ಕಾಂಕ್ರೀಟು ಕಾಡಿನಲ್ಲಿ ಜೀವನ ಸಾಕಾಗಿ
ಹೊರಹೋಗಲೂ ಆಗದೆ ಕಟ್ಟಿ ಹಾಕಿದಂತಾಗಿ
ಮನಸ್ಸು ಚಿಂತೆಯಲ್ಲಿ ಚಿತೆಯಾಗಿರುವಾಗ
ಟೆರೇಸೇ ನಮ್ಮ ಏಕಾಂತದ ಜಾಗ
ನೆನಪಿನ ದೋಣಿಗೆ ಅಂಬಿಗ ಟೆರೇಸು
ಹುಟ್ಟು ಹಾಕುವುದರಲ್ಲಿ ಸ್ಪೀಡ್ ಪೇಸು
ಒಬ್ಬನೇ ಪಯಣಿಗನಿದ್ದರೆ ಲೇಸು
ಕೊಡಬೇಕಿಲ್ಲ ಇದಕ್ಕೆ ಯಾವುದೇ ಫೀಸು !
ವ್ಯಾಯಾಮವಿರಲಿ ಬೆಳದಿಂಗಳೂಟವಿರಲಿ
ಸಂಡಿಗೆಗಳ ಮಾಡಿ ಒಣಗಿಸಲಿಕ್ಕಾಗಲಿ
ಮನೆಯಲ್ಲಿ ಶುಭಕಾರ್ಯ ಯಾವುದೇ ಬರಲಿ
ಟೆರೇಸಿಗಿಂತ ಪ್ರಶಸ್ತ ಜಾಗ ಬೇಕೇ ಹೇಳಿ ?
ಈಗೀಗ ಹೆಚ್ಚುತ್ತಿದೆ ಅಪಾರ್ಟ್ಮೆಂಟ್ ಅಬ್ಬರ
ಕಡಿಮೆಯಾಗುತ್ತಿದೆ ಟೆರೇಸಿನ ಮರ್ಮರ
ಟೆರೇಸಲ್ಲಿ ನಿಂತು ಚಂದ್ರನ ನೋಡದವರ
ಜೀವನ ನಿಜವಾಗಿಯೂ ಮಹಾದುಸ್ತರ.
ಈ ಕವನ ಬರೆಯಲು ಒಂದು ಕಾರಣ ಇದೆ. ನಮ್ಮ ಮನೆಯ ಇಕ್ಕೆಲಗಳಲ್ಲೂ ನಾಲ್ಕು ನಾಲ್ಕು ಅಂತಸ್ತಿನ ಮನೆಗಳು ಬಂದು ನನಗೆ ಸೂರ್ಯ ಚಂದ್ರರನ್ನೂ ನೋಡದ ಹಾಗಾಗಿದೆ. ಕೋಲು ಬಿಸಿಲೂ ಕಾಣದಾಗಿದೆ. ನಮ್ಮ ಮನೆಯ ಟೆರೇಸು ನನ್ನ favourite ಜಾಗ. ಈಗ ಅಲ್ಲಿ ಹೋಗದ ಹಾಗೆ ಆಗೋಗಿದೆ. ಹೋದರೆ ಮನೆಗಳಲ್ಲಿ, ವಟ ವಟಾ..ಡಬ ಡಬ ಶಬ್ದ…ಶಾಂತಿಯೇ ಇಲ್ಲ !! ನನ್ನ ಆಲೋಚನೆ, ಆತ್ಮಾವಲೋಕನಕ್ಕೆ ಇದ್ದ ಏಕೈಕ ಜಾಗವನ್ನು ನನ್ನಿಂದ ಕಿತ್ತುಕೊಂಡ hopeless ನಗರೀಕರಣದ ಬಗ್ಗೆ ನನಗೆ ಜಿಗುಪ್ಸೆ ಬಂದಿದೆ. ಅದಕ್ಕೆ ಇದನ್ನ ಬರ್ದಿದಿನಿ.