ಟೈಂ ಪಾಸ್ ಬರಹಗಳು

ಮಾರ್ಚ್ 18, 2009

ಆತ್ಮಹತ್ಯೆ-ಭಾಗ ೨

Filed under: lalita prabandha — saagari @ 10:53 ಅಪರಾಹ್ನ

ಇನ್ನೇನು ಬಾವಿಯೊಳಗೆ ಬೀಳಬೇಕಿತ್ತು ನಾನು…ನನ್ನ ಕೈ ಹಿಡಿದು ಹಿಂದಕ್ಕೆ ಯಾರೋ ಎಳೆದ ಹಾಗಾಯ್ತು. ನಾನೋ…ದೊಡ್ಡ ಮನುಷ್ಯಳು…ಬಾವಿಯನ್ನು ದಿಟ್ಟಿಸಿ ನೋಡಲು ಭಯವಾಗಿ ಕಣ್ಣನ್ನು ಮುಚ್ಚಿಬಿಟ್ಟಿದ್ದೆ. ಹಿಂದೆ ಇಂದ ಬಂದ ಆಗಂತುಕ ನನ್ನನ್ನು ಎಳೆದಿದ್ದೇ ತಡ, ಎಲ್ಲಿ ಬೀಳುತ್ತಿದ್ದೇನೆ ಎಂಬ ಅರಿವಿಲ್ಲದೇ, ಏನಾಗುತ್ತಿದೆ ಎಂಬ ಸುಳಿವಿಲ್ಲದೇ, ನನ್ನನ್ನು ಹಿಡಿದೆಳೆದ ಕಡೆ ಬಿದ್ದೆ. ನೀರಲ್ಲಿ ಬಿದ್ದಾಗ ಬರುವ ಶಬ್ದ ಬರಲಿಲ್ಲವಾದ್ದರಿಂದ ನೆಲದ ಮೇಲೆ ಬಿದ್ದಿರುವೆ ಎಂದು ನಾನು ಬಿದ್ದ ಮೇಲೆ ಗೊತ್ತಾಯ್ತು. ಹಾಗೆ ಬಿದ್ದರೂ ತಲೆಗೆ ಪೆಟ್ಟು ಬೀಳದ ಹಾಗೆ ಬಿದ್ದೆ…ನನ್ನ ದುರದೃಷ್ಟ, ಹಾಗೂ ನಾನು ಸಾಯಲಿಲ್ಲ !

ನನ್ನ ಕರ್ಮವನ್ನು ಮನಸಾರೆ ಬೈದುಕೊಳ್ಳುತ್ತಾ ಮೆಲ್ಲಗೆ ಕಣ್ಣು ಬಿಟ್ಟೆ. ನನ್ನನ್ನು ಸಾಯುವುದಕ್ಕೆ ಬಿಡದ ಆ ಪಾಪಾತ್ಮ ಯಾರು ಅಂತ ಸುತ್ತೆಲ್ಲಾ ಒಮ್ಮೆ ನೋಡಿದೆ. ಒಂದೈದು ಅಡಿ ದೂರದಲ್ಲಿ ಒಬ್ಬ ಯುವಕ ನಿಂತಿದ್ದ. ನನಗೆ ಒಮ್ಮೆಲೆ ಅನುಮಾನ ಶುರುವಾಯ್ತು. ವಯಸ್ಸು ಇಪ್ಪತ್ತಾರು ಮೀರಿರಲಿಕ್ಕಿಲ್ಲ..ಇವನೊಬ್ಬನೇ ಇಲ್ಲ್ಯಾಕೆ ಬಂದ ? ನೋಡಕ್ಕೆ ಬೇರೆ ಚೆನ್ನಾಗಿದ್ದಾನೆ. ನನ್ನ ಹಿಂದೆಯೇ ಯಾಕೆ ಬಂದ ? ನನ್ನನ್ನು ಉಳಿಸಿ ಇವನು ಹೀರೋ ಆಗಬೇಕಂತ ನಿರ್ಧರಿಸಿದ್ದಾನಾ ?ಆಥವಾ ಇವನು ಅಂಡರ್ವರ್ಲ್ಡ್ ಕಡೆಯವನಾ ? ಈ   ಪ್ರಶ್ನೆಗಳ ಮಧ್ಯದಲ್ಲಿ ನಾನು ಸಾಯಲು ಬಂದಿದ್ದೇನೆ ಅನ್ನೋದು ಮರೆತೇ ಹೋಗಿತ್ತು ನನಗೆ…ಅವನು ಮಾತನಾಡಿಸುವವರೆಗೂ !

“ಏನ್ ಮೇಡಮ್…ಕಣ್ಣು ಕಾಣಲ್ವಾ ನಿಮಗೆ ? ಬೋರ್ಡ್ ಹಾಕಿದ್ದೀವಿ ಅಲ್ಲಿ…ಕಾಣಲ್ಲ ? ಅಲ್ಲಿ ಬಾವಿಯ ಸ್ವಲ್ಪ ಕೆಳಗೆ ಗ್ರಿಲ್ ಹಾಕಿ ಮುಚ್ಚಿಲ್ಲ ? ಕಣ್ಮುಚ್ಕೊಂಡ್ ಸಾಯ್ತಾರೆ ! ಇಲ್ಲಿ ಬಿದ್ದರೆ ಬರಿ ಮೂಳೆ ಮುರಿಯತ್ತೆ ಹೊರತು ನಿಮ್ಮ ಪ್ರಾಣ ಹೋಗಲ್ಲ, ತಿಳ್ಕೊಳಿ. ಆಮೇಲೆ ಕಾಪಾಡಿ ಕಾಪಾಡಿ ಅಂತ ಕಿರುಚಿಕೊಳ್ಳೂತ್ತೀರಾ ಬೇರೆ ! ನಾವ್ ಬಂದು..ನಿಮ್ಮನ್ನ ಮೇಲಕ್ಕೆ ಎತ್ತಬೇಕು ! ಏನ್ ಕರ್ಮ !” ಅಂದ.

ನನಗಂತೂ ಸಿಕ್ಕಾಪಟ್ಟೆ ಕೋಪ ಬಂತು. ಅವನಷ್ಟೇ ಎತ್ತರದ ದನಿಯಲ್ಲಿ ನಾನು ಉತ್ತರಿಸಿದೆ ” ನಿಮ್ಮನ್ನ ಕಾಪಾಡಿ ಅಂತ ಕೇಳಿದೆನೇನ್ರಿ ನಾನು ? ಹಾಂ ? ಬಿದ್ದು ಉಪವಾಸ ಸಾಯ್ತಿದ್ದೆ ಹೊರತು ನಿಮ್ಮನ್ನು ಕಾಪಾಡಿ ಅಂತ ಕೇಳ್ತಿರ್ಲಿಲ್ಲ…ಇದನ್ನ ನೀವೂ ತಿಳ್ಕೊಳೀ ! ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಸಾಯಣಾ ಅಂತ ಬಂದ್ರೆ…ನೀವು ನನ್ನ ಬದುಕಿಸಿ ಹೀರೋ ಆಗ್ಬೇಕೂ ಅಂತ ಇದ್ದೀರಾ ? ಅದೂ ಅಲ್ದೇ…ಸಾಯಕ್ಕೆ ಅಂತ ಬಂದಿರೋರ್ಗೆ ವರದ ಹಾಗೆ ಈ ಪಾಳು ಬಾವಿ ಇದ್ರೆ, ಇದನ್ನ renovate ಮಾಡ್ತಿದ್ದೀರಲ್ಲ..ಬುದ್ಧಿ ಇದ್ಯೆನ್ರಿ ನಿಮಗೆ ? ಎಲ್ಲಿ ಸಾಯ್ಬೇಕ್ ಮತ್ತೆ ನಾವು ?” ಹತಾಶಳಾಗಿ ಕೇಳಿದೆ.

“ನೀವು ನಿಜ್ವಾಗ್ಲು ಸೀರಿಯಸ್ಸಾಗಿ ಸಾಯ್ಬೇಕೂ ಅಂತ ಇದ್ದೀರಾ ?”

“ಇನ್ನೇನು ಇದೇನು ಆಟ ನಾ ? start , end, restart ಅಂತೆಲ್ಲಾ ಬಟನ್ ಒತ್ತಿಕೊಂಡು ಇರಕ್ಕೆ ?ಅಥವಾ ಇದೇನು ನಾಟಕ ನಾ? ಫಿಲಮ್ಮಾ ? rehearsal ಒಂದು ಸರ್ತಿ…take ಒಂದ್ಸರ್ತಿ…ಜೋಕ್ ಒಂದ್ ಸರ್ತಿ…ಸೀರಿಯಸ್ ಒಂದ್ ಸರ್ತಿ ಅಂತೆಲ್ಲಾ ಆಡಕ್ಕೆ ?” ಸ್ವಲ್ಪ ಜೋರಾಗಿಯ ಹೇಳಿದೆ.

“ನಿಮಗೆ ನಿಜವಾಗೂ ಸಾಯಕ್ಕೆ ಇಷ್ಟ ಇದ್ದರೆ ನನ್ನ ಜೊತೆ ಬನ್ನಿ.”

“ನಾನು ಬರಲ್ಲ.”

“ಯಾಕೆ ಮೇಡಮ್ ? ನನ್ನನ್ನು ಧೈರ್ಯವಾಗಿ ನಂಬಿ. ನಾವು ಸಾಯುವವರನ್ನು ತಡೆಯುವವರಲ್ಲ…ಅವರಿಗೆ ಸರಿಯಾಗಿ ಸಾಯುವ ಮಾರ್ಗ ತೋರುವಂಥವರು” ಅಂದ.

“ಸರಿಯಾಗಿ ಸಾಯುವ” ಅನ್ನೋ ಪದವನ್ನ ಅವನು ಒತ್ತಿ ಹೇಳಿದ್ರಿಂದ ನನ್ನ ಅನುಮಾನ ಕಡಿಮೆಯಾಗುವ ಬದಲು ಇನ್ನಷ್ಟು ಜಾಸ್ತಿಯಾಯ್ತು.ಇವನು ಟೋಪಿ ಹಾಕುವ ಪಾರ್ಟಿಯೇ  ಅಂತ ನನಗೆ ನಂಬಿಕೆಯಾಯ್ತು. ಸತ್ತರೆ ನೀಟಾಗಿ ಸಾಯಬೇಕು. ಹೆಂಗೆಂಗೋ ಸತ್ತರೆ ಮನೆಯ ಮಾನ ಮರ್ಯಾದೆ ? ಮಾಡೋ ಕೆಲಸವನ್ನ ನೀಟಾಗಿ ಮಾಡಬೇಕು ಅಂತ ಶಾಲೆಯಲ್ಲಿ ಕಡ್ಡಿ ಏಟು ಕೊಟ್ಟು ಹೇಳಿಕೊಟ್ಟಿದ್ದರು. ಸರಿಯಾಗಿ ಸಾಯಿಸುತ್ತೇನೆ ಅಂದು ನನಗೆ ಮತ್ತು ಬರಿಸುವ ಔಷಧಿ ಕೊಟ್ಟುಬಿಟ್ಟರೆ ? ನನ್ನನ್ನು ಬೇರೆ ಎಲ್ಲೋ ಕರೆದುಕೊಂಡು ಹೋಗಿಬಿಟ್ಟರೆ ? ಏನೆಲ್ಲಾ ಭಯ ! ನಾನು -” ಏನೇ ಮಾಡಿದ್ರೂ ಬರಲ್ಲ” ಅಂದೆ. ಅದಕ್ಕೆ ಅವ,

” ಅಲ್ಲಿ ಮನೆ ಕಾಣ್ತಿದ್ಯಲ್ಲ, ಅಲ್ಲಿ ನಿಧಾನಕ್ಕೆ ಕೂತು, ಒಂದಷ್ಟ್ ತಿಂಡಿ ಊಟ  ತಿಂದು,ಶಕ್ತಿ ಬರಿಸಿಕೊಂಡು ಸಾಯ್ತಿರಂತೆ…ಸಾಯೋದ್ ಸಾಯ್ತಿರಾ..ನೀಟಾಗಿ ಸಾಯ್ರಿ.ನಾವು ಸಹಾಯ ಮಾಡ್ತಿವಿ”

“ಇಲ್ಲ…ನೀವೆ ಸಾಯ್ಸಿಬಿಡ್ತಿರಾ…ನಾನೇ ಸಾಯ್ಬೇಕು. ಇದು ಆತ್ಮಹತ್ಯೆ ಆಗ್ಬೇಕು…ಕೊಲೆಯಲ್ಲ”

“ಮೇಡಮ್…ನಿಮ್ಮನ್ನ  ಖಂಡಿತಾ ಕೊಲೆ ಮಾಡಲ್ಲ…ನೀವು ಆತ್ಮಹತ್ಯೆ ನೆ ಮಾಡ್ಕೊತೀರಂತೆ…ಪ್ಲೀಸ್ ಬನ್ನಿ..ಈ ಮುಚ್ಚಿದ ಬಾವಿಯ ಹಿಂದಿನ ರಹಸ್ಯ ತಿಳ್ಕೊಳ್ಳಕ್ಕಾದ್ರು ಬನ್ನಿ..”

ಇನ್ಯಾವ ಚಿದಂಬರ ರಹಸ್ಯ ಇರಬಹುದು ಇದು ಎಂದು ತಿಳಿಯಲು ನಾನು ಧೈರ್ಯ ಮಾಡಿ ಹೊರಟೆಬಿಟ್ಟೆ ಅವನ ಹಿಂದೆ.

ನಾನು ಸುಮ್ಮನೆ ಇದ್ದೆ. ಅವನೇ ಮಾತು ಶುರು ಮಾಡಿದ. “ಯಾಕ್ ಸಾಯ್ತಿದಿರಿ ?”

“ನಮ್ಮ ಮನೆಯರ ನನಗೆ ಸಿಕ್ಕಾಪಟ್ಟೆ ಅವಮಾನ ಮಾಡಿದ್ರು…ನಿನಗೆ ಏನೂ ಮಾಡಕ್ಕೆ ಬರಲ್ಲ…ನೀನು ನಿಷ್ಪ್ರಯೋಜಕಿ ಅಂತೆಲ್ಲಾ ಅಂದುಬಿಟ್ರು…ಅದಕ್ಕೆ ನನಗೆ ಸಾಕ್ಕೆ ಬರತ್ತೆ ಅಂತ ತೋರ್ಸಕ್ಕೆ ಸಾಯ್ತಿದಿನಿ” ಅಂದೆ.

“ಭೇಷ್ ! ಮೆಚ್ಚದೆ ನಿಮ್ಮ ಶೌರ್ಯ ನಾ ! ”

“ಥ್ಯಾಂಕ್ಸ್”

” ನೀವು ನನಗೆ ಸಿಕ್ಕಿದ್ದು ಒಳ್ಳೆದೇ ಆಯ್ತು”

ಅವನ ಕಡೆ ಹುಬ್ಬೇರಿಸಿ ನೋಡಿದೆ.

“ನೀವು ಸಾಯಕ್ಕೆ  ನಿಶ್ಚಯ ಮಾಡಿದ್ದೀರಿ ಅಂದ ಮೇಲೆ ನಾನು ನಿಮಗೆ ನಮ್ಮ ಸಂಘದ ಬಗ್ಗೆ ಹೇಳಲೇ ಬೇಕು”

“ಎಂಥಾ ಸಂಘ ? ”

“ಆತ್ಮಹತ್ಯೆ incognito”

“ಅಯ್ಯೋ…ಸಾಯ್ಬೇಡಿ ಅಂತ ಲೆಕ್ಚರ್ರ್ ಕೊಡ್ತಿರಾ ? ನನಗೆ ಗೊ..”

