ಟೈಂ ಪಾಸ್ ಬರಹಗಳು

ಜುಲೈ 31, 2008

ಅಳಲು

Filed under: kavana — saagari @ 7:48 ಫೂರ್ವಾಹ್ನ

ಹಿಂದೆ ಯಾವತ್ತೋ ಬರೆದಿದ್ದ ಕವನ. ಇವತ್ತು ಕೈಗೆ ಸಿಕ್ಕಿತು…ಇಲ್ಲಿ ಹಾಕ್ತಿದ್ದೇನೆ..timepass ಗೆ !

ಅಳಲು
_________________________________________

ಸಾಗರವದೇನು ಅಲೆಯಿಲ್ಲದಿರಲು ?
ಕ್ಷೀರವದೇನು ಕೆನೆಯಿಲ್ಲದಿರಲು ?
ಆಗಸವದೇನು ರವಿ ಇಲ್ಲದಿರಲು ?
ನನ್ನ ಬಾಳದೇನು ನೀನಿಲ್ಲದಿರಲು ?

ದೇಗುಲವದೇನು ದೇವನಿಲ್ಲದಿರಲು ?
ದೀಪವದೇನು ತೈಲವಿಲ್ಲದಿರಲು ?
ದೇಹವದೇನು ಉಸಿರಿಲ್ಲದಿರಲು ?
ನನ್ನ ಮನಸದೇನು ನೀನಲ್ಲಿಲ್ಲದಿರಲು ?

ನಿನಗಾಗಿ ಕಾದಿರುವೆ ಹಗಲಿರುಳು
ನಾನು ನಾನಲ್ಲ ನೀನಿಲ್ಲದಿರಲು
ನಾನು ಉಳಿಯೊಲ್ಲ ನೀ ಬಾರದಿರಲು
ಇನ್ನಾದರೂ ಕೇಳು ನೀ ನನ್ನೀ ಅಳಲು !

ಜುಲೈ 15, 2008

ನಾಯಿ, ದೇವಲೋಕ, ಮತ್ತು ಆ ಗಾದೆ

Filed under: lalita prabandha — saagari @ 5:53 ಅಪರಾಹ್ನ
ನಾನು ಎಮ್. ಎಸ್ಸಿ ಮುಗಿಸಿದ ಮೇಲೆ ಮನೆಯಲ್ಲಿ ಇರಲೇಬೇಕೆಂದು ಅಪ್ಪ ಅಮ್ಮನ strict order ಆದಮೇಲಂತೂ ನನಗೆ ಅಡಿಗೆ, ಬ್ಲಾಗಿಂಗ್ ಬಿಟ್ಟರೆ ಬೇರೇನು ಕೆಲಸವೇ ಇಲ್ಲ. ಟೈಮ್ ಪಾಸಿಗೆಂದೇ ಒಂದು ಬ್ಲಾಗ್ ಪ್ರಾರಂಭಿಸಿ ಅನ್ನಿಸಿದ ಕಥೆ ಕವನವನ್ನೆಲ್ಲಾ ಗೀಚಲು ಆರಂಭಿಸಿದ್ದೇನೆ ಎಂದಮೇಲೆ ನಾನೆಷ್ಟು ಆರಾಮಾಗಿದ್ದೇನೆ ಎಂದು ನಿಮ್ಮೆಲ್ಲರಿಗೂ ಗೊತ್ತಾಗತ್ತೆ.

