿಸಿ ತಮ್ಮ ಮಾತನ್ನು ಆರಂಭಿಸಿದರು.

” ದೇವಹಿತ ಅಂದರೇನು ಅಂತ ತೋರಿಸಿಕೊಟ್ಟವಳು ಹರಿಣಿ. ದೊಡ್ಡವರ ಹತ್ತಿರ ಮಾತಾಡಿದರೆ ಎದುರುವಾದಿಸಿದಂತಾಗುತ್ತದೆ, ಅದು ನಮ್ಮ ತಂದೆ ತಾಯಿ ಕೊಟ್ಟ ಸಂಸ್ಕಾರಕ್ಕೆ ಧಕ್ಕೆ ತರುತ್ತದೆ ಎಂದು ಸಾವಿರ ಬಾರಿ ಯೋಚಿಸಿದ ಸಾಧ್ವಿ . ತನಗಾದ ಅವಮಾನ, ತಾನು ಪಟ್ಟ ಯಾತನೆಯನ್ನು ಹೇಳಿಕೊಳ್ಳಲೇಬೇಕೆನಿಸಿ, ಅತಿ ವಿನಯದಿಂದ ಈ ಪತ್ರವನ್ನು ಬರೆದಿಟ್ಟು, ನನ್ನ ಕಣ್ಣು ತೆರೆಸಿ ಅವಳು ಕಣ್ಮರೆಯಾದಳು. ಪಶ್ಚಾತ್ತಾಪದ ಬೇಗೆಯಲ್ಲಿ ನಾನು ಬೆಂದು ಈಗ ಪವಿತ್ರನಾಗಿದ್ದೇನಮ್ಮಾ..ಹಾ…ಆ ಪತ್ರವನ್ನೂಮ್ಮೆ ನಿಮ್ಮ ಮುಂದೆ ಓದಲಿಚ್ಛಿಸುತ್ತನೆ”

ಎದ್ದು ಅವರನ್ನು ತಡೆಯಲು ಹೊರಟಿದ್ದ  ಹರಿಣಿಯನ್ನು ಕೈಸನ್ನೆಯಲ್ಲೇ ತಡೆದ ಭದ್ರ ಅಂಕಲ್, ಪತ್ರವನ್ನು  ಓದಲಾರಂಭಿಸಿದರು.

“ನಮಸ್ಕಾರ ಅಂಕಲ್, ನಿಮ್ಮನ್ನು ಬೇಜಾರು ಮಾಡುವ ಉದ್ದೇಶ ಖಂಡಿತಾ ನನಗಿಲ್ಲ, ಜ್ಞಾನಿಗಳಾದ ನಿಮ್ಮ ಮುಂದೆ ವಿತಂಡವಾದಕ್ಕೆ ನಿಲ್ಲಲೂ ನನಗಿಚ್ಛೆಯಿಲ್ಲ. ಸಾಯಂಕಾಲ ನೀವು ಮನೆಗ ಬಂದಾಗ “ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ “ಶ್ಲೋಕವನ್ನು ಹೇಳುತ್ತಿದ್ದಿರಿ. ನಾನು ಚಿಕ್ಕವಳಿದ್ದಾಗ ಆ ಶ್ಲೋಕದ ಅರ್ಥ ಹೇಳಿದ್ದಿರಿ.ಆ ಶ್ಲೋಕವನ್ನು ಹೀಗೂ ಅರ್ಥೈಸಬಹುದಲ್ಲವೇ ?

ಭದ್ರಂ ಕರ್ಣೇಭಿಃ  ಶೃಣುಯಾಮ ದೇವಾಃ –  ದೇವತೆಗಳೇ, ನಾವು ಕಿವಿಗಳಿಂದ ಒಳ್ಳೆಯದನ್ನೇ ಕೇಳುವ ಹಾಗಾಗಲಿ ಎಂದಿದ್ದಿರಿ ನೀವು.  ಬೇರೆಯವರ ಮಾತನ್ನು ಒಮ್ಮೆಯಾದರೂ ಕೇಳಿ,  ಅದರಲ್ಲಿನ ಒಳಿತನ್ನು ಮಾತ್ರ ಗ್ರಹಿಸಬೇಕೆಂಬುದು ಇದರ ಅರ್ಥವಲ್ಲವೇ  ?