“ಶ್ !!!!!!!!!!!!! ಮಾತಾಡ್ಬೇಡಿ…ನಾವು ಸಾಯೋರನ್ನ ತಡೆಯುವವರಲ್ಲ…ಸಾಯಲು ದಾರಿ ತೋರಿಸುವವರು ಅಂತ ಆಗಲೆ ಹೇಳಿದೆನಲ್ಲ ! ನಾವು ಯಾರ್ಯಾರು ಯಾವ್ಯಾವ ರೀತಿ ಸಾಯಬಹುದೆಂದು ಸಲಹೆ ನೀಡುವ  consultants.”

ನಾನು ಪಿಳಿ ಪಿಳಿ  ನೋಡಿದೆ. ಅಲ್ಲಾ…ಸಾಯೋದು ಬೇಡ ಎಂದು ಕೌನ್ಸೆಲ್ ಮಾಡುವವರನ್ನು ನೋಡಿದ್ದೇನೆ. ಇದೆಂಥದ್ದು ಸಾಯಲು consultancy ? ಇವನು ಖಂಡಿತಾ ತಲೆ ಸರಿಯಿಲ್ಲದ ಮನುಷ್ಯ ಎಂದುಕೊಂಡು ಇವನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಣ್ಣಲ್ಲೇ ಹುಡುಕತೊಡಗಿದೆ.

“ನನ್ನಿಂದ ತಪ್ಪಿಸಿಕೊಳ್ಳಕ್ಕೆ ಆಗಲ್ಲ ನೀವು”

“ದೇವ್ರೆ ! ಏನಪ್ಪಾ ಇವನು mind read ಮಾಡ್ತಿದಾನೆ ! ಛೆ…ದೇವ !ನಾನು ಏನು ಒಲಂಪಿಕ್ಸ್ ಪದಕ ಕೇಳಿದೆನೆ ಅಥವಾ ನೊಬೆಲ್ ಪಾರಿತೋಷಕ ಕೇಳಿದೆನೆ ನಿನ್ನ ? ಜಸ್ಟ್ ಸಾಯ್ಬೇಕು ಅಂತ ಅಷ್ಟೇ ಕೇಳಿದ್ದು. ಅದಕ್ಕೆ ನೀನು ಇಷ್ಟು ಕಾಡಿಸಬಹುದೇ ? ಈ ದೇಹದಿಂದ ದೂರವಾಗು ಬೇಗ ಆತ್ಮನೇ…ಈ ಸಾವು ಖಂಡಿತಾ ನ್ಯಾಯವೇ…ಎಲ್ಲಾ ಜಡ್ಜುಗಳ ಮೇಲಾಣೆ ! ” ಎಂದು ನಾನು ಅಂದುಕೊಳ್ಳುತ್ತಿರುವಾಗಲೇ ಒಂದು ಪಾಳು ಬಿದ್ದ ಮನೆಯ ಹತ್ತಿರ ಬಂದುಬಿಟ್ಟಿದ್ದೆವು. ನಾನು  ಬಂದ ಗೇಟೆಲ್ಲಾದರೂ ಕಂಡೀತೆ ಎಂದು ಹುಡುಕಿದೆ. ಅದನ್ನೂ ಗ್ರಹಿಸಿದ ಆ ಯುವಕ,

“ನೀವು ಬಂದ ಗೇಟು ಈ ಕಡೆ ಇಲ್ಲ. ಹುಡುಕಿ ಪ್ರಯೋಜನ ಇಲ್ಲ ” ಎಂದು ಆ ಪಾಳುಮನೆಯ ಬಾಗಿಲನ್ನು ಬಡಿದ. ನನಗೆ ಯಾಕೋ ಆಲಿಬಾಬನ ಕಥೆ ನೆನಪಾಯ್ತು. ಬಾಗಿಲು ತೆರೆದಿದ್ದು ಮತ್ತೊಬ್ಬ ಹುಡುಗ. ಇವನಷ್ಟೇ ವಯಸ್ಸಿರಬಹುದು ಅಥವಾ ಚಿಕ್ಕವನಿರಬಹುದು..ಕೈಯಲ್ಲಿ ಲ್ಯಾಪ್ ಟಾಪ್ ಪೊಂದನ್ನು ಹಿಡಿದಿದ್ದ. ನನ್ನನ್ನು ನೋಡಿದ ತಕ್ಷಣ “Welcome to ಆತ್ಮಹತ್ಯೆ incognito” ಎಂದು  ಅಲ್ಲೇ ಇದ್ದಿದ್ದರಲ್ಲಿ ಸ್ವಲ್ಪ ನೀಟಾಗಿದ್ದ ಪಾಳು ಬಿದ್ದ ಹಾಲಲ್ಲಿ ಚೇರು ಹಾಕಿ ನಮ್ಮನ್ನುಕೂರಿಸಿ laptop  ನನ್ನ ಕೈಯಲ್ಲಿ ಇಟ್ಟ. ನಾನು ಫುಲ್ಲ್ ಖುಷ್ !  ಮನೆಯಲ್ಲಿ ಇದ್ದ ಐದು ವರ್ಷ ಹಳೆಯ ಕಂಪ್ಯೂಟರ್ರಿಗೆ ಆರು ಜನ ಸರದಿಯಲ್ಲಿ ನಿಲ್ಲುತ್ತಿದ್ದೆವು. ನಾನು ಪ್ರಾಜೆಕ್ಟ್ ಗೆ ಪ್ರಿಪೇರ್ ಆಗುವಾಗಲೇ ಅಣ್ಣನಿಗೆಯಾಹೂ ನಲ್ಲಿ ಅವನ ಮಿತ್ರ ವರ್ಗದ ಕಾನ್ಫೆರೆನ್ಸು, ಅಕ್ಕನಿಗೆ ಸ್ಕೈಪಲ್ಲಿ ಕಾಲು, ಅಪ್ಪನಿಗೆ ಈಮೈಲು, ಅಮ್ಮನಿಗೆ ಚಾಟು,ತಮ್ಮನಿಗೆ ಆರ್ಕುಟ್ಟು ! ನನ್ನದು ಅಂತ ಒಂದು ಲ್ಯಾಪ್ ಟಾಪ್ ಇರಬೇಕೆಂದು ನನಗೆ ಬಹಳಾ ಆಸೆ ಇತ್ತು ! ಇವ ನನ್ನ ಕೈಲಿ ಅದನ್ನ ಇಟ್ಟಮೇಲೆ ನಾನು ಸಾಯಲು ಬಂದಿದ್ದೇನೆಂದುಮರೆತೇ ಹೋಗಿತ್ತು…ಈ ಯುವಕ ನೆನಪಿಸುವ ವರೆಗೂ !

“ಮೇಡಮ್,  ನೀವು ಸಾಯಕ್ಕೆ ಬಂದಿದ್ದೀರ ಹೌದಲ್ಲ? ಇದು ಮೊದಲನೇ ಮೆಟ್ಟಿಲು. ಸ್ವಿಚ್ ಆನ್ ಮಾಡಿ.”

ಕೈಯಲ್ಲಿ ಎಂದೂ ಲ್ಯಾಪ್ ಟಾಪನ್ನು ಹಿಡಿಯದಿದ್ದ ನಾನು ಸ್ವಿಚ್ಚಿಗೆ ಹುಡುಕತೊಡಗಿದೆ. ಅವನು laptop  ನ ಹಿಂದೆಗೆದುಕೊಂಡು ಅವನೇ ಸ್ವಿಚ್ ಆನ್ ಮಾಡಿದ. ನನ್ನ ಮೂಡ್ ಸ್ವಿಚ್ ಆಫ್ ಆಯ್ತು ! ನೆಟ್ಟಗೆ ನೋಡಲೂ ಬಿಡದೇ ಐದೇ ಸೆಕೆಂಡುಗಳಲ್ಲಿ ಲ್ಯಾಪ್ಟಾಪ್ ಕಸಿದುಕೊಂಡದ್ದಕ್ಕೆ ನನಗೆ ಕೋಪವೂ ಬಂತು. ಆದರೆ ಎಲ್ಲೂ ಎದ್ದು ಹೋಗುವ ಹಾಗಿರಲಿಲ್ಲ. ಮಿಕಿ ಮಿಕಿ ನೋಡಿದೆ.  ಆಮೇಲೆ ಅವನು ಮಾನಿಟರ್ ತಿರುಗಿಸಿ, “ಇದು ಒಂದು ಸಣ್ಣ application form. ಇದನ್ನ fill up ಮಾಡಿ . ಇದು ಎರಡನೇ ಮೆಟ್ಟಿಲು.”ಅಂದ.

“ನೀವು ಆತ್ಮಹತ್ಯೆ ನ ಮೊದಲನೇ ಅಟೆಂಪ್ಟಿನಲ್ಲೇ successful ಆಗಿ ಮಾಡ್ಕೋಬೇಕಂತ coaching classes ಶುರು ಮಾಡಿದ್ದೀರಾ ? ಅದಕ್ಕೇನಾ ಫಾರ್ಮು ?

good guess..detailed coaching class ಅಲ್ಲ,crash course. ಒಂದು ಹತ್ತು ಹದಿನೈದು ನಿಮಿಷ ಅಷ್ಟೇ !

ನನ್ನ ಗೆಸ್ಸುಗಳು ಎಂದೂ ತಪ್ಪಾಗುತ್ತಿರಲಿಲ್ಲ. ನಾನು ಕೆಲವೊಮ್ಮೆ ಹೀಗಾಗಬಹುದೆಂದು ನುಡಿದಿದ್ದರೆ ಹಾಗೇ ಆಗುತ್ತಿತ್ತು. ಮನೆಯಲ್ಲಿ ಎಲ್ಲರೂ ನನ್ನನ್ನು ಶಕುನದ ಪಕ್ಷಿ ಅಂತ ಕರೆಯುತ್ತಿದ್ದರು. ನನ್ನನ್ನು ಹಾಗಂತ ಗೌರವದಂದ ನಡೆಸಿಕೊಳ್ಳುತ್ತಿದ್ದರು ಅಂತ ಅಲ್ಲ…ನಾನು ಹೇಳಿದ್ದು ಎಲ್ಲಿ ನಿಜ ಆಗತ್ತೋ ಅಂತ ಹೆದರಿ ನನ್ನೊಂದಿಗೆ ಯಾರೂ ಮಾತಿಗೆ ಬರುತ್ತಲೇ ಇರಲಿಲ್ಲ. ನನ್ನ ಬುದ್ಧಿ ಮೇಲೆ ನನಗೇ ನಂಬಿಕೆ ಹೊರಟುಹೋಗಿತ್ತು.ಇದನ್ನೆಲ್ಲಾ ಯೋಚಿಸುತ್ತಿರುವಾಗ  ಫಾರ್ಮಿನ ಮೊದಲನೇ ಪೇಜು ತೆರೆಯ ಮೇಲೆ ಮೂಡಿಬಂತು. ಆಂಗ್ಲದಲ್ಲದೇ,ಫೀಲ್ಡ್ ಗಳು ಕನ್ನಡದಲ್ಲಿಯೂ ಇದ್ದಿದ್ದು ನನಗೆ ಖುಷಿ ತಂತು.user interface ಕೂಡಾ ನೋಡಲು ತುಂಬಾ ಆಕರ್ಷಣೀಯವಾಗತ್ತು. ನಾನು,

“ವಾವ್ ರಿ…ಎಂಥಾ ಅದ್ಭುತವಾದ ಟೆಕ್ನಾಲಜಿ ಇಟ್ಟಿದ್ದೀರಾ..ಯಾರು ಡೆವೆಲಪ್ ಮಾಡಿದ್ದು ರಿ ಈ ಸಾಫ್ಟ್ ವೇರ್ ನಾ ?”

“ಅದೆಲ್ಲಾ ನಿಮಗೆ ಕಡೆಯಲ್ಲಿ ತಳಿಸುವೆ. ಮೊದಲು ಫಾರಮ್  ಭರ್ತಿಮಾಡಿ. all fields are compulsory”

ನಾನು ತಲೆಯಲ್ಲಾಡಿಸಿ ಅಲ್ಲಿರುವ ಫೀಲ್ಡ್ ಗಳನ್ನ ಸೂಕ್ಷ್ಮವಾಗಿ ನೋಡಿದೆ. ಹೆಸರು, ತಂದೆ ತಾಯಿ ಹೆಸರು, ಮನೆ ವಿಳಾಸ ,ಫೋನ್,ಮೊಬೈಲ್ ಎಲ್ಲಾ ಇದ್ದವು.

“ಇದೆಲ್ಲಾ ಯಾಕ್ ಬೇಕು ನಿಮಗೆ ?”

“ನೀವು ಈಗ ಮನೆಯಿಂದ ಕಾಣೆಯಾಗಿದ್ದೀರ.ನಿಮ್ಮವರು ಪೋಲಿಸ್ ಮೊರೆ ಹೋಗುವ ಹೊತ್ತಿಗೆ ನೀವು ಪರಲೋಕ ಸೇರಿರುತ್ತೀರ.ನಿಮ್ಮ ದೇಹ ಕೊಳೆತು ಹಾಳಾದ ಮೇಲೆ ನಿಮ್ಮವರೆಲ್ಲಾ ಗೋಳಾಡಲು ಹೆಚ್ಚು ಸಮಯ ಸಿಗಲ್ಲ. ಸಂಸ್ಕಾರ ಮಾಡಿಬಿಡಬೇಕಾಗತ್ತೆ. ನಿಮ್ಮವರು ನಿಮ್ಮನ್ನ ನೆನಸಿಕೊಂಡು ಇನ್ನೂ ಚೆನ್ನಾಗಿ ಅಳಲಿ ಅನ್ನೋ ಸದುದ್ದೇಶದಿಂದ ನಾವು ನೀವು ಸತ್ತ ತಕ್ಷಣ ಫೋನಾಯಿಸುತ್ತೇವೆ. ಪೋಲೀಸಿಗೆ ಮತ್ತೆ ನಿಮ್ಮ ಬಾಂಧರಿಗೆ. ನಿಮ್ಮನ್ನು ಗೋಳಾಡಿಸಿದವರು ಗೋಳಾಡಬೇಕಲ್ಲವೇ ?

ಹೌದ್ ಹೌದ್. ಒಳ್ಳೇದು. ಆದರೆ ನೀವ್ ಫೋನ್ ಮಾಡಿದರೆ ಅವರಿಗೆ ನಿಮ್ಮ ಮೇಲೆ ಅನುಮಾನ ಬರಲ್ವಾ ?

ಯಾಕ್ ಬರತ್ತೆ ?  we are incognito, ಅನುಮಾನ ಬರಲ್ಲ.

“ಭೇಷ್ !” ಅಂದು ಎಲ್ಲಾ ವಿವರವನ್ನು ಸಾಂಗೋಪಾಂಗವಾಗಿ ನೀಡಿದೆ. ಮುಂದಿನ ಪೇಜ್ ಗೆ ಹೋಗಲು ಕ್ಲಿಕ್ಕಿಸಿದೆ.

ಮುಂದಿನ ಪೇಜಿನ ಫೀಲ್ಡ್ ಒಂದು ಹೀಗಿತ್ತು: ನೀವು ಸಾಯುತ್ತಿರುವ ಕಾರಣ ?

ನಾನು ಜಿಗುಪ್ಸೆ ಎಂದು ಬರೆದೆ.

ತಕ್ಷಣ ಇನ್ನೊಂದು ಪಾಪ್ ಅಪ್ ವಿಂಡೋ ಲಿ- ” ಜಿಗುಪ್ಸೆ ಎಷ್ಟಿದೆ ? ಯಾವುದಾದರೂ ಒಂದನ್ನು ಟಿಕ್ ಮಾಡಿ:  ಸ್ವಲ್ಪ(basic),ಹೆಚ್ಚು (medium ),  ಸಿಕ್ಕಾಪಟ್ಟೆ ಜಾಸ್ತಿ (high).