ಮೊನ್ನೆ ಮದ್ಯಾಹ್ನ ಮನೆ ಗೇಟಿನ ಮುಂದೆ ಬಂದು ನಿಂತೆ. ಏನೂ ವಿಶೇಷವಿರಲಿಲ್ಲ, ಸುಮ್ಮನೇ ಟೈಮ್ ಪಾಸಿಗೆ. ಕರೆಂಟಿರಲಿಲ್ಲ, ಕಂಪ್ಯುಟರ್ ಗೆ ಬ್ರೇಕ್ ಸಿಕ್ಕಿತ್ತು ನನ್ನಿಂದ. ಅಪರಾಹ್ನ ಮೂರು ಘಂಟೆಗೆ ನಮ್ಮ ರಸ್ತೆ ಹೇಗೆ ಕಾಣತ್ತೆ ಅನ್ನೋ ಒಂದು ಕಲ್ಪನೆ ನನಗೆ ಇಷ್ಟು ವರ್ಷಗಳಿಂದ ಇರಲಿಲ್ಲ. ಅದನ್ನು ಪ್ರತ್ಯಕ್ಷ ನೋಡಲು ಮೊನ್ನೆ ಇದ್ದಕ್ಕಿದ್ದ ಹಾಗೇ ಅನ್ನಿಸಿತು…ಅನ್ನಿಸಿದ್ದನ್ನು ಮಾಡಬೇಕೆಂಬುದು ನನ್ನ ಪಾಲಿಸಿ.

ಪಕ್ಕದ ಮನೆಯವರು ಅವರ ಮನೆ ಮೇಲೆ ಇನ್ನೊಂದು ಮನೆ ಕಟ್ಟಿಸುತ್ತಿದ್ದಾರೆ…ಅದರ ಧೂಳು, ಇಟ್ಟಿಗೆ, ಮರಳು ರಸ್ತೆಯನ್ನು ವ್ಯಾಪಿಸಿ ಒಂಥರಾ ಮಬ್ಬುಗೊಳಿಸಿತ್ತು. ಬೆಂಗಳೂರಿನ ನಾಗರಿಕರ ಗುಣಲಕ್ಷಣವನ್ನು ಎತ್ತಿ ತೋರಿಸುವಂತೆ, ಎಲ್ಲರ ಮನೆಯ ಬಾಗಿಲುಗಳೂ ಬಿಗಿಯಾಗಿಯೇ ಜಡಿದಿದ್ದವು. ಮರಗಳು ಆಷಾಢದ ಗಾಳಿಗೆ ಓಲಾಡುತ್ತಿದ್ದವು. ಇವೆಲ್ಲದರ ಮಧ್ಯೆ ನಾನು ಕಿಂಕರ್ತವ್ಯಮೂಢಳಾಗಿ ಗೇಟಿನ ಮುಂದೆ ರಸ್ತೆಯನ್ನು ದಿಟ್ಟಿಸುತ್ತಾ ನಿಂತಿದ್ದೆ.

ನಮ್ಮ ಬೀದಿಯಲ್ಲಿ ಎರಡು ನಾಯಿಗಳಿವೆ. ಒಂದರ ಹೆಸರು ಟಿಪ್ಪು. ಇನ್ನೊಂದರ ಹೆಸರು ವಿವಾದದಲ್ಲಿ ಸಿಲುಕಿರುವಾಗಲೇ ಆ ನಾಯಿ ಶಿವನ ಪಾದ ಸೇರಿತೆಂದು ವರದಿ ಬಂದಿತು. ಅದಕ್ಕೆ ರೋಹಿಣಿ ಮತ್ತು ಟೋನಿ ಎಂಬ ಎರಡು ಹೆಸರಿದ್ದವು. ಆದರೆ ಅದರ ಹೆಸರು ಯಾವುದೆಂದು ಯಾರೂ ನಿರ್ಧರಿಸಲು ಆಗಿಲ್ಲವಾದ್ದರಿಂದ ನಾನು ಅವೆರಡೂ ಹೆಸರನ್ನು ಸೇರಿಸಿ ಟೋಹಿನಿ ಎಂದು ನಾಮಕರಣ ಮಾಡುವ ಹೊತ್ತಿಗೆ ಅದು ದೈವಾಧೀನವಾಗಿತ್ತು.

ಇದನ್ನು ಇಲ್ಲಿ ಯಾಕೆ ಬರೆದೆನೆಂದರೆ, ನಾನು ಕಿಂಕರ್ತವ್ಯಮೂಢಳಾಗಿ ನಿಂತಿದ್ದಾಗ ಟಿಪ್ಪುವಿನ ಆಗಮನವಾಯ್ತು. ಅದೂ ನಮ್ಮ ಮನೆಯ ಗೇಟಿನ ಮುಂದೆಯೇ.