ಭದ್ರಂ ಪಶ್ಯೇಮಾಕ್ಷಿಭಿಃ – ಒಳ್ಳೆಯದನ್ನೇ ನೋಡೋಣ ಎಂದಿದ್ದಿರಿ ನೀವು.  ನೋಡಿದಾಕ್ಷಣ ಸರಿಯಿರದರ ಬಗ್ಗೆ ಮಾತಾಡಿ ಆಡಿಕೊಳ್ಳುವ ಬದಲು ಅವರಲ್ಲಿರುವ ಒಳ್ಳೆಯ ಗುಣವನ್ನು ಶ್ಲಾಘಿಸಬಹುದಲ್ಲವೇ ?  ಸರಿಯಿರದ ವಸ್ತುಗಳಲ್ಲಿಯೂ ಒಳ್ಳೆಯದಿರಹುದಲ್ಲವೇ ?  ಕೆಟ್ಟದರಲ್ಲೂ, ಚೆನ್ನಾಗಿರದ ವಸ್ತುಗಳಲ್ಲಿಯೂ ಒಳ್ಳೇ ಗುಣವನ್ನು ನೋಡಬೇಕೆಂಬುದಾಗಿ ಇದರ ಅರ್ಥ ಅಲ್ವೇ ? ಈಗ, ಚಾಕು ಮನುಷ್ಯರನ್ನು ಚುಚ್ಚಕ್ಕೆ ಬಳಸಲ್ಪಡುತ್ತದೆಂದು ಹಳಗಳಿಯುವ ಬದಲು ಅದನ್ನು ಹಣ್ಣು ಕುಯ್ಯಲೂ ಬಳಸಬಹುದಲ್ಲವೇ ?

ಯಜತ್ರಾಃ –  ಯಜ್ಞ ಕಾರ್ಯಗಳಲ್ಲಿ ನಿರತರಾಗಿರೋಣ ಎಂದು ಅರ್ಥೈಸಿದರಿ. ಈ ಯುಗದಲ್ಲಿ ನಮ್ಮ ನಮ್ಮ ಕೆಲಸವೇ ಯಜ್ಞವಲ್ಲವೇ ? ಅಂದರೆ ನಮ್ಮ ನಮ್ಮ ಕೆಲಸ ನಾವು ನೋಡಿಕೊಂಡಿರಬೇಕಲ್ಲವೇ ? ನಮ್ಮ ಕೆಲಸದಿಂದ ಲೋಕಕ್ಕೆ ಉಪಯೋಗವಾಗಬೇಕಲ್ಲವೇ ?

ಸ್ಥಿರೈಃ ಅಂಗೈಃ ಸುಷ್ಟುವಾನ್ ಸಸ್ತನೂಭಿಃ –  ನಮ್ಮ ಸ್ಥಿರವಾದ ಅಂಗಗಳಿಂದ ನಿಮ್ಮನ್ನು ಹೊಗಳುವಂಥವರಾಗೋಣ. ಅಂದರೆ ದೇವರು ಎಲ್ಲರಲ್ಲೂ ಇರುವನು, ಎಲ್ಲದರಲ್ಲೂ ಆದ್ದರಿಂದ ಯಾರನ್ನೇ ಆಗಲಿ ಅಪಹಾಸ್ಯ ಮಾಡುವುದು, ನಿಂದಿಸುವುದು, ಬೈಯ್ಯುವುದು, ನೋಯಿಸುವುದು ತಪ್ಪಲ್ಲವೇ ?