ನಾನು ಆ ಹುಡುಗನನ್ನ ಕೇಳಿದೆ..” ಏನ್ರಿ ಇದು ? ಮೇಕಪ್ ನಲ್ಲಿ ಬೇಸಿಕ್, ಮೀಡಿಯಮ್ ಮತ್ತು ಹೈ ಅಂತೆಲ್ಲಾ ಇರೋ ಹಾಗ ಇದ್ಯಲ್ಲ ?” ಎಷ್ಟೇ ಆಗಲಿ ಮೂರ್ನಾಲ್ಕು ಮದುವೆಗಳಿಗೆ ಐದಾರು ಸಲ ಪಾರ್ಲರ್ ಸುತ್ತಿದವಳು ನಾನು ಅಲ್ಲವೇ ?ಅವನು ನಕ್ಕ.

“you are right ! ನೀವು ಸತ್ತೋಗ್ತಿರಾ. ಪೋಲೀಸ್ ನವರು ನಿಮ್ಮವರನ್ನೆಲ್ಲಾ ಹಿಡಿದು ಪ್ರಶ್ನಿಸುತ್ತಿರುತ್ತಾರೆ. how was the mental makeup ? ಅಂತ ಕೇಳ್ತಾರೆ. ಇವರು ಉತ್ತರಿಸಿದ್ದು ಸರಿಯ ತಪ್ಪೋ ಅಂತ ದೃಢಪಡಿಸಲು ನಾವು ಈ ಫಾರ್ಮ್ ಅನ್ನು ನಿಮ್ಮ ಹೆಣದ ಜೊತೆ ಇಟ್ಟಿರುತ್ತೇವೆ.ಅದನ್ನು ನೋಡಿ ಅವರಿಗೆ ಸತ್ಯ ಗೊತ್ತಾಗುತ್ತೆ. ನಾನು ಆಕ್ಷಣಕ್ಕೆ ನಂಬಿದೆನಾದರೂ, “ಅಲ್ಲಾ…ಫಾರ್ಮ್ ನಲ್ಲಿ ನಿಮ್ಮ ಸಂಘದ ಹೆಸರು ಕಂಡು ನಿಮ್ಮ ಮೇಲೆ ಅನುಮಾನ ಪಟ್ಟರೆ ? “ಎಂದು ಕೇಳಿದೆ. ಅದಕ್ಕೆ ಅವನಂದ ” ನಾವು ಫಾರಂ ನ ಹೆಸರು ಕಾಣದ ಹಾಗೆ ಪ್ರಿಂಟ್ ತೆಗೆಸ್ತಿವಿ. ನಮ್ಮ ಸಂಘದ ಹೆಸರು ಯಾರಿಗೂ ಗೊತ್ತಾಗಲ್ಲ. ನಿಮ್ಮ ಫಾರ್ಮನ್ನು ನ ಆ ಪಾಳು ಬಾವಿಯ ಬಳಿ ಇಟ್ಟು ನಾವು ಹೊರಟು ಹೋಗುತ್ತೇವೆ. ಪಾಳು ಬಿದ್ದ ಈ ಮನೆಯಲ್ಲಿ ಯಾರೂ ಇಲ್ಲವೆಂದುಕೊಂಡಿದ್ದಾರೆ ಪೋಲೀಸ್ ನವರು. ನಾವು ಇಲ್ಲಿರುವುದು ಯಾರಿಗೂ ಗೊತ್ತಿಲ್ಲ !”

“ಏನ್ talented  ರಿ ನೀವು ! Perfect incognito !” ಎಂದು ಉದ್ಗರಿಸಿದೆ ನಾನು. ಅವನು ಒಮ್ಮೆ ನಕ್ಕ. ನಾನು ಮತ್ತೆ ಫಾರ್ಮಿನ ಕಡೆ ಗಮನ ನೀಡಿದೆ. ಮುಂದಿನ ಫೀಲ್ಡ್ ಗಳಲ್ಲಿ ನಾನು ಸಾಯಲು ಒಂದು ಬಲವಾದ ಕಾರಣ ನೀಡಬೇಕೆಂದು ಕೇಳಿ 1024 characters ಮಾತ್ರ ನಿಗದಿಪಡಿಸಲಾಗಿತ್ತು. ಅಷ್ಟು ಎಲ್ಲಿ ಸಾಕಾಗತ್ತೆ ನನ್ನ ಕಾರಣಗಳ ಪಟ್ಟಿಗೆ ? ಸಮುದ್ರಕ್ಕೆ ಸ್ಪೂನಲ್ಲಿ ನೀರು ಹಾಕಿದ ಹಾಗೆ !   ಏನೇನು ಬರೆಯಲಿ ? ಚಿಕ್ಕ ವಯಸ್ಸಿನಲ್ಲಿ ಸೈಕಲ್ಲು ಕೊಡಿಸಲಿಲ್ಲ ಅಂತ ಹೇಳಿ ಈಗ ಸತ್ತೆ ಅಂತ ಬರೆಯಲೇ ? ತಮ್ಮ ನನ್ನ ಮುದ್ದಿನ ಟೆಡ್ಡಿ ಬೇರನ್ನು ಹರಿದು ಹಾಕಿದ್ದಿಕ್ಕೆ ಸತ್ತೆ ಅಂತ ಬರೆಯಲೆ ? ಅಥವಾ  ಅಕ್ಕ, ಅಣ್ಣ ನಾನು ಓದಿದ್ದು ಕಡಿಮೆ, ಅಲೆದಿದ್ದು ಜಾಸ್ತಿ, ದುಡ್ಡನ್ನು ಯರ್ರಾ ಬಿರ್ರಿ ಖರ್ಚು ಮಾಡ್ತಾಳೆ, ಬಸ್ ಪಾಸಿದ್ದರೂ ಆಟೋ ಲಿ ಓಡಾಡ್ತಾಳೆ ಅಂತ ಬೈತಾರೆ ಅಂತ ಸತ್ತೆ ಅಂತ ಬರೆಯಲೆ ?ಎಂಭತ್ತು ಪರ್ಸೆಂಟು ತಗೊಂಡರೂ ನೀವು ” ಸಾಲದು !” ಅಂತ ಅಂದು ನನಗೆ ನಿರಾಸೆ ಮಾಡಿದ್ದೀರಿ ಅಂತ ಬರೆಯಲೆ ?ಕ್ಯಾಂಪಸ್ಸು ಸೆಲೆಕ್ಷನ್ನು ಲೇಟಾಗಿ ಆತಂಕ ತಡಿಯಲಾಗದೇ ಸತ್ತೆ ಅಂತ ಬರೆಯಲೆ ? ನೀವೆಲ್ಲಾ ಬೈದು ಬೈದು ನನ್ನ ಮನಸ್ಸು ನೋಯಿಸಿದಿರಾ…ಇವತ್ತಂತೂ ಸಿಕ್ಕಾಪಟ್ಟೆ ಬೈದಿದ್ದೀರಾ..ನನಗೆ ಏನೂ ಮಾಡಕ್ಕೆ ಬರಲ್ಲ ಅಂತ ತೇಜೋವಧೆ ಮಾಡಿದ್ದೀರ. ನನಗೆ ಸಾಯಕ್ಕೆ ಬರತ್ತೆ ಅಂತ ತೋರಿಸವುದಕ್ಕೆ ಸತ್ತೆ ಅಂತ ಬರೆಯಲೆ ? ಏನು ಬರೆಯಲಿ ?

ಹತ್ತು ನಿಮಿಷ ಯೋಚನೆ ಮಾಡಿದ ಮೇಲೆ ಕಡೆಯ ಕಾರಣ ಸರಿಯೆಂದು ತೋಚಿತು. ಅದನ್ನೇ ಬರೆದೆ. ಅದಾದ ಮೇಲೆ ಇನ್ನೊಂದು ಫೀಲ್ಡ್ ಇತ್ತು. ನೀವು ಬಾವಿಯಲ್ಲಿ ಹೇಗೆ ಸಾಯಬಯಸುತ್ತೀರಿ  ಎಂದು ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಟಿಕ್ ಮಾಡಿ:

  • ಬಾವಿಯ ನೀರು ಬಿಸಿಯಿರುತ್ತದೆ. ಮೊದಲು ಉಗುರಬೆಚ್ಚಿಗೆ ಇದ್ದು, ಆಮೇಲೆ ಅದು ಕೊತ ಕೊತ ಕುದಿಯುವ ಹಾಗಾಗುತ್ತದೆ. ನೀವು ಕುದಿಯುವ ನೀರಲ್ಲಿ ಬೆಂದು ಸಾಯಬಯಸುವುದಾರೆ ಇಲ್ಲಿ ಕ್ಲಿಕ್ಕಿಸಿ. ನೀವು ಸಾಯುವ ಬಗೆಯನ್ನು ಪೂರ್ವವಿಕ್ಷಣೆ preview ಮಾಡಲು ಇಲ್ಲಿ ಕ್ಲಿಕ್ಕಿಸಿ.

ನಾನೆಂದೂ ತಣ್ಣೀರಿನಲ್ಲಿ ಸ್ನಾನ ಮಾಡಿದವಳಲ್ಲ.  ತೀರ್ಥ ಕುಡಿದರೆ ಶೀತ ಆಗುವಂಥಾ ಅದ್ಭುತ ದೇಹ ಪ್ರಕೃತಿ ಹೊಂದಿರುವ ನನಗೆ ಇದು ಸೂಕ್ತ ಅನ್ನಿಸಿತು. ಅದಕ್ಕೆನಾನು ಪೂರ್ವವೀಕ್ಷಣೆ ಬಟನ್ ಕ್ಲಿಕ್ಕಿಸಿದೆ. ಬೊಂಬೆಯೊಂದು ನೀರಲ್ಲಿ ಬಿತ್ತು. ಮೊದಲು ನೀರಲ್ಲಿ ಹಾಯಾಗಿ ಈಜುತ್ತಿತ್ತು..ಬರುಬರುತ್ತಾ ವಿಲವಿಲ ಒದ್ದಾಡಿತು. ಆಮೇಲೆ ಚಲನ ವಲನ ನಿಂತು ಹೋಯ್ತು. ನನಗೆ ಇದನ್ನು ನೋಡಿ  ಸ್ವಲ್ಪ ಭಯ ಆಯ್ತು. ಆ ಕಿಟಕಿಯ ಪಕ್ಕದಲ್ಲಿ ಬೊಂಬೆ ಸಾಯುವ ಸ್ಪೀಡನ್ನು ಹೆಚ್ಚಿಸುವ ಆಯ್ಕೆಯೂ ಇತ್ತು. ಅದನ್ನು ಮಾಡಿದ ಮೇಲಂತೂ ನನಗೆ ದಿಗಿಲುಂಟಾಯ್ತು. ಕಟಕಿ ಕ್ಲೋಸ್ ಮಾಡಿ ಇನ್ನೊಂದು ಆಯ್ಕೆ ನೋಡಲು ಹೋದೆ.

  • ಬಾವಿಯನ್ನು renovate  ಮಾಡಿದ ಮೇಲೆ roller  ಬ್ಲೇಡುಗಳನ್ನು ಹಾಕಿಸಾಗುತ್ತದೆ. ನಿಮ್ಮ ಕೈ ಕಾಲುಗಳನ್ನುಕತ್ತರಿಸಿ, ನೀವು ಮಿಕ್ಸಿಯಲ್ಲಿ ರುಬ್ಬಿದಂತೆ ನುಣ್ಣಗೆ ಸಾಯಬಹುದು. ಸ್ಪೀಡನ್ನು ನೀವೆ ನಿಗದಿಪಡಿಸಿ. ಪ್ರಿವ್ಯೂ…

ಇದರ ಪ್ರಿವ್ಯೂ ವಿಪರೀತ ಭಯಂಕರವಾಗಿತ್ತು. ಬೊಂಬೆ ಒದ್ದಾಡಿದ್ದು ನಾನೇ ಒದ್ದಾಡಿದ ಹಾಗೆ ಆಯ್ತು.ಕಿಟಾರನೆ ಕಿರುಚಿದೆ. ಅದಕ್ಕೆ ಆ ಯುವಕ- ” ಇಲ್ಲಿ ಕಿರುಚಬಹುದು..ಇದನ್ನ ಆಯ್ದುಕೊಂಡರೆ ನೀವು ಸಾಯುವಾಗ ಕಿರುಚುವ ಹಾಗಿಲ್ಲ. ಮೌನವಾಗಿ ಸಾಯಬೇಕು ” ಅಂದ. ನನ್ನನ್ನು ಕೈಬೀಸಿ ಕರೆಯುತ್ತಿದ್ದ ಸಾವಿನ ತೋಳ್ಬದ ಮೇಲೆ ನನಗೆ ಭಯವುಂಟಾಯ್ತು..ಅದು ಪ್ರೀತಿಯಿಂದ ಆಲಂಗಿಸಬಹುದು…ನಂತರ ಕಬಂಧನಂತೆ ಬಾಹುವಿನಲ್ಲಿ ಹಿಡಿದುಬಿಟ್ಟರೆ ? ಗತಿಯೇನು ? ಸಾಯಲೇ ಬೇಕು ಎಂಬ ನನ್ನ ಧೃಢನಿರ್ಧಾರ ಈಗ ಅಲ್ಲಾಡತೊಡಗಿತು. ಆದರೂ ಸಾಯಲು ಈಗ ಬಂದಾಗಿದೆ. ಸಾಯದಿದ್ದರೆ ನನ್ನ ನಿರ್ಧಾರಕ್ಕೆ ಅವಮಾನ. ಮನಸ್ಸು ಡೋಲಾಯಮಾನವಾಯ್ತು.ಕುರಿಯನ್ನು ಸಾಯಿಸಿದ್ದನ್ನು ನೋಡಿದಾಗ ಇರದ ಭಯ ಈಗ ಕಾಡತೊಡಗಿತು. ಈ ಆಯ್ಕೆಯನ್ನು ಸಾರಾಸಗಟಾಗಿ ನಿರಾಕರಿಸಿ ಮುಂದಿನ ಆಯ್ಕೆಯ ಕಡೆ ಗಮನ ಹರಿಸಿದೆ.

  • ಪೂರ್ತಿ ತಣ್ಣಗಿರುವ ನೀರು. ನೀವು ಹಾಗೆಯೇ ಮುಳುಗಿ ಸಾಯುತ್ತೀರಿ. ಹೆಣ ಮೇಲೆ ಎತ್ತುವಾಗ ಕೈ ಕಾಲು ಏನಾದರೂ ಆದರೆ ನಿಮ್ಮವದ್ದೇನೂ ತಕರಾರಿರಬಾರದು. ಪ್ರಿವ್ಯೂ..

ಇದರ ಪ್ರಿವ್ಯೂ ನೋಡಿದೆ.ಭಯಂಕರವಾಗಿರಲಿಲ್ಲ. ಆದರೆ ತಣ್ಣೀರಲ್ಲಿ ಸಾಯಲು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಬೇರೆ ದಾರಿಯಿಲ್ಲದೇ ಮೊದಲನೆಯ ಆಯ್ಕೆಯನ್ನು ಟಿಕ್ ಮಾಡಿದೆ. ಬಾವಿಯ ಜೀರ್ಣೋದ್ಧಾರದ ಹಿಂದಿನ ಚಿದಂಬರ ರಹಸ್ಯ ಏನು ಅಂತ ನನಗೆ ಆಗ ಗೊತ್ತಾಯ್ತು. ಅದೊಂದು glorified tank. ಎಲ್ಲಾ ಸೌಕರ್ಯಗನ್ನು ಇದು ಹೊಂದಿದ್ದರೂ, ಸಾಯುವ ಛಲವಿದ್ದವರಿಗೆ ಮಾತ್ರ  ಪ್ರವೇಶ !!!