ಬಂದದ್ದೇ ನನ್ನ ನೋಡಿ ಅದು ಸಲ್ಪ ದಿಗ್ಭ್ರಮೆಗೊಂಡಿತು. ಬಾಯಿ ಬಿಟ್ಟು ಆಶ್ಚರ್ಯಚಕಿತವಾಗಿ ನನ್ನನ್ನೇ ದಿಟ್ಟಿಸಿ ನೋಡಿತು ಬೇರೆ !

ನಾನು : ಏನೋ ಟಿಪ್ಪು….ಹೇಗಿದ್ದೀಯ ?

ಅದು : ಕೇಳ್ಬೇಡ.

ಈಗ ದಿಗ್ಭ್ರಮೆಗೊಳ್ಳುವ ಸರದಿ ನನ್ನದಾಗಿತ್ತು. ನಾಯಿ ಮನುಷ್ಯರ ದನಿಯಲ್ಲಿ ಮಾತಾಡುತ್ತಿತ್ತು…ಅದೂ ನಮ್ಮ ಟಿಪ್ಪು !

ನಾನು : ಯಾಕೋ, ಅಮ್ಮ bread ಹಾಕೋದನ್ನ ನಿಲ್ಲಿಸಿದರಾ ?

ಅದು : ಇಲ್ಲ, ಸಂಪದ್ಭರಿತವಾಗಿ ಊಟಗಳು ಸಿಗುತ್ತಿವೆ. ಜನ ಊಟವನ್ನ ಚೆನ್ನಾಗೇ ಚೆಲ್ಲುತ್ತಿದ್ದಾರೆ. ಸದ್ಯಕ್ಕೆ ತೊಂದರೆ ಅದಲ್ಲ.

ನಾನು: ಆಹ…11.3 % inflation rate ನಲ್ಲೂ ಜನ ಊಟ ಚೆನ್ನಾಗೇ ಚೆಲ್ಲುತ್ತಿದ್ದಾರೆಯೇ ? ಭೇಷ್ ! ಮತ್ತಿನ್ನೇನು ತೊಂದರೆ ನಿಂದು ?

ಅದು: ಗಾದೆಯಿಂದ ನಮ್ಮ ಮಾನ ಮರ್ಯಾದೆ ಹರಾಜಾಗಿದೆ !

ನಾನು : ಗಾದೆನೆಲ್ಲಾ ಬೈಯ್ಯಬೇಡ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ತಿಳಿಯಿತೇ ?

ಅದು : ಹಾಗಂತ ನಮ್ಮ ಮಾನ ತೆಗೆಯುವುದು ಎಷ್ಟು ಸರಿ ?

ನಾನು : ನಿನ್ನ ಮಾನ ಕಳೆದಿರುವ ಗಾದೆ ಯಾವುದು ?

ಅದು : ನಾವು ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲವಂತೆ ?

ನಾನು : ಹೌದು, ಹಾಳಾಗುವುದಿಲ್ಲ.

ಅದು : ನೀವು ಭಕ್ತಿಯಿಂದ ಕೇಳಿಕೊಂದರೆ ಅಥವ ಕುಪಿತಗೊಂಡರೆ ದೇವಲೋಕಕ್ಕೆ ಒಳಿತು ಕೆಡಕುಗಳಾಅಗುತ್ತವೆಯೋ ?

ನಾನು : ಹೌದು.

ಅದು : ನಿನ್ನ ತಲೆ !

ನನಗೆ ರೇಗಿ ಹೋಯ್ತು. ನಾಯಿಯೊಂದು ಈ ತರಹ ನನ್ನನ್ನ ಬೈದಿದ್ದು ನನಗೆ ಸರ್ವಥಾ ಸಮ್ಮತವಾಗಲಿಲ್ಲ. ನಾನಂದೆ, ನೋಡು, sound waves do not travel through vacuum, ಅದಕ್ಕೆ ನಿನ್ನ ಬೊಗಳಿಕೆ ದೇವಲೋಕಕ್ಕೆ ಕೇಳೋಲ್ಲ.