ವ್ಶಶೇಮ ದೇವಹಿತಂ ಯದಾಯುಃ- ಅಂದರೆ ನಾವು ನಮ್ಮ ಆಯುಷ್ಯವಿರುವವರೆಗೂ ದೇವರು ಮೆಚ್ಚುವಂತಹ ಕೆಲಸವನ್ನು ಮಾಡಬೇಕೆಂದಿದ್ದಿರಿ. ಅಂದರೆ, ನಾವು ಎಲ್ಲರಲ್ಲೂ ಇರುವ, ಎಲ್ಲವೂ ಆಗಿರುವ,  ಮನಸ್ಸಾಕ್ಷಿಯೂ ಆಗಿರುವ ಭಗವಂತನ ಆರಧನೆಯನ್ನು ಒಳ್ಳೆಯ ಮಾತು, ಕಾರ್ಯ ಹಾಗು ಶುದ್ಧ ಮನಸ್ಸನ್ನು ಹೊಂದಿ  ದೇವರಿಗೆ ಹಿತವಾಗುವಂತೆ ನಡೆದುಕೊಳ್ಳಬೇಕಲ್ಲವೇ ? ದೇವಹಿತವೆಂದರೆ ಇದೇ ಅಲ್ಲವೇ ?

ನೀವು ಅರ್ಥವನ್ನು ಹೇಳಿದ್ದಿರಿ ಅಷ್ಟೇ…ಆದರೆ ಶ್ಲೋಕ ಹೇಳಿದಂತೆ ಅನುಸರಿಸಿದ ಹಾಗೆ ಕಾಣಲಿಲ್ಲವಲ್ಲ ಭದ್ರ ಅಂಕಲ್ ?

ನನ್ನ ಜನ್ಮ ನಿಮಗೆ ಬೇಕಿತ್ತೋ ಇಲ್ಲವೋ ಅದು ಗೌಣ.ಅದರ ನಿಷ್ಕರ್ಷೆ ಮಾಡಬೇಕಿದ್ದುದು ಅಪ್ಪ ಅಮ್ಮ ಹೊರತು ನೀವಲ್ಲ. ಅವರು ನನ್ನನ್ನು ಭೂಮಿಗೆ ತಂದಿದ್ದಾರೆ ಎಂದ ಮೇಲೆ ನೀವದರ ಔಚಿತ್ಯ ಪ್ರಶ್ನಿಸುವುದು ಅನವಶ್ಯಕ. ನನ್ನ ರೂಪು ನಿಮಗೆ ಚಿಂತೆ ತರಿಸಿದರೆ ಅದರ ಪರಿಹಾರಕ್ಕಾಗಿ ನೀವು ಅಪ್ಪ ಅಮ್ಮಂದಿರನ್ನು ಕುಟೂಕುವುದು ಯಾವ ನ್ಯಾಯ ಭದ್ರ ಅಂಕಲ್ ? ಕೊಂಕು, ವ್ಯಂಗ್ಯ ಮತ್ತು ಕುಟುಕುಗಳಿಂದ  ನಾನು ಬೆಳ್ಳಗಾಗುತ್ತೇನೆ ಎಂದಾದರೆ, ಜನರು ಆಡಿರುವ  ಮಾತುಗಳು ಎಷ್ಟಿವೆ ಅಂದರೆ ಇಷ್ಟೊತ್ತಿಗೆ ನಾನು ಹಾಲಿಗೇ ಸ್ಪರ್ಧೆಯೊಡ್ಡುತ್ತಿದ್ದೆ !

ನನಗಾದ ಅವಮಾನ ಸಾಕು. ಅದರಿಂದ ನಾನು ಪಟ್ಟ ಯಾತನೆ ಈ ಜನ್ಮಕ್ಕೆ ಸಾಕು. ಇನ್ನು ಇನ್ಯಾರಿಗೂ ಹೀಗೆ ಹೇಳಿ ನಿಮ್ಮ ವಾಕ್ಚಾತುರ್ಯ ಮೆರೆಯದಿರಿ. ನನಗಾದ ಬೇಜಾರು ಮತ್ತಿನ್ಯಾರಿಗೂ ಆಗದ ಹಾಗೆ ನೋಡಿಕೊಳ್ಳುವುದು ಈಗ ನೀವು ಮಾಡಬೇಕಿರುವ ಪುಣ್ಯಕಾರ್ಯ.ಇದೊಂದು ಮಾತು ನಡೆಸಿಕೊಡಿ ಭದ್ರ ಅಂಕಲ್.