ಆನಂತರ ಮುಂದಿನ ಪೇಜ್ ಗೆ ಹೋದೆ. ಅಲ್ಲಿ ನನ್ನ ಹವ್ಯಾಸಗಳು, ಆಸಕ್ತಿ , ಸಾಧನ, ಇವುಗಳ ಬಗ್ಗೆ ಪ್ರಶ್ನೆ ಇದ್ದವು. ನಾನು ಪ್ರಶ್ನಿಸಲು ಬಾಯ್ಬಿಡುವಷ್ಟರಲ್ಲಿ ಆ ಯುವಕನೇ ಉತ್ತರಿಸಿದ.

“ಮಾರ್ಕೆಟಿಂಗ್ ಗೆ ಮೆಡಮ್…ಎಂಥೆಂಥಾ ಅತಿರಥಮಹಾರಥರು ನಮ್ಮ ಬಳಿ ಕೋರ್ಸ್ ತೆಗೆದುಕೊಂಡು ಸತ್ತಿದ್ದಾರೆ ಅಂತ freshers  ಗೆ ತೋರ್ಸಕ್ಕೆ. left ನಲ್ಲಿ ಒಂದು ಲಿಂಕ್ ಇದೆ. ಅಲ್ಲಿ ಹೋಗಿ ನೋಡಿ ಅಂದ. ನಾನು ಅದನ್ನು ಕ್ಲಿಕ್ಕಿಸಿದೆ.  ಅಲ್ಲೊಂದು ಎಂಟು ಹತ್ತು ಜನರ ಚಿತ್ರಗಳಿದ್ದವು. ಎಲ್ಲರ ಫೋಟೋ ಪಕ್ಕದಲ್ಲಿ ಅವರು ಸತ್ತ ಕಾರಣವನ್ನು ಬರೆಯಲಾಗಿತ್ತು. ಒಬ್ಬ ಸ್ನೇಹಿತರ ಜೊತೆ ಬೆಟ್ಟು ಕಟ್ಟಿ ಸೋತು ಅವಮಾನ ತಾಳಲಾರದೇ ಸತ್ತಿದ್ದರೆ, ಮತ್ತೊಬ್ಬಳು ಆಫೀಸಿನ ಯಾವುದೋ ಹೇಳಲಾಗದ ತೊಂದರೆಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಳು. ಇನ್ನೊಬ್ಬ ಪಿಯುಸಿ ವಿದ್ಯಾರ್ಥಿ  ಗಣಿತದ ಭಯದಿಂದ ಅಸುನೀಗಿದ್ದರೆ, ಇನ್ನೊಬ್ಬ ಗಾಂಜಾ ಅಫೀಮಿನ ಧಂಧೆಯಲ್ಲಿ  ಸಿಕ್ಕಿಬಿದ್ದು ಸಾವಿನ ಮಾರ್ಗ ಹಿಡಿದಿದ್ದ. ಇವರೆಲ್ಲರ ಕಾರಣಗಳಿಗಿಂತ ನನ್ನ ಮನೆಯ ಜಗಳ ದೊಡ್ಡದೇನಲ್ಲ ಅಂತ ನನಗೆ ಅನಿಸಲು ಶುರುವಾಯ್ತು. ಆದರೂ ನನ್ನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು. ಅದನ್ನು ಸುಲಭದಲ್ಲಿ ಮರೆಯಲು ಸಾಧ್ಯವೇ ? ಅದಕ್ಕೆ ನಾನು ಬದುಕಿ ಏನನ್ನು ಸಾಧಸಿದರೂ ನನ್ನ ಫೋಟೋ ಪೇಪರ್ನಲ್ಲಾಗಲಿ ಅಂತರ್ಜಾಲ ತಾಣದಲ್ಲಾಗಲೀ ಬರಲು ಯಾವ ಅವಕಾಶವೂ ಇರಲಿಲ್ಲ. ನಾನು ಸತ್ತಾಗಲಾದರೂ “ಸತ್ತು ಸಾಧಿಸಿದವಳು” ಅಂತ ಬಿರುದು ಕೊಟ್ಟು ನನ್ನ ಫೋಟೋ ಎಲ್ಲಾದರು ಒಂದು ಕಡೆ ಬಂದರೆ ಅದೇ ನನ್ನ ಭಾಗ್ಯ ಅಂದುಕೊಂಡು ಮತ್ತೆ ಹಳೆಯ ಪೇಜಿಗೆ ಬಂದು ನನ್ನ ಆಸಕ್ತಿ, ಅಭಿರುಚಿ ಎಲ್ಲಾ  ಬರೆದೆ. ನಾನು ಚಿಕ್ಕಂದಿನಲ್ಲಿ ಗೆದ್ದ ಪುಟ್ಟ ಪ್ರೈಜಿನಿಂದ ಹಿಡಿದು ಡಿಗ್ರಿಯಲ್ಲಿ ಗೆದ್ದ ಶೀಲ್ಡಿನವರೆಗೂ ಚಾಚೂ ತಪ್ಪದೆ ನನ್ನಎಲ್ಲಾ ಸಾಧನೆಗನ್ನ ಬರೆದೆ.ಅದನ್ನ ಬರೆಯುವಾಗ ಅದೇನೋ ಹೆಮ್ಮೆ ! ನನ್ನ ಫೇವರೈಟ್ ಕವಿ ಡಿ.ವಿ.ಜಿ ಎಂದಾಗ ಆ ಯುವಕ ನನ್ನನ್ನ ಕೇಳಿದ – “ಕಗ್ಗ ಓದಿದ್ದೀರಾ ?”

ನಾನು ಹೂಂ ಎಂದೆ. ಅವನು ನಕ್ಕ.

ನಾನು ನೆಕ್ಸ್ಟ್ ಪೇಜ್ ಗೆ ಬಂದಾಗ ಆತ್ಮಹತ್ಯೆಯ ಪಾಠ ಆರಂಭವಾಯ್ತು. ನೀವು ಸಾಯಲು ತಯಾರಿದ್ದೀರಾ ? ಅಂತ ಪ್ರಶ್ನೆ ಕೇಳಿ ನಾನು ಆಯ್ಕೆ ಮಾಡಿದ್ದ ರೀತಿಯ ವಿಡಿಯೋ ಕೆಳಗಿತ್ತು. ನಾನು ನಿರ್ಭಯವಾಗಿ “ಎಸ್” ಕ್ಲಿಕ್ ಮಾಡಿದೆ.

ಅದು ನೋಡಿದರೆ ಒಂದೇ slide show ಇರುವ ಕೋರ್ಸು ! ಅದರಲ್ಲಿ-

  • ಸಾಯುವಾಗ ಕಣ್ತೆರೆದು ಅನುಭವಿಸಿ ಸಾಯಿರಿ.ಆಮೇಲೆ ನಿಮ್ಮ ಕಣ್ಣನ್ನು ನಾವು ಮುಚ್ಚುತ್ತೇವೆ.
  • ಯಾವುದೇ ಕಾರಣಕ್ಕೂ ನೀವು ಗಲಾಟೆ ಮಾಡುತ್ತಾ, ಕಿರುಚಾಡುತ್ತಾ ಸಾಯಬಾರದು. ಮೌನವಾಗಿ ಸಾಯಬೇಕು.
  • ನೀವು ಸತ್ತ ಮೇಲೆ ಬಾವಿಯನ್ನು ಕ್ಲೀನ್ ಮಾಡಿಬೇಕಾಗತ್ತೆ. ಅದಕ್ಕೆ ನೀವು ಮೊದಲೇ ಹಣ ತೆರಬೇಕು. ಹಣವಿಲ್ದಿದ್ದರೆ ಚಿನ್ನದಿಂದಲೂ ಕೆಲ್ಸ ನಡೆಯುತ್ತದೆ. ಅಪ್ಪ/ಅಮ್ಮನ ಕ್ರೆಡಿತ್ ಕಾರ್ಡ್ ನಂಬರ್ ಇದ್ದರೆ ಅತ್ಯುತ್ತಮ.ಹೆದರ ಬೇಡಿ, ನಾವೇನು ಸುಲಿಗೆ ಮಾಡೋದಿಲ್ಲ. ನಮ್ಮ ಫೀಸ್ ಐದು ಸಾವಿರ ಅಷ್ಟೇ !

ಕಡೆಯ ಪಾಯಿಂಟ್ ನೋಡಿ ನನಗೆ ಸಿಕ್ಕಾಪಟ್ಟೆಕೋಪ ಬಂತು. ಅಲ್ಲಾ…ನಾನು ಸಾಯಲು ನಾನೇ ದುಡ್ಡು ಕೊಡಬೇಕೆ ?ಜಿಪುಣ ಸಾಮ್ರ್ಯಾಜ್ಯದ ಅಧಿರಾಜ್ಞಿಯಾದ ನನಗೆ ಇದು ಸರ್ವಥಾ ಒಪ್ಪಿಗೆಯಾಗಲಿಲ್ಲ. ಬಿದ್ದು ಸಾಯಲು  ಬಿಟ್ಟಿ ಬಾವಿಯಿದ್ದಾಗ ಸಾಯಲು ಈ ದೊಣ್ಣೆ ..ಅಲ್ಲಲ್ಲ…ಲ್ಯಾಪ್ ಟಾಪ್ ನಾಯಕನ ಅಪ್ಪಣೆ ಯಾಕೆ ? ಸಿಡಿಮಿಡಿಗೊಂಡು ಆ ಯುವಕನನ್ನ ಹಾಗೇ ಕೇಳಿಯೂ ಬಿಟ್ಟೆ. ಅದಕ್ಕೆ ಅವ – “health and hygiene  ಬದುಕಿದ್ದಾಗ ಮಾತ್ರ ಪಾಲಿಸಿದರೆ ಸಾಲದು, ಸಾಯುವಾಗಲು ಪಾಲಸಬೇಕು. ನೀವು ಸತ್ತ ಮೇಲೆ ಬಾವಿ unhygienic ಆಗಿರತ್ತೆ. ಅದರಲ್ಲಿ ಬೇರೆಯವರು ಸಾಯಕ್ಕೆ ಇಷ್ಟ ಪಡಲ್ಲ. ನೀವೆ ಇಷ್ಟ ಪಡ್ತಿರಾ ಹೇಳಿ ? ಅದಕ್ಕೆ ಐದು ಸಾವಿರ. ನಾವು ವರ್ಕರ್ಸ್ ನ ನೋಡ್ಕೋಬೇಕಲ್ಲ…”

ಪರಮ ಜುಗ್ಗಿಯಾದ ನಾನು ಇದೊಂದು ವಿಷಯಕ್ಕಾಗಿ ಒಪ್ಪಲೇಬೇಕಾಯ್ತು. ನನ್ನ ಬಳಿ ಹಣವಿರಲಿಲ್ಲ. ಅದಕ್ಕೆ ನಮ್ಮ ತಾತ ನನಗೆ ಕೊಟ್ಟಿದ್ದ ಚಿನ್ನದ ಸರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಚ್ಚಿ ಆ ಯುವಕನ ಕೈಲಿತ್ತೆ. ಮೊಬೈಲನ್ನೂ ಸಹ ಕೊಟ್ಟೆ.ಅವನು..ಮುಂದಿನ ಫಾರ್ಮಾಲಿಟೀಸ್ ಮುಗಿಸಿ ಅಂತ ಸ್ಕ್ರೀನ್ ತೋರಿಸಿದ. ನಾನು next page  ಒತ್ತಿದ ಮೇಲೆ ನಾನು ಸಾಯಲು ಯಾವ ರೀತಿಯಲ್ಲಿ ಹಣ ಪಾವತಿಸಿದ್ದೇನೆ ಅಂತ ಬರೆಯಲು ಒಂದು ಕಾಲಂ ಇತ್ತು. ಅದನ್ನು ಭರ್ತಿ ಮಾಡಿ “ಡನ್” ಎಂದು ಒತ್ತಿದ ಮೇಲೆ..”wish you a very happy journey to the heavens” ಎಂಬ ಹಾರೈಕೆಯೊಂದಿಗೆ ನನ್ನ ಆತ್ಮಹತ್ಯೆ ಪಾಠ ಮುಗಿಯಿತು.

ನೆಮ್ಮದಿಯ ನಿಟ್ಟುಸಿರು ಬಿಟ್ಟು ನಾನು ” ಈಗ ಬಾವಿಗೆ ಹೋಗಬಹುದಲ್ವಾ ?” ಅಂದೆ. ಅವನು, “ಇಲ್ಲಾ…ಬೆಳಿಗ್ಗೆ ಬೇಗನೆ ಬಂದು ಒಬ್ಬರು ಕೋರ್ಸ್ ತಗೊಂಡು ಹೋದವರು ಈಗಷ್ಟೇ ಸತ್ತಿದ್ದಾರೆ. ಕ್ಲೀನಿಂಗ್ ನಡಿತಿದೆ. ಇನ್ನೊಂದು ಅರ್ಧ ಘಂಟೆ. ಆಮೇಲೆ ನೀವೇ ಸಾಯೋರು. ಏನಾದ್ರು ತಿಂಡಿ ತರಿಸ್ತಿನಿ. ತಿಂದು ಸಾಯ್ರಿ” ಅಂದ. ನಾನು, “ನೀವು ತಿಂಡಿಯಲ್ಲಿ ವಿಷ ಹಾಕಿ ಯಾಕೆ ಸಾಯಿಸಬಾರದು ?” ಅಂತ ಕೇಳಿದೆ. ಅದಕ್ಕೆ ಅವನಂದ, ” ಅದು ಕೊಲೆಯಾಗತ್ತೆ.”  ನಾನು ” ನಮ್ಮ ಕನ್ಸೆಂಟ್ ತಗೊಳ್ಳಿ ಪಾ…ನಾವ್ ಬರ್ಕೊಡ್ತಿವಿ..ನಾವೇ ವಿಷ ತರಿಸಿಕೊಂಡು ತಿಂದು ಸತ್ವಿ” ಅಂತ..” ಅಂದೆ. ಅದಕ್ಕೆ ಅವ “ಈಗ ವಿಷ ನ ನಾವು ತರ್ಕಾರಿ ಥರ ತಗೊಳ್ಳಕ್ಕೆ ಆಗಲ್ಲ. smuggle ಮಾಡ್ಬೇಕು.ಕಷ್ಟ. ಆದ್ರೆ ಅದನ್ನು ಅತಿಶೀಘ್ರದಲ್ಲೇ ಜಾರಿಗೆ  ತರ್ತಿವಿ” ಅಂದ. ನನಗೆ ಜುಗಾರಿ ಕ್ರಾಸ್ ಕಾದಂಬರಿ ನೆನಪಾಯ್ತು.

ಅವನು ” ನಿಮ್ಗೇನು ಬೇಕು ?” ಅಂದ. ನಾನು “any pure vegetarian food without onions” ಅಂದೆ. ಅದಕ್ಕೆ ಆ ಯುವಕ ” ಒಂದು ಮೊಸ್ರನ್ನ…ಉಡುಪಿ ಹೋಟೆಲಿಂದ” ಅಂತ ಥೇಟ್ ಹೋಟೆಲ್ ಮಾಣಿ ಥರ ಕೂಗಿದ. ಬಾಗಿಲು ತೆಗೆದು ನನ್ನ ಕೈಗೆ ಲ್ಯಾಪ್ಟಾಪ್ ಕೊಟ್ಟ ಯುವಕ  “ಓಕೆ.” ಅನ್ನುತ್ತಾ ಹೊರನಡೆದ. ಎರಡು ನಿಮಿಷದ ನಂತರ ಒಳಬಂದು “ಹೋಟೆಲ್ ಕ್ಲೋಸ್ ಆಗಿದೆ” ಅಂದ. ನನಗೆ ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿಯುತ್ತಿತ್ತು. ಹೊಟ್ಟೆಗೆ ಬಿದ್ದರೆ ಸಾಕಾಗಿತ್ತು. ಸಾಯುವ ಮೂಡ್ ಕೂಡಾ ಇರಲಿಲ್ಲ. ಆಗಿದ್ದ ಆವೇಶ ಈಗ ಇರಲಿಲ್ಲ. ಚಿನ್ನದ ಸರ ಕೊಟ್ಟುಬಿಟ್ಟಿದ್ದೇನೋ ನಿಜ..ಆಗ ಸಾಯಲು ಹವಣಿಸುತ್ತಿದ್ದ ನಾನು ಈಗ ಹಸಿವಿನಿಂದ ತತ್ತರಿಸಿಹೋಗಿದ್ದೆ. ಆದರೆ ಸರ ಮತ್ತು ಮೊಬೈಲು ಕೊಟ್ಟು ರಿಜಿಸ್ಟರ್ ಮಾಡಿಸಿದ ತಪ್ಪಿಗೆ ಈಗ ಸಾಯಲೇ ಬೇಕಿತ್ತು.