ಅದು : ನೀವು ಗಂಟೆ ಜಾಗಟೆಗಳನ್ನ ಬಾರಿಸಿದರೆ ಕೇಳತ್ತೋ ?

ನಾನು for the first time, struck ಆದೆ. ನನ್ನದೇ physics ನಲ್ಲಿ !

ಅದು : see ! you people don’t know what you are doing ! don’t think we don’t know and understand English, we wear collars…which implies we are taught to obey orders in English !

shock ಆಗೋದೆ ನಾನು !!

ನಾನು ನಮ್ಮ ಮನುಕುಲದ ಮರ್ಯಾದೆ ಹೀಗೆ ಹರಾಜಾವುದನ್ನು ನೋಡಲು ತಯಾರಿರಲಿಲ್ಲ. ನಾನಂದೆ, ನೋಡು, ನಾವು ಮನಸ್ಸಿಟ್ಟು ಪ್ರಾರ್ಥನೆ ಮಾಡುತ್ತೀವಿ…ಅದು ದೇವರನ್ನ ಮುಟ್ಟತ್ತೆ.

ಅದು : ನಮಗೆ ಮನಸ್ಸಿಲ್ಲ ಅಂತ ನೀವು ಹೇಗೆ assume ಮಾಡಿಕೊಂಡಿರಿ ? ನಮಗೆ ಮಾತು, ಬೈಗುಳ, ಪ್ರಾರ್ಥನೆ, ಎಲ್ಲ ಬೊಗಳಿಕೆಯೇ. ಹಾಗಾದರೆ ನಮ್ಮ ಪ್ರಾರ್ಥನೆ ದೇವರು ಕೇಳಿಸಿಕೊಳ್ಳುವುದಿಲ್ಲವೇ ? ನಿಮ್ಮ ಮಾತು ಮಾತು, ನಮ್ಮ ಬೊಗಳಿಕೆ ಮಾತೇ ಅಲ್ಲವೇ ? ಹ ? ಮಾತಾಡು ! rather, ಬೊಗಳು !

checkmate question !ನಾಯಿಯೊಂದರ ಮುಂದೆ ನಾನು ನಿರುತ್ತರಳಾದೆ !

ಅದು ಮುಂದುವರಿಸಿತು. ನೋಡು, ನಮಗೂ ಮನಸ್ಸಿದೆ. ನೀವು ನಮ್ಮ ಬೊಗಳಿಕೆಯನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ಅನ್ನುವ ಮಾತ್ರಕ್ಕೆ ದೇವಲೋಕವನ್ನು ಅದು ತಲುಪುವುದಿಲ್ಲ ಎಂದುಕೊಳ್ಳಬೇಡ. ಆನೆ ಕೂಗಿದ್ದಕ್ಕೆ ವಿಷ್ಣು ಬಂದ, ನಾವು ಕೂಗಿದರೆ ಹರಿಹರಬ್ರಹ್ಮಾದಿಗಳು ಬರ್ತಾರೆ ! ತಿಳೀತಾ ? ನಾವು ವಿಶ್ವ ಶ್ವಾನ ಹಕ್ಕು ಪುನಸ್ಸ್ಥಾಪನಾ ಸಂಘದಿಂದ ಆಷಾಢ ಅಮಾವಾಸ್ಯೆಯಂದು ಒಕ್ಕೊರಲಿನಿಂದ ಬೊಗಳಿ ಮತ್ತು ಊಳಿಟ್ಟು ನಮ್ಮ ಬೇಡಿಕೆಯನ್ನು ಸಲ್ಲಿಸಲಿದ್ದೇವೆ. ನೋಡು ಆಗ ಏನಾಗತ್ತೆ ಅಂತ !