ನಾನು ಹೋಗುತ್ತಿದ್ದೇನೆ, ನಿಮ್ಮಂಥವರ ಮಾತು ಕೇಳಿ ಜಿಗುಪ್ಸೆ ಹೊಂದಿ ಸಾಯಲಿಕ್ಕಲ್ಲ, ನಿಮ್ಮಂಥವರನ್ನು ಎದುರಿಸಿ, ನಮ್ಮಂಥವರೂ ಬದುಕಬಹುದು ಎಂದು ಸಾಧಿಸಿ,  ಬದುಕಿ ತೋರಿಸಲಿಕ್ಕೆ. ಇದು ಅಂತರಾತ್ಮವನ್ನು ಮೆಚ್ಚಿಸುತ್ತದೆಯಾದ್ದರಿಂದ ದೇವಹಿತವಾಯ್ತು. ಅಲ್ಲವೇ ?

ಹರಿಣಿ. ”

ಎಲ್ಲರ ಕಣ್ಣಲ್ಲೂ ನೀರು ಹರಿಯುತ್ತಿತ್ತು. ಹರಿಣಿ ಬಿಕ್ಕುತ್ತಿದ್ದಳು. ಭದ್ರ ಅಂಕಲ್ ಮುಂದುವರೆಸಿದರು – “ತಾಯಿ, ನನ್ನಿಂದ ಮಹಾಪರಾಧವಾಯ್ತಮ್ಮ, ಮಕ್ಕಳನ್ನು ಪ್ರೋತ್ಸಾಹಿಸುವ ಬದಲು ಅವರನ್ನು ಅಲ್ಲಗಳೆದು ದೊಡ್ಡ ತಪ್ಪು ಮಾಡಿದೆ. ಆ ತಪ್ಪಿಗೆ ನನಗೆ ಸರಿಯಾದ ಶಿಕ್ಷೆ ಕೊಟ್ಟು ಪಶ್ಚಾತ್ತಾಪದಲ್ಲಿ ಬೇಯುವಂತೆ ಮಾಡಿದ ದೇವತೆ ನೀನು. ನೀನು ಚೆನ್ನಾಗಿರಮ್ಮ…ನೂರ್ಕಾಲ ಚೆನ್ನಾಗಿ ಬಾಳು !

ನಾನು ಆವತ್ತು ಮಾಡಿದ ತಪ್ಪಿಗೆ ಸದಾಶಿವನಿಗೆ ಮುಖ ತೋರಿಸಲು ನಾಚಿಕೆಯಾಗಿ, ನನ್ನ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಗುವವರೆಗೂ ನಾನು ಅವನ ಬಳಿಹೋಗುವುದಿಲ್ಲ ಎಂದು ನಿಶ್ಚಯಿಸಿ ಸುಳ್ಳು ಹೇಳಿ ಮನೆಯಿಂದ ಹೊರಟೆ. ಬೇಕಂತಲೇ ಅವನ ಫೋನುಗಳನ್ನು ಎತ್ತಲಿಲ್ಲ. ನನ್ನಿಂದ ತಪ್ಪಾಯ್ತೋ ಸದಾಶಿವ..ನನ್ನನ್ನು ದಯವಿಟ್ಟು ಕ್ಷಮಿಸಿಬಿಡಪ್ಪ !! ಮೊನ್ನೆ ಪೇಪರ್ರಿನಲ್ಲಿ ಈ ಹೋಟೆಲ್ಲಿನ ಇಂಟೀರಿಯರ್ ಬಗ್ಗೆ ಶ್ಲಾಘಿಸಿ ಆರ್ಟಿಕಲ್ ಬಂದಿತ್ತು,ಹರಿಣಿಯ ಬಗ್ಗೆಯೂ ಓದಿದೆ. ಇದೇ ಸದವಕಾಶವೆಂದುಕೊಂಡು  ನಾನೇ ಇಲ್ಲಿಗೆ ಬಂದು ನನ್ನ ತಪ್ಪೊಪ್ಪಿಕೊಳ್ಳುತ್ತೇನೆಂದು ಬೇಡಿಕೊಂಡೆ, ಮಾಲೀಕರ ಮನಸ್ಸು ದೊಡ್ಡದು, ಒಪ್ಪಿಕೊಂಡರು. ನಿಮಗೆ ಧನ್ಯವಾದ ಸರ್.” ಎಂದು ಕಣ್ಣೊರೆಸಿಕೊಂಡರು.