ಸರಿ ಖಾಲಿ ಹೊಟ್ಟೆಯಲ್ಲೇ ಸಾಯಲು ನಿರ್ಧರಿಸಿದೆ. ನಾನು ಸತ್ತರೆ , ಹೊಟ್ಟೆ ತುಂಬಾ ತಿಂದು ತೃಪ್ತಿಯಾಗಿ ಸಾಯೋಣ ಅಂತ ಇದ್ದೆ..ಆದರೆ ಅರೆಹೊಟ್ಟೆಯಲ್ಲಿ ಅಸುನೀಗಿ ಉಡುಪಿ ಹೋಟೇಲಿನ ಮೇಲೆ ಅಂತರ್ಪಶಾಚಿಯಾಗಿ ಅಲೆಯಬೇಕು ಅಂತ ಇದ್ದರೆ ನಾನು ಹೇಗೆ ತಾನೆ ವಿರೋಧಿಸಲು ಸಾಧ್ಯ ? ” ಬಾವಿಗೆ ಹೊಗೋಣ” ಅಂದೆ. ಅವನು ” ಒಂದು ನಿಮಿಷ ಇರಿ” ಎಂದು ಇದುವರೆಗೂ ನನಗೆ ಕಾಣಸದಿದ್ದ ಪುಟ್ಟ ಕೋಣೆಯೊಳಗೆ ಹೋದ. ಬರುತ್ತಾ ಅವನ ಕೈಯಲ್ಲಿ ಒಂದು ಲಕೋಟೆಯಿತ್ತು. ಅದನ್ನು ನನ್ನ ಕೈಲಿಟ್ಟು – ” ನಾನು ಬಾವಿಯ ಬಳಿ ಬರಲ್ಲ. ನೀವೇ ಹೋಗಿ ಸಾಯಬೇಕು. ನಾನಿದ್ದರೆ ನಿಮಗೆ ಕಷ್ಟ ಆಗಬಹುದು.ಈಗ ಇದನ್ನು ತೆಗೆದುಕೊಂಡು ಬಾವಿಯ ಹತ್ತಿರ ಹೋಗಿ. ಬೀಳುವ ಮುಂಚೆ ಇದನ್ನ ಓದಿ, ಕಟ್ಟೆಯ ಮೇಲಿಟ್ಟು ಅದರ ಮೇಲೊಂದು ಕಲ್ಲಿಟ್ಟು ಆಮೇಲೆ ಬಿದ್ದು ಸಾಯಿರಿ.  All the best !” ಎಂದ.

ನಾನು ಹಲ್ಲುಕಿರಿದೆ. ಮನದೊಳಗೆ ” ಬೇಕಿತ್ತಾ ನಿನಗಿವೆಲ್ಲಾ ?” ಅಂತ ಯಾರೋ ಕೇಳಿದ ಹಾಗಾಯ್ತು. ಉತ್ತರಿಸಲು ಧೈರ್ಯವೇ ಇರಲಿಲ್ಲ !

ಹೀರೋಯಿನ್ ಸ್ಲೋ ಮೋಷನ್ನಲ್ಲಿ ಮನೆ ಬಿಟ್ಟು ಹೊರಬರುವ ಹಾಗೆ ಹೊರಬಂದೆ.ವ್ಯತ್ಯಾಸ ಇಷ್ಟೇ..ಅವಳ ಕೈಯಲ್ಲಿ suitcase ಇರತ್ತೆ, ನನ್ನ ಕೈಯಲ್ಲಿ ಲಕೋಟೆ ಇತ್ತು !

ಹೊರಬಂದಿದ್ದೇ ಮೊದಲು ಪತ್ರವನ್ನೋದಲು ಆಸೆಯಾಗಿ ಲಕೋಟೆ ಒಡೆದೆ. ಅದರಲ್ಲಿ ನಾನು ಫಾರ್ಮನ್ನು ಭರ್ತಿ ಮಾಡಿದರ print out,  ಮತ್ತು ಒಂದು ಪುಟ್ಟ ಪತ್ರವಿತ್ತು. ಅದನ್ನ ಓದಲು ಮೊದಲುಮಾಡಿದೆ.

“ಮೇಡಮ್,

ನಿಮಗೆ ಸಾಯಲು ಇಷ್ಟ ಇದ್ದರೂ ನೀವು ಸಾಯುವುದು ಸರಿಯೇ ಅಂತ ಯೋಚಿಸಿ. ನಾವು ನಮ್ಮಿಷ್ಟದಂತೆ ಇರಬೇಕೆಂದು ಬಯಸುತ್ತೇವೆಯಾದರೂ, ಅದು ಸರಿಯೇ ಎಂದು ಮೊದಲು ಯೋಚಿಸುವುದೊಳಿತು.

ನಿಮ್ಮ ಫೇವರೈಟ್ ಕವಿ ಡಿ.ವಿ.ಜಿ ಅಂದಿರಿ. ಕಗ್ಗ ಓದಿರುವೆ ಅಂದಿರಿ. ಇದನ್ನು ಮತ್ತೊಮ್ಮೆ ಅವಗಾಹಿಸಿ.

“ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |

ತೃಣ ಮೊಳೆಯುವುದು ಮರಳಿಹನಿಯೆರಡು ಬೀಳೆ ||

ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ

ಕುಣಿವುದನುಕೂಲ ಬರೆ- ಮಂಕುತಿಮ್ಮ ||”

ಇನ್ನು ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ ಅನ್ನಿಸತ್ತೆ. ನೀವು ಸಾಯಲು ಇನ್ನೂ ಬಯಸುತ್ತಿದ್ದರೆ ಸಾಯಬಹುದು.

-ಆತ್ಮಹತ್ಯೆ incognito

ನನಗೆ ಕಪಾಳಕ್ಕೆ ಹೊಡೆದ ಹಾಗಾಯ್ತು.ನನ್ನ ಸಕಲ ಪ್ರಶ್ನೆಗಳನ್ನೂ ಈ ಕಗ್ಗ ಉತ್ತರಿಸಿತ್ತು..ನನ್ನ ಜಿಗುಪ್ಸೆಗೆ ಸಾಂತ್ವನವೂ ನೀಡಿತ್ತು. ನಾನು ಎಂಥಾ ಕ್ಷುಲ್ಲಕ ಕಾರಣಕ್ಕೆ ನನ್ನ ಅದ್ಭುತ ಜೀವನವನ್ನೇ ನಾಶಮಾಹೊರಟಿದ್ದೆ ಅನ್ನೋದು ನನಗೆ ಆಗ ಗೊತ್ತಾಯ್ತು. ಕಣ್ತುಂಬಿ ಬಂತು. ಬಾವಿಯ ಕಡೆಯ ದಾರಿ ಬಿಟ್ಟು ಗೇಟನ್ನು ಹುಡುಕತೊಡಗಿದೆ. ನಾನು ಬದುಕಲು ತವಕಿಸುತ್ತಿದ್ದೆ ! ಏನನ್ನೂ ಮಾಡಿ ಸಾಧಿಸಿ ತೋರಿಸಲು ಸಿದ್ಧಳಿದ್ದೆ !

ಅಷ್ಟರಲ್ಲಿ ಅಮ್ಮನ ಕೂಗು ಎಲ್ಲಿಂದಲೋ ಕೇಳಿಬಂತು – ” ಲೇ…. ಕೋಪ ಮಾಡ್ಕೊಂಡು ಎಲ್ಲೋ ವಾಕಿಂಗ್ ಹೋಗಿರುತ್ತೀಯಾ ಅಂದುಕೊಂಡರೆ ಹೀಗಾ ಮಾಡೋದು?ಮೊಬೈಲನ್ನು ಬೇರೆ ಸ್ವಿಚಾಫ್ ಮಾಡಿ ಗೋಳಾಡಿಸುತ್ತಿದ್ದೀಯಲ್ಲ ! ಸದ್ಯ ಸಿಕ್ಕಿದ್ಯಲ್ಲಾ..” ಅಂತ ಅನ್ನುತ್ತಾ ನನ್ನ ಬಳಿ ಬಂದರು. ಆ ಸಮಯಕ್ಕೆ ಏನೂ ಮಾಡಲು ತೋಚದೇ ಆ ಲಕೋಟೆಯನ್ನು ಮುಚ್ಚಿಡಲೂ ಆಗದೇ ಕೈಯಲ್ಲಿ ಇಟ್ಟುಕೊಂಡೇ ಇದ್ದೆ.  ಅಪ್ಪ ಅಮ್ಮನ ಹಿಂದೆ ಬಂದರು. ಅಪ್ಪ- “ಎಲ್ಲಾ ವಿಷ್ಯ ಗೊತ್ತಾಯ್ತು. ಆ ಆತ್ಮಹತ್ಯೆ ಸಂಘದವರು ಫೋನ್ ಮಾಡಿದ್ದಕ್ಕೆ ಸರಿ ಹೋಯ್ತು. ನಾನು ಹೋಗಿ ಅವರಿಗೆ ಧನ್ಯವಾದ ಹೇಳಿ ಬರುತ್ತೇನೆ”  ಅನ್ನುವ ಹೊತ್ತಿಗೆ ಆ ಯುವಕ ಅಲ್ಲಿ ಪ್ರತ್ಯಕ್ಷ ! ನಮ್ಮ ತಂದೆ ಅವನನ್ನು ಹೊಗಳಿದ್ದೇ ಹೊಗಳಿದ್ದು. ನನಗೆ ಮಾತು ಹೊರಡುತ್ತಲೇ ಇರಲಿಲ್ಲ. ಅವನ್ನು ದಿಟ್ಟಿಸಿ ನೋಡುವ ಧೈರ್ಯವೂ ಇರಲಿಲ್ಲ. ಅವನು ನಮ್ಮ ತಂದೆಯೊಂದಿಗೆ ಮಾತಾಡುತ್ತಾ- ” ನಾನು ಸಾಫ್ಟ್ ವೇರ್ ಇಂಜಿನೀರ್ ಆದರೂ ಕೆಲ್ಸ ಸಿಗಲಿಲ್ಲಾ ಅಂತ ಸಾಯಕ್ಕೆ ಬಂದೆ ಸಾರ್ ! ಆಗ ಇಲ್ಲಿ ಖಾಲಿ ಷೀಷೆ ಪೇಪರ್ ನವನು ಹರಿದ ಪೇಪರ್ ನ ಹಾಕಲು ಬಂದಾಗ ಒಂದು ಹಾಳೆಹಾರಿ ನನ್ನ ಮುಖಕ್ಕೆ ಬಂದು ಬಿತ್ತು. ಆ ಹಾಳೆಯಲ್ಲಿ ಪಾಸಿಟಿವ್ ಥಿಂಕಿಂಗ್ ನ ಒಂದು ಅಂಕಣವನ್ನು ಓದತೊಡಗಿದೆ. ಆ ಅಂಕಣ ಅರ್ಧ ಮಾತ್ರ ಇತ್ತು. ಪೂರ್ತಿ ಹುಡುಕುವ ವರೆಗೂ ಬದುಕುತ್ತೇನೇಂದು ಹಠ ಹಿಡಿದೆ. ಲೈಬ್ರರಿಗಳಲ್ಲಿ ಹುಡುಕಿ ಕಡೆಗೂ ಆ ಪುಸ್ತಕ ಹುಡುಕಿ ಓದಿದೆ. ಆಮೇಲೆ ನನಗನ್ನಿಸಿತು, “ನಾನೇಕೆ ಸಾಯುವವರನ್ನು ಜೀವನ್ಮುಖಿಯಾಗಿಸಬಾರದು ? ಅವರಗೆ ಸಾಯುವ ಬಗೆ ಕೌನ್ಸೆಲ್ ಮಾಡಿದರೆ ಅವರಿಗೆ ಆ ಕ್ಷಣಕ್ಕೆ ಸಹಿಸಲಾಗದು.  consultancy firm  ತೆರೆದು ಸಾವಿನ ಭೀಕರತೆಯನ್ನ ನಿಧಾನಕ್ಕೆ ಪರಿಚಯಿಸಿದರೆ ಅವರಿಗೆ ಸಾಯಲು ಮನಸ್ಸು ಡೋಲಾಯಮಾನ ಆಗತ್ತೆ. ಹಾಗೂ ಒಂದು ವೇಳೆ ಮುಂದುವರದರೂ ನಾವು ಅವರನ್ನು ಬದುಕಿಸಿಕೊಳ್ಳಬಹುದು “ಎಂದು ಈ ಕಂಪನಿ ಓಪನ್ ಮಾಡಿ ಆ ಸಾಫ್ಟ್ ವೇರ್ ನ ನಾನೇ ಮಾಡಿದೆ ಸಾರ್ ! ನನಗೆ ಸಂಪಾದನೆಗೆ ಈಗ ಪುಸ್ತಕದ ಅಂಗಡಿ ಇಟ್ಟಿದ್ದೇನೆ. ಇದು ನನ್ನ ಸಮಾಜ ಸೇವೆ ! ಆದರೆ ಒಂದು, ನಾವಿಲ್ಲಿದ್ದೇವೆ ಅಂತ ಯಾರಿಗೂ ಹೇಳ್ಬೇಡಿ.” ಅಂದ. ನನ್ನ ಚಿನ್ನದ ಸರವನ್ನು ಮತ್ತು ಮೊಬೈಲನ್ನು ಮತ್ತೆ ನನಗೇ ಕೊಟ್ಟ !!

ನಾನು ಯಾವ ಸ್ಥಿತಿಯಲ್ಲಿದ್ದೆ ಆಗ ಅಂತ ನನಗೆ ಗೊತ್ತೇ ಆಗಲಿಲ್ಲ. ಕಾರು ಹತ್ತಿದ ಮೇಲೆ ಕಾರ್ ಶುರುವಾದ ಶಬ್ದಕ್ಕೆ ಬೆಚ್ಚಿ ಬಿದ್ದೆ. ಅಮ್ಮ ತಲೆ ನೇವರಿಸಿದರು. ಅದೇ ಮಾಂಸದ ಅಂಗಡಿಯ ಬೀದಿಯ ಮೂಲಕ ಹಾದು ಬಂದೆವು. ಅಮ್ಮ ” ಅಪರಾಧ ಸಹಸ್ರಾಣಿ…” ಹೇಳಿಕೊಳ್ಳುತ್ತಿದ್ದರು. ಅವರಿಗೆ ನಾನು ಸಿಕ್ಕಿದ್ದೆ. ನನಗೆ ನನ್ನ ಜೀವನವೇ ಸಿಕ್ಕಿತ್ತು. ಮಾನಸ ಸರೋವರದಲ್ಲಿ ನಾನು ಮುಳುಗಿ ಎದ್ದಿದ್ದೆ. ಇವರಿನ್ನು ಮುಳಗಬೇಕಷ್ಟೇ !