ಅಷ್ಟೊತ್ತಿಗೆ ಅಮ್ಮ ” ಲೇ…ಏನೆ ಮಾಡ್ತಿದ್ಯಾ…ಗೇಟ್ ಮೇಲೆ ನಿದ್ದೆ ಮಾಡುವ ಹಣೆಬರಹ ಯಾಕೆ ? ನೋಡಿದವರು ಹಾಸಿಗೆ ಗತಿ ಇಲ್ಲ ಅಂದುಕೊಳ್ಳಬೇಕೆ ? “

ಕಣ್ಣು ಬಿಟ್ಟೆ.ಅಯ್ಯೋ…ನಾನು ನಿದ್ದೆ ಮಾಡಿದ್ದೆನೆ ? ಅದೂ ಗೇಟ್ ಮುಂದೆ ನಿಂತು ತೂಕಡಿಸಿದ್ದೆನೆ ? ಕನಸು ಬೇರೆ ಬಿದ್ದಿತ್ತೇ ? ಟಿಪ್ಪೂ ? ಮಾಯ ! ಸದ್ಯ…ಕನಸಿನಲ್ಲಿ ಅವಮಾನ ಆಯ್ತು…ನಿಜವಾಗಿಯೂ ಅಲ್ಲ !

ಅಮ್ಮ : ನೋಡಿದವರು ಆಡಿಕೊಳ್ಳುತ್ತಾರೆ…ಹುಡುಗಿ ಹೊರಗೆ ಸುಮ್ಮನೆ ಕಣ್ಣಾಡಿಸುತ್ತ ಇರ್ತಾಳೆ ಕೆಲ್ಸ ಇಲ್ಲದೇ !

ನಾನು : ಬಿಡಮ್ಮ…ನಾಯಿ ಬೊಗಳಿದರೆ…

ನನಗೆ ಯಾಕೋ ಆ ಗಾದೆ ಹೇಳಲು ಮನಸ್ಸೇ ಆಗಲಿಲ್ಲ.

ಜುಲೈ 10, 2008

ಹೀಗೊಂದು ಮಾತಿದೆಯಂತೆ….

Filed under: kavana — saagari @ 5:30 ಅಪರಾಹ್ನ

ಹೀಗೊಂದು ಮಾತಿದೆಯಂತೆ
ಲೋಕದಲ್ಲಿ ಚಂದ್ರನನ್ನು
ಕಾತರದಿ ನೋಡುವವರು
ಇಬ್ಬರೇ ಇಬ್ಬರಂತೆ;
ಒಬ್ಬ ಕವಿಯಂತೆ,
ಇನ್ನೊಬ್ಬ ಪ್ರೇಮಿಯಂತೆ !

ಕವಿಯು ಪ್ರೇಮಕವಿತೆ
ನಿನ್ನ ನೋಡಿ ಬರೆದರೆ
ಪ್ರೇಮಿ ನಿನ್ನ ನೋಡಿ
ತಾ ಕವಿಯಾಗುವನಂತೆ !
ಅಮಾವಾಸ್ಯೆಯನ್ನ ಇಬ್ಬರೂ
ವಿಪರೀತ ಬೈವರಂತೆ !!

ನಿನ್ನ ನೋಡಿ ಕಲಿಯಬೇಕು
ಅಂತ ಕವಿ ಅಂದನಂತೆ
ಕುಗ್ಗಿ ಹಿಗ್ಗಿ ಬದುಕೇ ಇದೆಂದು
ನೀನೆ ಅವನಿಗೆ ಹೇಳಿದೆಯಂತೆ !
ನೀನಿಲ್ಲದೇ ಅವನ ಕಾವ್ಯ
ಪೂರ್ಣವೇ ಅಲ್ಲವಂತೆ !

ಪ್ರೇಮಿ ನಿನ್ನ ಋಣಿಯಂತೆ
ಪ್ರೇಯಸಿಗೆ ತನ್ನ ದೂತನಾಗಿ
ಬೇರಾರೂ ಸಲ್ಲರಂತೆ
ಮೌನವನ್ನೇ ಮಾತಾಗಿಸುವ
ಕಲೆಯದು ನಿನಗಿಂತ
ಬೇರಾರಿಗೂ ಚೆನ್ನಾಗಿ ಒಲಿದಿಲ್ಲವಂತೆ !

ನಿನಗೆ ಶಾಪಸಿಕ್ಕಿದ್ದು ಪಾಪವಂತೆ
ನೀನು ಲೋಕಕ್ಕೆ ದೀಪವಂತೆ
ನಿನ್ನ ನೋಡೆ ಮನದ ತಾಪ
ಮಾತಾಡದೇ ಕಥೆಯಿಲ್ಲದೇ
ಸುಮ್ಮನೆ ತಾನಿಳಿವುದಂತೆ !