ಹರಿಣಿ ಎದ್ದೋಡಿ ಬಂದು , ” ಅಂಕಲ್, ನಿಮ್ಮನ್ನು ನೋಯಿಸುವ ಉದ್ದೇಶ ನನಗೆ ಖಂಡಿತಾ ಇಲ್ಲ, ಆದರೆ ನನ್ನ ಸಹನೆಯೂ ಮಿತಿಮೀರಿತ್ತು. ನೀವು ಮತ್ತೆ ಸಿಕ್ಕಿದಿರಲ್ಲ, ಬದಲಾಗಿದ್ದೀರಲ್ಲ, ನನಗಷ್ಟೇ ಸಂತೋಷ.”

ಆಗ ಹೋಟೆಲ್ಲಿನ ಮಾಲೀಕರು ಎದ್ದು ” ಎಲ್ಲವೂ ಸುಖಾಂತ್ಯವಾಯ್ತಲ್ಲ, ಅದೇ ಸಂತೋಷ. ನಾವು ಅನಂತರಾಮಯ್ಯನವರಿಂದ ಎಲ್ಲವನ್ನೂ ತಿಳಿದಿದ್ದೀವಿ. ಸದಾಶಿವರಾಯರು ತಮ್ಮ ಮಗಳ ಮದುವೆಯ ಬಗ್ಗೆ ಇನ್ನು ಯೋಚಿಸುವ ಅಗತ್ಯವಿಲ್ಲ. ನಮ್ಮ ಮಗನು ಹರಿಣಿಯನ್ನು ಮದುವೆಯಾಗಲು ಇಚ್ಛೆಪಟ್ಟಿದ್ದಾನೆ. ತಾವು ಮತ್ತು ಹರಿಣಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕಷ್ಟೇ. ”

ದಂಪತಿಗಳು ಹರಿಣಿಯ ಮುಖವನ್ನೊಮ್ಮೆ ನೋಡಿದರು.  ವಿಷಯ ಕೇಳಿದಾಕ್ಷಣ ಅವಳ ಕಣ್ಣುಗಳಲ್ಲಿ ಹೊಮ್ಮಿದ  ಕಾಂತಿಯೇ ಸಮ್ಮತಿ ಸೂಚಿಸುತ್ತಿದ್ದವು. ಇವರಿಬ್ಬರೂ ಕೂಡ ಸಂತೋಷದಿಂದ ಒಪ್ಪಿ, ವೇದಿಕೆಗೆ ಬಂದು ಮಾಲೀಕರಿಗೆ ತಮ್ಮ ಸಮ್ಮತಿ ತಿಳಿಸಿದರು. ಕಿವಿಗಡಚಿಕ್ಕುವ ಕರತಾಡನದ ಮಧ್ಯೆ ಹರಿಣಿಯ ವಿವಾಹ ನಿಶ್ಚಯವಾಯ್ತು. ಭದ್ರ ಅಂಕಲ್ ಮಾಡಿದ ಪಾಪಕ್ಕೆ ಪಟ್ಟ ಪ್ರಾಯಶ್ಚಿತ್ತ ಪರಿಪೂರ್ಣವಾಯ್ತು. ದೇವಹಿತವೂ ಆಯ್ತು !

Create a free website or blog at WordPress.com.