(ಮುಗಿಯಿತು)

ಜನವರಿ 18, 2009

ಆತ್ಮಹತ್ಯೆ

Filed under: lalita prabandha — saagari @ 5:20 ಅಪರಾಹ್ನ

ಇದು ನಾನು ಬರೆಯಲೆತ್ನಿಸಿರುವ ಮೊದಲ ಲಲಿತ ಪ್ರಬಂಧ. ಸಿಕ್ಕಾಪಟ್ಟೆ ಉದ್ದ ಆಯ್ತು ಆದ್ದರಿಂದ ಎರಡು ಭಾಗದಲ್ಲಿ ಹಾಕ್ತಿದಿನಿ. ಇದು ಮೊದಲನೆಯ ಭಾಗ.

*************************************************

ಜಗಳಗಳಿಗೆ ಕಾರಣ ಬೇಕಿಲ್ಲ, ಯುದ್ಧಗಳಿಗೂ ಇತ್ತೀಚೆಗೆ ಹೇಳಿಕೊಳ್ಳುವಂತಹ ಮುಖ್ಯಕಾರಣ ಬೇಕಿಲ್ಲ. ನಮ್ಮ ಮನೆಯಲ್ಲಿ ನಡೆದಿದ್ದು ಜಗಳವೋ, ಯುದ್ಧವೋ ಗೊತ್ತಿಲ್ಲ. ಆದರೆ ಅದು ಅವೆರಡರ ಸಮಾನಾಂಶವಾದ ಭೀಕರತೆಯನ್ನು ಹೇರಳವಾಗಿ ಹೊಂದಿತ್ತು.

ಉಚ್ಛ ಸ್ವರದ ಮಾತಿಂದ ಒಂದು ಕರಾಳ ದಿನದ ಬೆಳಂಬೆಳಿಗ್ಗೆ ಆರಂಭವಾದ ನನ್ನ ಮತ್ತು ನನ್ನ ಕುಟುಂಬದ ಸದಸ್ಯರೊಂದಿಗಿನ ಜಗಳ ಅದು ಯಾವ ಘಳಿಗೆಯಲ್ಲಿ ಯುದ್ಧಕ್ಕೆ ತಿರುಗಿತೋ ನನಗೆ ಇಂದಿಗೂ ನೆನಪಾಗುತ್ತಿಲ್ಲ. ಮಾತಲ್ಲೆ ಅಸ್ತ್ರ ಪ್ರತ್ಯಸ್ತ್ರಗಳನ್ನು ಪ್ರಯೋಗಿಸುತ್ತಿದ್ದೆವು. ಕಡೆಗೊಂದು ಅಸ್ತ್ರಕ್ಕೆ ನಾನು ಬಲಿಯಾದೆ. ಅದೇ ” ಎಲ್ಲಾದರೂ ಹೋಗಿ ಸಾಯಿ! ನಮಗೆ ನಿನ್ನಂಥವರ ಅವಶ್ಯಕತೆ ಇಲ್ಲ. ನೀನು ಸತ್ತರೆ ಯಾರೂ ಅಳುವುದೂ ಇಲ್ಲ! ನಾವಂತೂ ಒಂದು ಹನಿ ಕಣ್ಣೀರು ಹಾಕೆವು. ತೊಲಗು! ” ಎಂಬ ಮಾತುಗಳು.

ತಾಳ್ಮೆ ತಲೆಯ ತಾರ್ಸಿಯಿಂದ ಎಂದಿಗೋ ಹಾರಿಹೋಗಿತ್ತು. ಬುದ್ಧಿಯೂ ಆವಿಯಾಗಿ ಅನಂತ ದಿಙ್ಮೂಢತೆ ವ್ಯಾಪಿಸಿತ್ತು. ಮನೆಯಿಂದ ಆ ಕ್ಷಣವೇ ಹೊರಟುಬಿಟ್ಟೆ. ಎಲ್ಲಿಗೆ ಪಯಣ ಅಂತ ನನಗೇ ಗೊತ್ತಿಲ್ಲ. ಕಾಲು ಹೋದ ಕಡೆ ದೇಹ ಚಲಿಸುತ್ತಿತ್ತು, ಆದರೆ ಮನಸೆಲ್ಲಿ ಹಾರಿಹೋಗಿತ್ತೋ !

ನಮ್ಮ ಮನೆಯಿಂದ ಅನತಿದೂರದಲ್ಲಿ ಒಂದು ಪಾಳು ಬಾವಿ ಇದೆಯೆಂದು ನನಗೆ ನ್ಯೂಸ್ ಪೇಪರ್ ಮುಖಾಂತರ ಗೊತ್ತಿತ್ತು. ಯಾಕಂದರೆ ಅಲ್ಲಿ ಆತ್ಮಹತ್ಯೆಗಳು ಬಹಳವಾಗಿ ಆಗುತ್ತಿತ್ತು. ಆ ಬಾವಿಯನ್ನು ಮುಚ್ಚಲು ಶತಪ್ರಯತ್ನ ನಡೆದಿದ್ದರೂ ಅದನ್ನು ಮಾಡಲು ಎಲ್ಲರೂ ಹೆದರುತ್ತಿದ್ದರು. ಮುನ್ನೆಡೆಯುತ್ತಿರುವ ಭಾರತ ದೇಶದ ಬುದ್ಧಿವಂತಿಕೆಗೆ ಅಪವಾದವೆಂಬಂತೆ ದೆವ್ವ ಭೂತಗಳ  ಮತ್ತು ಪ್ರೇತಲೀಲೆಯ ನಂಬಿಕೆಗಳೂ ಅಲ್ಲಿ ತಾಂಡವವಾಡುತ್ತಾ, ಜನರ ಧೈರ್ಯಗೆಡಿಸಿ, ಆ ಬಾವಿ ಹಾಗೇ ಪಾಳುಬಿದ್ದಿತ್ತು. ಆ ಬಾವಿ ಸಾಕ್ಷಾತ್ ಮೃತ್ಯುಕೂಪವೆಂದೂ, ಅಲ್ಲಿ ಸತ್ತವರು ಅಂತರ್ಪಿಶಾಚಿಯಾಗಿಯೇ ಆಗುತ್ತಾರೆಂದು, ಎಲ್ಲಿ ಸತ್ತರೂ ಅಲ್ಲಿ ಮಾತ್ರ ಸಾಯಬಾರದೆಂಬ ಕುಖ್ಯಾತಿಯನ್ನು ಆ ಬಾವಿ ಪಡೆದಿತ್ತು. ಆದರೆ, ಈ ಬಾವಿ ಎಲ್ಲಿದೆ ಎಂದು ನಿಖರವಾಗಿ  ನನಗೆ ಗೊತ್ತಿರಲಿಲ್ಲ.

ದುಡ್ದು ಮರೆತರೂ, ನನ್ನ ಹೆಸರನ್ನೇ ಮರೆತರೂ, ನನ್ನ ನೋಕಿಯಾ ನ್ಯಾವಿಗೇಟರ್ ಮೊಬೈಲನ್ನು ನಾನು ಮರೆಯುತ್ತಲೇ ಇರಲಿಲ್ಲ. ಮನೆಯಲ್ಲಿ ಎಷ್ಟೇ ಘೋರವಾದ ಯುದ್ಧ ವಾಗ್ವಾದಗಳು ನಡೆದಿದ್ದರೂ ನನ್ನ ಕೈ ನನ್ನ ಮೊಬೈಲನ್ನು ಕೈಬಿಟ್ಟಿರಲಿಲ್ಲ. ನನ್ನ ಕೈಯ ಜಾಣ್ಮೆಯನ್ನು ಮೆಚ್ಹಿದೆ. ನ್ಯಾವಿಗೇಟರ್ ನಲ್ಲಿ ಬಾವಿಯನ್ನು ಹುಡುಕಿ, ಅಲ್ಲಿ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಿನ ಮೂಲೆ ಮೂಲೆಗಳಲ್ಲಿದ್ದ ಧೈರ್ಯವನ್ನು ಒಟ್ಟುಗೂಡಿಸಿ ದೃಢ ನಿರ್ಧಾರ ಮಾಡಿದೆ. ನಿರ್ವಿಘ್ನವಾಗಿ, ಮೊದಲನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿ ಸಾಯಬೇಕೆಂದು ನಿರ್ಧರಿಸಿ ನನ್ನ ಸಾವು ನಿರ್ವಿಘ್ನವಾಗಿ ನೆರವೇರಲಿ ಎಂದು ಗಣಪತಿಯಲ್ಲಿ ಬೇಡಿಕೊಂಡೆ.

ಆದರೆ ನನ್ನ ಪ್ರಾರ್ಥನೆ ದೇವರನ್ನು ಮುಟ್ಟಲಿಲ್ಲ ಎಂಬುದು ” ನೊ ಮ್ಯಾಚಸ್ ಫೌಂಡ್ ” ಎಂಬ ನನ್ನ ನ್ಯಾವಿಗೇಟರ್ ಉತ್ತರದಿಂದ ಗೊತ್ತಾಯ್ತು. ಏನೇ ಟೈಪಿಸಿದರೂ ಇದೇ ಉತ್ತರ! ವೆಲ್ಲ್, ಓಲ್ಡ್ ವೆಲ್ಲ್, ಎಂಬುದು ಎಲ್ಲೂ ಕಾಣಿಸಲಿಲ್ಲ. ಮಿಕ್ಕೆಲ್ಲ ಬಿಲ್ಡಿಂಗಿನ , ರಸ್ತೆಗಳ ನಕ್ಷತ್ರ ಕುಲ ಗೋತ್ರಗಳು ಮೊಬೈಲಲ್ಲಿ ರಾರಾಜಿಸುತ್ತಿದ್ದವು, ಪಾಳು ಬಾವಿ ಮತ್ತು ಅದರ  ಕಡೆಗೆ ಹೋಗುವ ದಾರಿಯೊಂದನ್ನು ಬಿಟ್ಟು. ದೇವರು ಕೈಬಿಟ್ಟರೇನೆ ಮನುಷ್ಯ ಸಾಯುವುದು ಎಂಬುದು ತಲೆಗೆ ತೋಚಿತು. ಆ ಸಮಯದಲ್ಲಿ ನಾನು ವೇದಾಂತದ ಉತ್ತುಂಗಕ್ಕೆ ಹೋಗಿದ್ದೆನೇನೋ, ಎಲ್ಲವೂ ನಶ್ವರ ಎಂದು ಒಂದು ವಿಕಟನಗೆ ಬೀರಿದೆ.

ಮನೆಯಲ್ಲಿ ಸತ್ತಿದ್ದರೇನೇ ಚೆನ್ನಾಗಿತ್ತು ಅನ್ನಿಸಿತು ನನಗೆ ಒಂದು ನಿಮಿಷ. ಆದರೆ ಅಲ್ಲಿ ಕೆಲವು ಸಮಸ್ಯೆಗಳಿದ್ದವು. ನೇಣು ಹಾಕಿಕೊಲ್ಳಲು ಸೀರೆ, ಫ್ಯಾನುಗಳಿದ್ದವಾದರೂ ನಿಲ್ಲಲು ಸರಿಯಾದ ಎತ್ತರದ ಸ್ಟೂಲಿರಲಿಲ್ಲ. ಮಂಚದ ಮೇಲೆ ನಿಂತುಕೊಂಡು ನೇಣು ಹಾಕಿಕೊಳ್ಳಲು ಆಗುವುದಿಲ್ಲ. ವಿಷದ ಬಾಟಲಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಮತ್ತೆ ಮನೆಯವರ ಬಳಿ ಕೈಚಾಚುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆ. ಫೆನಾಯಿಲು ಮುಗಿದಿದೆ ಎಂದು ಕೆಲಸದವಳು ನೆನ್ನೆಯೇ ಹೇಳಿಬಿಟ್ಟಿದ್ದಳು. ನಿದ್ರೆ ಮಾತ್ರೆ ನಮ್ಮ ಮನೆಯಲ್ಲಿ ದುರದೃಷ್ಟವಷಾತ್ ಯಾರೂ ನುಂಗುತ್ತಿರಲಿಲ್ಲ. ಮನೆಯಲ್ಲಿ ಸಾಯುವ ಯಾವ ದಾರಿಯೂ ನನಗೆ ಅನುಕೂಲಕರವಾಗಿರಲಿಲ್ಲ. ಹೊರಗೆ ಸಾಯದೇ ವಿಧಿಯಿರಲಿಲ್ಲ.

ಮನಸ್ಸಿಗೆ ಬಂದ ಯೋಚನೆಯನ್ನು ನೀರಿನ ಗುಳ್ಳೆ ಒಡೆದಂತೆ ಒಡೆದು ಹಾಕಿ, ಈಗ ಬಾವಿಯ ವಿಳಾಸ ಪತ್ತೆ ಮಾಡುವ ದಾರಿ ಯೋಚಿಸತೊಡಗಿದೆ. ಬೆಂಗಳೂರಿನಂಥಾ ಮಹಾನಗರದಲ್ಲಿ ಮನೆಗಳನ್ನ ಹುಡುಕುವುದೇ ಮಹಾಕಷ್ಟ. ಇನ್ನು ಬಾವಿಗಳನ್ನು ಹುಡುಕುವುದು ಹೇಗೆ ? ಕೇವಲ ೨೭ ಪ್ರತಿಶತ ಕನ್ನಡಿಗರನ್ನು ಮಾತ್ರ ಹೊಂದಿರುವ ಈ ಭವ್ಯ ನಗರಿಯಲ್ಲಿ ಹತ್ತು ಜನರಿಗೆ ಇಬ್ಬರು ಕನ್ನಡಿಗರು ಸಿಗುತ್ತಾರೆ. ಬೆಂಗಳೂರಿಗರಲ್ಲದವರು, ಕನ್ನಡೇತರರಿಗೆ ಆಂಗ್ಲದಲ್ಲಿ ಕೇಳಿದರೆ ಅತೀ ಸುಲಭದ ಉತ್ತರವಾದ ” I don’t know” ಕೇಳಸಿಗುತ್ತದೆ. ಮತ್ತೆ ಕೆಲವರು ಎಫ್ ಎಮ್ ಕೇಳುವಲ್ಲಿ ಲೀನರಾಗಿರುತ್ತಾರಾದ್ದರಿಂದ, ನಮ್ಮ ಪ್ರಶ್ನೆ ಅವರಿಗೆ ಕೇಳಿತೋ ಬಿಟ್ಟಿತೋ, ಅಡ್ಡಡ್ಡ ತಲೆಯ್ಲಲ್ಲಾಡಿಸುತ್ತಾರೆ. ಇನ್ನು ಕನ್ನಡಿಗರು ಸಿಕ್ಕರೂ ಅವರಿಗೆ ವಿಳಾಸ ಗೊತ್ತಿರಲಿ ಬಿಡಲಿ, ನಾವು ಯಾಕೆ ಆ ವಿಳಾಸಕ್ಕೆ ಹೋಗುತ್ತಿದ್ದೇವೆ ಎಂಬ ಕೆಟ್ಟ ಕುತೂಹಲವಂತೂ ಇದ್ದೇ ಇರುತ್ತದೆ. ನಾನು “ಪಾಳು ಬಾವಿ ಎಲ್ಲಿದೆ ಹೇಳ್ತಿರಾ ?” ಎಂದು ಕೇಳಿ, ಅವರು “ನೀವು ಸಾಯಕ್ಕೆ ಹೋಗ್ತಿದೀರಾ ?  ಸಾಯಕ್ಕೆ ನಿಮಗೇನ್ ಬಂದಿದೆ ಧಾಡಿ ?” ಎಂದೆಲ್ಲ ಮರುಪ್ರಶ್ನೆಗಳ ಸುರಿಮಳೆಗರೆದು,  ನನ್ನನ್ನು ಬಾಯಿ ತೆರೆಯಲೂ ಬಿಡದೆ “ಸಾಯ್ಬೇಡಿ! ಹಾಗೆಲ್ಲಾ ಸಾಯೋ ಯೋಚನೆ ಮಾಡ್ಬಾರ್ದು. ಈಸಬೇಕು ಇದ್ದು ಜೈಸಬೇಕೆಂದು ದಾಸರು ಹೇಳಿಲ್ಲವೇ ? ” ಎಂದೆಲ್ಲಾ ವೇದಾಂತ ಶುರು ಮಾಡುತ್ತಾರೆ. ಇದನ್ನು ಕೇಳುತ್ತಲೇ ಕ್ಷಣ ಮಾತ್ರದಲ್ಲೇ ಜನ ಜಮಾಯಿಸಿ ಎಲ್ಲರೂ ನಾವೇಕೆ ಸಾಯಲು ಹೊರಟಿದ್ದೇವೆ, ಸಾಯಲು ಇರುವ ಕಾರಣ ಸಾಧುವೇ ಅಲ್ಲವೇ ಎಂಬಿತ್ಯಾದಿ ಮಹತ್ವದ ವಿಚಾರಗಳ ಬಗ್ಗೆ ಬೇಡದಿದ್ದರೂ ಚರ್ಚಿಸಿ, ನಮಗೆ ಕೇಳುವ ಇಚ್ಛೆಯಿಲ್ಲದಿದ್ದರೂ ತಮ್ಮ ಇಂಗಿತ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ನಮ್ಮನ್ನು ಇಬ್ಬಂದಿಗೆ ಸಿಕ್ಕಿಸುತ್ತಾರೆ. ಆದ್ದರಿಂದ ಸಾಯಲು ಹೋಗುವಾಗ ನಾವು ಯಾರನ್ನೂ ಮಾತಾಡಿಸದಿದ್ದರೆ ಒಳಿತು. ಆಗ ನಾವು ಹೇಗೆ ಸಾಯಬೇಕು ಎಂಬುದರ ಬಗ್ಗೆ ಮತ್ತಷ್ಟು ಏಕಾಗ್ರತೆಯಿಂದ ಯೋಚನೆ ಮಾಡಬಹುದು.