ಜಗವೇ ನೀನೊಂದು ವಿಸ್ಮಯ

Filed under: kavana — saagari @ 4:30 ಫೂರ್ವಾಹ್ನ

ಕರಿಮೋಡದೊಡಲಲ್ಲಿ ಹನಿಮುತ್ತನಿಟ್ಟು
ಕಡುರಾತ್ರಿ ನಂತರದಿ ತಿಳಿಹಗಲನಿಟ್ಟು
ಕೆಡುಕಿನೊಳಗೆ ಒಳಿತನಡಗಿಸಿಹ
ಜಗವೇ ನೀನೊಂದು ವಿಸ್ಮಯ !

ಆಕಾಶದನಂತತೆಯಲಿ ಆನಂದವಿಟ್ಟು
ಅಬ್ಧಿಯಪ್ಪಳಿಕೆಯಲಿ ಆಸೆಯಿಟ್ಟು
ಆಸೆಯಿಂದ ಆನಂದವಂ ಅನ್ವೇಷಿಸಲು
ಪ್ರೇರಿಪ ಜಗವೇ ನೀನೊಂದು ವಿಸ್ಮಯ !

ಒಂದೆಡೆ ಹಿಮ ಇನ್ನೊಂದೆಡೆ ರಣಬಿಸಿಲು
ಒಂದೆಡೆ ಸಾಗರ ಮತ್ತೊಂದೆಡೆ ಮರುಭೂಮಿ
ಒಂದೇ ಭೂಮಿಯಲಿ ಹಲವು ಬಗೆಯ
ಹವೆಯಿಟ್ಟ- ಜಗವೇ ನೀನೊಂದು ವಿಸ್ಮಯ !

ಮಣ್ಣಲ್ಲಿ ಚಿನ್ನವಿಟ್ಟು ಚಿಪ್ಪಲ್ಲಿ ಮುತ್ತನಿಟ್ಟು
ಕಲ್ಲಲ್ಲಿ ವಜ್ರವಿಟ್ಟು ಅದಿರಲ್ಲಿ ಲೋಹವಿಟ್ಟು
ಹುಡುಕಲದ ನಾವು ಕಷ್ಟಪಟ್ಟು ಅದುವೆ ನೋಡು
ಸುಖದ ಗುಟ್ಟು ಎಂಬ ಜಗವೇ ನೀನೊಂದು ವಿಸ್ಮಯ !

ಜುಲೈ 9, 2008

ಗಂಗೆಯ ಸ್ವಗತ

Filed under: kavana — saagari @ 7:34 ಫೂರ್ವಾಹ್ನ

ಮಾನಸ ಗಂಗೋತ್ರಿಯ ಮುಗ್ಧ ಮಾನಿನಿ ನಾನು
ಕೈಲಾಸದ ಕಮನೀಯನ ಕೈಹಿಡಿಯ ಬಯಸಿದೆನು
ಶಿವಗಂಗೆಯರ ಮಿಲನ ಲೋಕಕೇಕೆ ರುಚಿಸದು ?
ಜಹ್ನುವಂಥ ಕಾಲ ನಮ್ಮನೇಕೆ ಸೇರಗೊಡದು ?

ಆದರೂ ಜಾಹ್ನವಿಯಾಗಿ ಹೊರಬಂದೆ ನಾನು
ಮಂದಾಕಿನಿಯಾಗಿ ನಿನ್ನ ಸೇರೆ ಹವಣಿಸಿದೆನು
ಅಲಕೆ ನೀನಳುಕದಿದಿರೆಂದು ನೀ ಕೇದಾರದಲ್ಲಿ ನಿಂತೆ
ನಾ ಬರುವ ವೇಳೆಗೆ ನೀ ಕಲ್ಲಾದೆಯಂತೆ ?