ಆದ್ದರಿಂದ ನಾನು ಪಾಳು ಬಾವಿಯ ವಿಳಾಸ ಯಾರನ್ನೂ ಕೇಳಬಾರದೆಂದು ನಿರ್ಧರಿಸಿದೆ. ಹೇಗೂ ಮನೆಬಿಟ್ಟಾಗಿದೆ, ಬಾವಿಯನ್ನು ಹುಡುಕಿ ಸತ್ತೇ ಸಾಯಬೇಕೆಂದು ತೀರ್ಮಾನಿಸಿದೆ. ಗಣಪತಿ ಕೈಬಿಟ್ಟರೇನು ? ಅವರಪ್ಪ ಶಿವನಿಲ್ಲವೇ ? ಅವನ ಪಾದ ಸೇರಬೇಕೆಂಬ ನನ್ನ ಉತ್ಕಟವಾದ ಆಕಾಂಕ್ಷೆಯನ್ನು ಶಿವ ನೆರವೇರಿಸಿಯೇ ತೀರುತ್ತಾನೆಂದು ಬಲವಾದ ನಂಬಿಕೆಯಿತ್ತು. ಆ ನಂಬಿಕೆಯಿಂದಲೇ ನಡೆದೂ  ನಡೆದೂ ಮುಖ್ಯ ರಸ್ತೆಗೆ ಬಂದು ತಲುಪಿದೆ.

ರಸ್ತೆಯಲ್ಲಿ ಎಲ್ಲಿ ನಿಂತು ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚನೆ ಮಾಡುವುದು ಎಂಬುದು ನನ್ನ ಮುಂದಿನ ಸಮಸ್ಯೆ ಆಯ್ತು. ರಸ್ತೆ ಮಧ್ಯದಲ್ಲಿ ನಿಂತು ಯೋಚನೆ ಮಾಡಲು ನಾನು ಸಿನೆಮ ಹೀರೋ ಅಲ್ಲ. ಫುಟ್ ಪಾತ್ ಎಂಬುದು ಮಹಾನಗರದಲ್ಲಿ ಇನ್ನು ನಾಮಾವಶೇಷ ಮಾತ್ರ, ನಡೆಯಲು ದಾರಿಗೊತ್ತಿಲ್ಲ, ಪಯಣದಲ್ಲಿ ಸಂಗಡಿಗರಿಲ್ಲ. ಇಂತಹ ಬರಗೆಟ್ಟ ಪರಿಸ್ಥಿತಿಯನ್ನು ನಾನು ಹಿಂದೆಂದೂ ಎದುರಿಸಿರಲಿಲ್ಲ. ಇದ್ದಿದ್ದರಲ್ಲಿ ಸೇಫ್ ಜಾಗವೆಂದು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಂತೆ.

ದಾರಿತೋರದೇ ನಾನು ಓದಿದ ಪಾಳು ಬಾವಿ ಆತ್ಮಹತ್ಯಾಕಾಂಡದ ತುಣುಕುಗಳನ್ನು ನೆನಪಿಸಿಕೊಳ್ಳತೊಡಗಿದೆ. “….ಪಾಳು ಬಾವಿಯಲ್ಲಿ ಬಿದ್ದು ಸತ್ತಿದ್ದಾರೆ…..ಸುತ್ತ ಮುತ್ತಲಿನ ಮಾಂಸದಂಗಡಿಯವರ ಕಣ್ಣು ತಪ್ಪಿಸಿ…. “ಎಂದು ನೆನಪಾದೊಡನೇ ನನಗೆ ಪಾಳು ಬಾವಿಯ ದಾರಿ ಹೊಳಿಯಿತು. ದಾರಿಯಲ್ಲಿರುವವರನ್ನು “ಮಾಂಸದಂಗಡಿ ಬೀದಿ ಎಲ್ಲಿದೆ ಹೇಳ್ತಿರಾ” ಎಂದರೆ ಹೆಚ್ಚು ಪ್ರಶ್ನೆ ಕೇಳದೇ ದಾರಿ ತೋರಿಸುತ್ತಾರೆಂದು ಸಂತೋಷಿಸಿ, ಒಬ್ಬರನ್ನು ಕೇಳಿದೆ. ಅವರು ” ಮುಂದೆ ಒಂದು ಬಸ್ ಸ್ಟಾಪ್ ಬರತ್ತೆ…ಅಲ್ಲಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ, ಅದೇ ಬೀದಿ ” ಎಂದರು. ನಾನು ನನ್ನ ಕೃತಜ್ಞತೆಯನ್ನು ನಗೆಯಲ್ಲಿ ಸೂಚಿಸಿ ಮುಂದೆ ನಡೆದೆ.

ಬ್ರಾಹ್ಮಣ ಸಂಪ್ರದಾಯದವರು ನಾವು. ಬೀಟ್ ರೂಟನ್ನೇ ಮಾಂಸದ ಸಮಾನವೆಂದು, ತಿನ್ನಬಾರದೆಂದು ನಮ್ಮ ಅಜ್ಜಿ ತಾತ ಕಟ್ಟಪ್ಪಣೆಗೈದಿದ್ದರು. ನಾನು, ಮನೆಯ ಕುಲಪುತ್ರಿ, ಮಾಂಸದ ಬೀದಿಯಲ್ಲಿ ಎಡಗಾಲಿನ ಉಂಗುಷ್ಟವನ್ನಿಟ್ಟರೂ ಮಾನಸ ಸರೋವರದಲ್ಲಿ ಮುಳುಗಿ ಪಾಪ ತೊಳೆದುಕೊಳ್ಳಬೇಕೆಂದು ಕಟ್ಟಾಜ್ಞೆ ಹೊರಡುತ್ತಿತ್ತು. ನಡೆದುಕೊಂಡೇ ಹೋಗೆನ್ನುತ್ತಿದ್ದರೇನೋ ಹಿರಿಯರು…ಪಾಪ ಸವೆಯಲಿ ಅಂತ.  ಮನೆಯವರೇ ನನ್ನ ಕಡೆಗಾಣಿಸಿದಮೇಲೆ ಕಟ್ಟಲೆಗಳ ಕಾಟವೇಕೆ ಎಂದುಕೊಂಡು ಧೈರ್ಯವಾಗಿ ಮಾಂಸದ ಅಂಗಡಿ ಬೀದಿಯಲ್ಲಿ ಬಲಗಾಲಿಟ್ಟೆ.

ಕಾಲಿಟ್ಟ ಕೂಡಲೆ ಮೇಕೆ ಕುರಿಗಳ, ಕೋಳಿಗಳ ಆರ್ತನಾದ ಕೇಳಿಸಿ ಮನಸ್ಸನ್ನು ಕಡೆಗೋಲು ಹಾಕಿ ಕಡೆದಂತಾಯ್ತು. ಕತ್ತೆತ್ತಿ ನೋಡಲು ಧೈರ್ಯವಿಲ್ಲ, ರಕ್ತ ಕಂಡರೆ ಭಯ ಬೇರೆ ! ಅದಕ್ಕೆ ನಾನು ಪ್ರಾಣ ಹೋದರೂ ಡಾಕ್ಟರ್ ಆಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ. ಕತ್ತು ಬಗ್ಗಿಸಿ ನಡೆದರೆ ಜನರಿಗೆ ಅನುಮಾನ ಬಂದು ಅವರು ನನ್ನ ಆತ್ಮಹತ್ಯೆಯ ಪ್ರಯತ್ನಕ್ಕೆ ಭಂಗ ತಂದರೆ ? ಕತ್ತೆತ್ತಿ ನೋಡಿದರೆ  ಪ್ರಾಣಿ ಹತ್ಯೆ ಕಂಡು ನನಗೆ ಭಯವಾಗಿ ನಾನು ಕಿಟಾರನೆ ಚೀರುತ್ತೇನೆಂದು  ಗೊತ್ತಿತ್ತು. ಕಣ್ಮುಚ್ಚಿ ನಡೆಯುವುದು ಅಸಾಧ್ಯ. ಏನಪ್ಪಾ ಈ ಗತಿ ಬಂತು ನನಗೆ ಅಂತ ನನ್ನನ್ನು ನಾನೇ ಹಳಿದುಕೊಂಡೆ. ಕಡೆಗೆ, ಲೋಕಾಭಿರಾಮವಾಗಿ ಎಲ್ಲೆಡೆ ನೋಡುತ್ತಾ ನಡೆದರೆ ಜನರಿಗೆ ಅನುಮಾನ ಬರುವುದಿಲ್ಲ ಅಂತ ಅನ್ನಿಸಿ, ಸಾಯುವಾಗ ಧೈರ್ಯ ಇರ್ಬೇಕು…ಸಾಯೋ ಪ್ರಾಣಿಗಳನ್ನ ನೋಡಿ ಧೈರ್ಯ ತಗೋಬೇಕೆಂದು ತೀರ್ಮಾನಿಸಿದೆ.  ಸ್ಲೋ ಮೋಷನ್ನಲ್ಲಿ ಕತ್ತೆತ್ತುವುದು ಹೇಗೆ ಮಾಡಬೇಕೆಂದು ಜನ ನನ್ನನ್ನ ನೋಡಿ ಕಲಿಯಬೇಕೆಂದೆಸಿತು…ಅಷ್ಟು ನಿಧಾನಕ್ಕೆ ಕತ್ತೆತ್ತಿದೆ.

ಅಷ್ಟೊತ್ತಿಗೆ ಯಾವ್ದೋ ಅಂಗಡಿಯಲ್ಲಿ ಹೆಂಗಸೊಬ್ಬಳು ಕುರಿ ಬೇಕು..ಅಂದಳು. ಅವ ಕುರಿಯನ್ನು ಎಳೆತಂದ. ಅದೇ ಸಮಯದಲ್ಲಿ ರೇಡಿಯೋ ನಲ್ಲಿ “ಕೊಲ್ಲೇ ನನ್ನನ್ನೇ…”ಅಂತ ಶುರುವಾಗಿದ್ದೇ ಅವ ಅತ್ಯುತ್ಸಾಹದಿಂದ ಕುರಿಯ ತಲೆಯನ್ನು ಕಚಕ್ಕನ್ನಿಸಿದ. “ಬ್ಯಾ ಬ್ಯಾ” ಎಂಬ ಆರ್ತ ಧ್ವನಿಯಲ್ಲಿ ಕುರಿ ಅಸು ನೀಗಿತು. ನಾನು ನನ್ನ ಜೀವನದಲ್ಲಿ ಅದೇ ಮೊದಲು ಪ್ರಾಣಿ ಹತ್ಯೆಯನ್ನು ನೋಡಿದ್ದು. ಚೀರಲೂ ಸಹ ನನ್ನಲ್ಲಿ ಶಕ್ತಿಯುಳಿಯಲಿಲ್ಲ..ಅದೆಷ್ಟು ಬೇಗ ಆಗಿಹೋಯ್ತೆಂದರೆ…ನಾನು ಕಣ್ಣನ್ನೂ ಮಿಟುಕಿಸಿರಲಿಲ್ಲ!

ನಾನೇ ಕುರಿಯೆಂಬಂತೆ, ಆ ಮಾತುಗಳೇ ಮಚ್ಚಾಗಿ, ಸಮಾಜವೆಂಬ  ಬಲಿಪೀಠದ ಮೇಲೆ ನಮ್ಮ ಮನೆಯವರೇ ನನ್ನನ್ನು ಬಲಿ ಹಾಕುತ್ತಿರುವ ಹಾಗೆ ಭಾಸವಾಯ್ತು ನನಗೆ. ಸತ್ತ ಮೇಲೆ ಎಲ್ಲಾ ಸರಿಹೋಗತ್ತೆ ಅನ್ನಿಸಿತು. ನೋವಾದರು ಅದು ಕ್ಷಣಿಕ, ಶಾಶ್ವತ ಮುಕ್ತಿ ಮುಖ್ಯ ಅನ್ನಿಸಿತು. ಸಾವು ತನ್ನ ತೋಳ್ಬೀಸಿ ನನ್ನನ್ನು ಕರೆದಂತೆ ಆಯ್ತು . ಆ ಕರೆಯಲ್ಲಿ ನನಗೆ ಎಲ್ಲಿಲ್ಲದ ಆತ್ಮೀಯತೆ ಕಂಡುಬಂತು. ಕರೆಗೆ ಓಗೊಟ್ಟು ಬಾವಿಯಲ್ಲಿ ಬಿದ್ದು ಸಾಯಲೇಬೇಕೆಂದು ದಡ ದಡ ಧಾವಿಸಿದೆ. ಆ ಓಟದಲ್ಲಿ ನಾನು ರಸ್ತೆ ಕೊನೆ ತಲುಪಿದೆನೆ ಹೊರತು ಹೊರತು ಬಾವಿ ಕಾಣಲಿಲ್ಲ. ಬಲಕ್ಕೆ ತಿರುಗಲೋ ಏದಕ್ಕೆ ತಿರುಗಲೋ ಎನ್ನುವುದು ನನ್ನ ಮುಂದಿನ ಸಮಸ್ಯೆಯಾಯ್ತು. ಬಲಕ್ಕೆ ನೋಡಿದೆ. ಅಲ್ಲಿ ಜನರ ಸಂಚಾರ ಹೆಚ್ಚಿತ್ತು. ಎಡಕ್ಕೆ ತಿರುಗಿದೆ. ಅಲ್ಲೊಂದು ಮುರಿದು ಬಿದ್ದ ಗೇಟಿತ್ತು. ಪಾಳು ಬಿದ್ದಂತಾ ಜಾಗ, ಮುರುಕಲು ಮನೆ. ಇದೇ ಪಾಳು ಬಾವಿಯ ಜಾಗ ಎಂದು ನನ್ನ ಅತೀಂದ್ರಿಯ ಪ್ರಜ್ಞೆ ಹೇಳಿತು. ಎಲ್ಲೇ ಹೋದರೂ ಮೊದಲು ಬಲಗಾಲಿಟ್ಟು ಹೋಗಬೇಕಾದ್ದರಿಂದ, ಯಶಸ್ವಿಯಾಗಿ ಸಾಯಲು ಇಚ್ಛಿಸಿ ಆ ಪಾಳು ಬಾವಿಯ ಜಾಗಕ್ಕೆ ಬಲಗಾಲಿಟ್ಟೆ.