ಹತಾಶ ವಿಪಾಶೆ ನಾ ಭಾಗೀರಥಿಯಾದೆ
ನಿನ್ನ ಹೇಗಾದರೂ ಸೇರಿಯೇ ತೀರುವೆನೆಂದೆ
ಸಾಗರದಾಚೆ ಅರಸಿದೆ, ಧರೆಯೆಲ್ಲಾ ಅಲೆದೆ
ಸುಂದರವನವ ನಿರ್ಮಿಸಿ ನಿನಗಾಗಿ ನಾ ಕಾದೆ

ನೋಡಲೆಂದು ನೀನನ್ನ ದುಃಖ ಹರಿಯು ದ್ವಾರ ತೆಗೆದನು
ತನ್ನ ಗೆಳತಿ ಅತ್ತಳೆಂದು ಯಮುನೆ ಕಪ್ಪಗಾದಳು
ಕೋಪದಿಂದ ಸರಸ್ವತಿ ತಾನೂ ಕೆಂಪಗಾದಳು
ಗುಪ್ತವಾಗಿ ನಿನ್ನವಳು ಪಾಪ ಹುಡುಕಹೊರಟಳು !

ಆಗದೆಂದೇ ಬಗೆದೆ ನಾ ನಮ್ಮಿಬ್ಬರ ಸಮಾಗಮ
ಲೋಕಕೆಲ್ಲಿ ತಿಳಿಯುವುದು ನಿಷ್ಕಾಮ ಪ್ರೇಮ
ಕಡೆಗೊಂದು ದಿನ ಬಿತ್ತೆನ್ನಮೇಲೆ ಪುಟ್ಟದೊಂದು ಹನಿ
ಹೇಳಿತದು ನನಗೆ ನಿನ್ನ ಮನದಾಳದ ಧ್ವನಿ

ನೀ ಬರುವೆಯಂತೆ ಹೀಗೆಯೇ ಮಳೆಯ ಹನಿಯಾಗಿ
ನೊಂದ ನನ್ನೀಮನಕೆ ಸಾಂತ್ವನದ ನುಡಿಯಾಗಿ
ಶ್ರಾವಣದ ಮೂದಲ ದಿನ ಬಂದೆ ನೀ ಮಳೆಯಾಗಿ
ನಿಂತಿತೆಮ್ಮ ಮಿಲನಕೆ ಇಳೆಬಾನು ಸಾಕ್ಷಿಯಾಗಿ

ಜುಲೈ 7, 2008

ಅರ್ಪಣೆ

Filed under: dedication,first post,hanigavana — saagari @ 12:32 ಅಪರಾಹ್ನ

ಇಂದು ನಡೆದ ಅನಿರೀಕ್ಷಿತ ಎಸ್.ಎಮ್.ಎಸ್ ಸಂಭಾಷಣೆಯೊಂದು ಈ ಬ್ಲಾಗಿಗೆ ಪೋಸ್ಟ್ ಒಂದನ್ನು ಬರೆಯಲು ಅವಕಾಶ ಒದಗಿಸಿತು.

ನಡೆದದ್ದು ಇಷ್ಟು :

ಮಧ್ಯಾಹ್ನದ ತುಂತುರು ಮಳೆಯಲ್ಲಿ ಯಾಕೋ ನೆನೆಯಬೇಕೆನಿಸಿತು. ಟೆರೇಸ್ ಮೇಲೆ ಹೋದೆ ನೆನೆಯಲು. ಆಗ ಸುಮ್ಮನೆ ಟೈಮ್ ಪಾಸ್ ಗೆ ಒಂದು ಹನಿಕವನ ಬರೆಯೋಣ ಅನ್ನಿಸಿ ಈ ಕವನ ಬರೆದೆ:

ನೀನಿನ್ನೂ ಸಿಗದಿದ್ದಾಗ ಮಳೆ ನೀರಬೀಳಾಗಿತ್ತು
ನೀ ಸಿಕ್ಕಾಗ ಮಳೆ ಮುತ್ತಗಣಿಯಾಯ್ತು
ನೀನೆನ್ನ ಅಗಲಿದಾಗ ಮಳೆ ನನ್ನ ಅಳುವಾಯ್ತು
ನಿನ್ನ ನೆನಪ ಮುತ್ತ ಹೊತ್ತು ಮಳೆಯಿಂದು ಹನಿಯುತ್ತಿತ್ತು.

ಇದನ್ನು ನಮ್ಮನಾಡಿನ ಸದಸ್ಯರಿಗೆಲ್ಲರಿಗೂ ಎಸ್.ಎಮ್.ಎಸ್ ಮಾಡಿದೆ. ಐದು ನಿಮಷದಲ್ಲಿ ಗುರುಗಳಾದ ಅರುಣರ ಮೆಸೇಜಿದೆಯೆಂದು ಹಿರಣ್ಮಯಿ ಹೇಳಿದಳು. ಅವರು ಕವನವನ್ನು ಈ ರೀತಿ ಮುಂದುವರೆಸಿದ್ದರು…

ಇಂದು ಮಳೆಯ ಹನಿಯಾಯ್ತು
ಅದುವೆ ಮನದ ದನಿಯಾಯ್ತು
ದನಿಯು ಹನಿಯ ಜೊತೆಗೂಡಿ
ಜಗವೆ ಸುಖದ ಖನಿಯಾಯ್ತು !

ನಾನು ಹಿರಣ್ಮಯಿಯ ದೂತೆಯ ಮೂಲಕ “ಆಹಾ ! ಸೂಪರ್ರು ! ” ಎಂದು ಸಂದೇಶ ಮುಟ್ಟಿಸಿದೆ. ಮತ್ತೆ ಐದು ನಿಮಿಷದಲ್ಲಿ ಹಿರಣ್ಮಯಿ ಮತ್ತೊಂದು ಸಂದೇಶವೆಂದಳು. ಗುರುಗುಳು ಹೀಗೆಂದಿದ್ದರು…

ಕವನವದು ನಿನ್ನದೇ, ಪದವು ಮಾತ್ರ ನನ್ನದೆರಡು
ಭಾವ,ಜೀವ,ಜಾವ ನಿನ್ನದೇ !
ಭಲೆಯು ಭೇಷು ಎಲ್ಲಾ ನಿನಗೆ, ನಾನು ಇಲ್ಲಿ ಬರಿಯೆ ಕುರುಡು !

ನಾನು ಹೀಗೆಂದೆ :

ಕವನ ನನ್ನದಾದರೇನು ಅಕ್ಷರ ತಮ್ಮ ದೇಯವು !
ಭಲೇ ಭೇಷ್ ಎನಗೆಂದರೂ ಅದು ತಮ್ಮವೇ ಸರ್ವವೂ !

ಅರುಣರಿಂದಲೇ ನಾನು ಕವನ ಬರೆಯಲು ಕಲಿತದ್ದು ! ನನಗೆ ಕವನಗಳು ಬರೆಯುವುದು ನಿಜವಾಗಿಯೂ ಬರುತ್ತಿರಲಿಲ್ಲ. ನಮ್ಮನಾಡಿಗೆ ನನ್ನ ಸೇರ್ಪಡೆಯಾದ ಮೇಲೆ ಗುರುಗಳ ಬ್ಲಾಗ್ ಓದಿ ಓದಿ ಕವನ ಬರೆಯುವುದರ “ಅ ಆ ಇ ಈ…”ಯ ಅಭ್ಯಾಸವಾಯ್ತು. ಅಲ್ಲಿಂದ ಹಿಡಿದು ನಾನು ಇಲ್ಲಿಯವರೆಗೂ ಬಂದಿದ್ದೇನೆಂದರೆ ಇದೆಲ್ಲ ಅವರ ಕರುಣೆ, ನನ್ನ ಪ್ರಯತ್ನ ಅಷ್ಟೇ ! ಆದ್ದರಿಂದ ಈ ಬ್ಲಾಗಿನ ಪ್ರಥಮ ಪೋಸ್ಟನ್ನು ಗುರುಗಳಿಗೆ ಅರ್ಪಿಸುತ್ತಿದ್ದೇನೆ.

ಥ್ಯಾಂಕ್ಸ್ ಗುರುಗಳೆ !

Blog at WordPress.com.