ಒಳಬಂದು ಆ ಜಾಗವನ್ನು ಸ್ಥೂಲವಾಗಿ ಪರೀಕ್ಷಿಸಿದೆ. ಹುಲ್ಲೆಲ್ಲಾ ಎತ್ತರೆತ್ತರಕ್ಕೆ ಬೆಳೆದಿತ್ತು. ಇನ್ನೂ ಎಂಥೆಂತದೋ ಗಿಡಗಳು. ಹೆಸರು ಹುಡುಕುವ ಗೋಜಿಗೆ ಹೋಗಲಿಲ್ಲ. ಗಿಡದ ಮಧ್ಯ ಹಾವಿದ್ದು, ಅದು ನನ್ನನ್ನೇ ಹುಡುಕಿಕೊಂಡು ಬಂದು ಕಚ್ಚಿ,  ಬೇಗ ಪ್ರಾಣ ಹೋಗಲಪ್ಪಾ…ಬದುಕು ನನಗೆ ಸಾಕಾಗಿ ಹೋಗಿದೆ ಎನ್ನಿಸಿತು. ಹುಲ್ಲುಗಳ ಮಧ್ಯವೇ ನಡೆದೆ. ಹಾವಿರಲಿ…ನನ್ನ ಬರಗೆಟ್ಟಾ ಹಣೇಬರಹಕ್ಕೆ ಇರುವೆಯೂ ಕಚ್ಚಲಿಲ್ಲ. ಹುಲ್ಲು ಗಿಡಗಳ ಆಚೆ, ಕಡೆಗೂ ನಾನು ನೋಡಲು ಆಶಿಸುತ್ತಿದ್ದ, ಬೀಳಲು ತವಕಿಸುತ್ತಿದ್ದ ಪಾಳು ಬಾವಿ ಕಾಣಿಸಿತು. ಆದರೆ ಬಾವಿ ಕಟ್ಟೆಯ ಮುಂದೆ ಕಪಾಳಕ್ಕೆ ಹೊಡೆದಂತೆ ಒಂದು ಬೋರ್ಡ್ ಕಾಣಿಸಿತು – ”  Closed for renovation”

ಬೋರ್ಡ್ ನೋಡಿದ ತಕ್ಷಣ ನನ್ನ ಜಂಘಾಬಲವೇ ಉಡುಗಿ ಹೋಯಿತು. ನಾನು ಸಾಯುವ ದಿನವೇ ಇವರಿಗೆ ನವೀಕರಣಕ್ಕೆ ಸುಮುಹೂರ್ತವೇ ? ನನ್ನ ಗ್ರಹಚಾರ ಈಮಟ್ಟಿಗೆ ಕೆಟ್ಟಿದೆ ಎಂದು ನಾನು ಖಂಡಿತಾ ಎಣಿಸಿರಲಿಲ್ಲ. ಆ ಕ್ಷಣಕ್ಕೆ ಆತ್ಮಹತ್ಯೆಯ ಬೇರೆ ವಿಧಾನಗಳೂ ತೋಚಲಿಲ್ಲ. ತಲೆ ತಿರುಗಿದ ಹಾಗಾಯ್ತು. ಆದರೂ, ಇಷ್ಟೆಲ್ಲಾ ಕಷ್ಟಪಟ್ಟ ಮೇಲೆ ಸಾಯದಿದ್ದರೆ ನಾನು ಸಾಯಲು ಪಟ್ಟ ಇಚ್ಛೆಗೇ ಅವಮಾನ ಅನ್ನಿಸಿತು.”Break the rules purposefully”ಅನ್ನೋದೂ ಒಂದು ನಿಯಮ. ಇದನ್ನ ಭಾರತೀಯರು ಅತ್ಯಂತ ಶಿಸ್ತಿನಿಂದ  ಪಾಲಿಸುತ್ತಾರಾದ್ದರಿಂದ ಅಪ್ಪಟ ಭಾರತೀಯಳಾದ ನಾನು ಇದನ್ನು ಪಾಲಿಸಲು ಇಚ್ಛಿಸಿದೆ. ಬೋರ್ಡನ್ನು ಒಮ್ಮೆ ಅತಿ ತಿರಸ್ಕಾರ ಭಾವದಿಂದ ನೋಡಿ, ಅದನ್ನು ದಾಟಿ ಬಾವಿಕಟ್ಟೆಯ ಬಳಿಗೆ ಬಂದೇಬಿಟ್ಟೆ. ಇನ್ನೇನು ಎಗರಿ ಬೀಳಬೇಕು…..ಅಷ್ಟರಲ್ಲಿ, ” ಬೀಳಬೇಡಿ…ನಿಲ್ಲಿ !!!!!” ಅಂತ ಕೂಗಿದರು ಯಾರೋ. ನಾನು ಆ ಕೂಗನ್ನೂ ಸಹ ಕಡೆಗಾಣಿಸಿ ಎಗರಲು ಮುಂದೆ ವಾಲಿದೆ.

[ಮುಂದುವರೆಯುವುದು]

ಜುಲೈ 15, 2008

ನಾಯಿ, ದೇವಲೋಕ, ಮತ್ತು ಆ ಗಾದೆ

Filed under: lalita prabandha — saagari @ 5:53 ಅಪರಾಹ್ನ
ನಾನು ಎಮ್. ಎಸ್ಸಿ ಮುಗಿಸಿದ ಮೇಲೆ ಮನೆಯಲ್ಲಿ ಇರಲೇಬೇಕೆಂದು ಅಪ್ಪ ಅಮ್ಮನ strict order ಆದಮೇಲಂತೂ ನನಗೆ ಅಡಿಗೆ, ಬ್ಲಾಗಿಂಗ್ ಬಿಟ್ಟರೆ ಬೇರೇನು ಕೆಲಸವೇ ಇಲ್ಲ. ಟೈಮ್ ಪಾಸಿಗೆಂದೇ ಒಂದು ಬ್ಲಾಗ್ ಪ್ರಾರಂಭಿಸಿ ಅನ್ನಿಸಿದ ಕಥೆ ಕವನವನ್ನೆಲ್ಲಾ ಗೀಚಲು ಆರಂಭಿಸಿದ್ದೇನೆ ಎಂದಮೇಲೆ ನಾನೆಷ್ಟು ಆರಾಮಾಗಿದ್ದೇನೆ ಎಂದು ನಿಮ್ಮೆಲ್ಲರಿಗೂ ಗೊತ್ತಾಗತ್ತೆ.

ಮೊನ್ನೆ ಮದ್ಯಾಹ್ನ ಮನೆ ಗೇಟಿನ ಮುಂದೆ ಬಂದು ನಿಂತೆ. ಏನೂ ವಿಶೇಷವಿರಲಿಲ್ಲ, ಸುಮ್ಮನೇ ಟೈಮ್ ಪಾಸಿಗೆ. ಕರೆಂಟಿರಲಿಲ್ಲ, ಕಂಪ್ಯುಟರ್ ಗೆ ಬ್ರೇಕ್ ಸಿಕ್ಕಿತ್ತು ನನ್ನಿಂದ. ಅಪರಾಹ್ನ ಮೂರು ಘಂಟೆಗೆ ನಮ್ಮ ರಸ್ತೆ ಹೇಗೆ ಕಾಣತ್ತೆ ಅನ್ನೋ ಒಂದು ಕಲ್ಪನೆ ನನಗೆ ಇಷ್ಟು ವರ್ಷಗಳಿಂದ ಇರಲಿಲ್ಲ. ಅದನ್ನು ಪ್ರತ್ಯಕ್ಷ ನೋಡಲು ಮೊನ್ನೆ ಇದ್ದಕ್ಕಿದ್ದ ಹಾಗೇ ಅನ್ನಿಸಿತು…ಅನ್ನಿಸಿದ್ದನ್ನು ಮಾಡಬೇಕೆಂಬುದು ನನ್ನ ಪಾಲಿಸಿ.

ಪಕ್ಕದ ಮನೆಯವರು ಅವರ ಮನೆ ಮೇಲೆ ಇನ್ನೊಂದು ಮನೆ ಕಟ್ಟಿಸುತ್ತಿದ್ದಾರೆ…ಅದರ ಧೂಳು, ಇಟ್ಟಿಗೆ, ಮರಳು ರಸ್ತೆಯನ್ನು ವ್ಯಾಪಿಸಿ ಒಂಥರಾ ಮಬ್ಬುಗೊಳಿಸಿತ್ತು. ಬೆಂಗಳೂರಿನ ನಾಗರಿಕರ ಗುಣಲಕ್ಷಣವನ್ನು ಎತ್ತಿ ತೋರಿಸುವಂತೆ, ಎಲ್ಲರ ಮನೆಯ ಬಾಗಿಲುಗಳೂ ಬಿಗಿಯಾಗಿಯೇ ಜಡಿದಿದ್ದವು. ಮರಗಳು ಆಷಾಢದ ಗಾಳಿಗೆ ಓಲಾಡುತ್ತಿದ್ದವು. ಇವೆಲ್ಲದರ ಮಧ್ಯೆ ನಾನು ಕಿಂಕರ್ತವ್ಯಮೂಢಳಾಗಿ ಗೇಟಿನ ಮುಂದೆ ರಸ್ತೆಯನ್ನು ದಿಟ್ಟಿಸುತ್ತಾ ನಿಂತಿದ್ದೆ.

ನಮ್ಮ ಬೀದಿಯಲ್ಲಿ ಎರಡು ನಾಯಿಗಳಿವೆ. ಒಂದರ ಹೆಸರು ಟಿಪ್ಪು. ಇನ್ನೊಂದರ ಹೆಸರು ವಿವಾದದಲ್ಲಿ ಸಿಲುಕಿರುವಾಗಲೇ ಆ ನಾಯಿ ಶಿವನ ಪಾದ ಸೇರಿತೆಂದು ವರದಿ ಬಂದಿತು. ಅದಕ್ಕೆ ರೋಹಿಣಿ ಮತ್ತು ಟೋನಿ ಎಂಬ ಎರಡು ಹೆಸರಿದ್ದವು. ಆದರೆ ಅದರ ಹೆಸರು ಯಾವುದೆಂದು ಯಾರೂ ನಿರ್ಧರಿಸಲು ಆಗಿಲ್ಲವಾದ್ದರಿಂದ ನಾನು ಅವೆರಡೂ ಹೆಸರನ್ನು ಸೇರಿಸಿ ಟೋಹಿನಿ ಎಂದು ನಾಮಕರಣ ಮಾಡುವ ಹೊತ್ತಿಗೆ ಅದು ದೈವಾಧೀನವಾಗಿತ್ತು.

ಇದನ್ನು ಇಲ್ಲಿ ಯಾಕೆ ಬರೆದೆನೆಂದರೆ, ನಾನು ಕಿಂಕರ್ತವ್ಯಮೂಢಳಾಗಿ ನಿಂತಿದ್ದಾಗ ಟಿಪ್ಪುವಿನ ಆಗಮನವಾಯ್ತು. ಅದೂ ನಮ್ಮ ಮನೆಯ ಗೇಟಿನ ಮುಂದೆಯೇ.

ಬಂದದ್ದೇ ನನ್ನ ನೋಡಿ ಅದು ಸಲ್ಪ ದಿಗ್ಭ್ರಮೆಗೊಂಡಿತು. ಬಾಯಿ ಬಿಟ್ಟು ಆಶ್ಚರ್ಯಚಕಿತವಾಗಿ ನನ್ನನ್ನೇ ದಿಟ್ಟಿಸಿ ನೋಡಿತು ಬೇರೆ !

ನಾನು : ಏನೋ ಟಿಪ್ಪು….ಹೇಗಿದ್ದೀಯ ?

ಅದು : ಕೇಳ್ಬೇಡ.

ಈಗ ದಿಗ್ಭ್ರಮೆಗೊಳ್ಳುವ ಸರದಿ ನನ್ನದಾಗಿತ್ತು. ನಾಯಿ ಮನುಷ್ಯರ ದನಿಯಲ್ಲಿ ಮಾತಾಡುತ್ತಿತ್ತು…ಅದೂ ನಮ್ಮ ಟಿಪ್ಪು !

ನಾನು : ಯಾಕೋ, ಅಮ್ಮ bread ಹಾಕೋದನ್ನ ನಿಲ್ಲಿಸಿದರಾ ?

ಅದು : ಇಲ್ಲ, ಸಂಪದ್ಭರಿತವಾಗಿ ಊಟಗಳು ಸಿಗುತ್ತಿವೆ. ಜನ ಊಟವನ್ನ ಚೆನ್ನಾಗೇ ಚೆಲ್ಲುತ್ತಿದ್ದಾರೆ. ಸದ್ಯಕ್ಕೆ ತೊಂದರೆ ಅದಲ್ಲ.

ನಾನು: ಆಹ…11.3 % inflation rate ನಲ್ಲೂ ಜನ ಊಟ ಚೆನ್ನಾಗೇ ಚೆಲ್ಲುತ್ತಿದ್ದಾರೆಯೇ ? ಭೇಷ್ ! ಮತ್ತಿನ್ನೇನು ತೊಂದರೆ ನಿಂದು ?

ಅದು: ಗಾದೆಯಿಂದ ನಮ್ಮ ಮಾನ ಮರ್ಯಾದೆ ಹರಾಜಾಗಿದೆ !

ನಾನು : ಗಾದೆನೆಲ್ಲಾ ಬೈಯ್ಯಬೇಡ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ತಿಳಿಯಿತೇ ?

ಅದು : ಹಾಗಂತ ನಮ್ಮ ಮಾನ ತೆಗೆಯುವುದು ಎಷ್ಟು ಸರಿ ?

ನಾನು : ನಿನ್ನ ಮಾನ ಕಳೆದಿರುವ ಗಾದೆ ಯಾವುದು ?

ಅದು : ನಾವು ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲವಂತೆ ?

ನಾನು : ಹೌದು, ಹಾಳಾಗುವುದಿಲ್ಲ.

ಅದು : ನೀವು ಭಕ್ತಿಯಿಂದ ಕೇಳಿಕೊಂದರೆ ಅಥವ ಕುಪಿತಗೊಂಡರೆ ದೇವಲೋಕಕ್ಕೆ ಒಳಿತು ಕೆಡಕುಗಳಾಅಗುತ್ತವೆಯೋ ?

ನಾನು : ಹೌದು.

ಅದು : ನಿನ್ನ ತಲೆ !

ನನಗೆ ರೇಗಿ ಹೋಯ್ತು. ನಾಯಿಯೊಂದು ಈ ತರಹ ನನ್ನನ್ನ ಬೈದಿದ್ದು ನನಗೆ ಸರ್ವಥಾ ಸಮ್ಮತವಾಗಲಿಲ್ಲ. ನಾನಂದೆ, ನೋಡು, sound waves do not travel through vacuum, ಅದಕ್ಕೆ ನಿನ್ನ ಬೊಗಳಿಕೆ ದೇವಲೋಕಕ್ಕೆ ಕೇಳೋಲ್ಲ.

ಅದು : ನೀವು ಗಂಟೆ ಜಾಗಟೆಗಳನ್ನ ಬಾರಿಸಿದರೆ ಕೇಳತ್ತೋ ?

ನಾನು for the first time, struck ಆದೆ. ನನ್ನದೇ physics ನಲ್ಲಿ !

ಅದು : see ! you people don’t know what you are doing ! don’t think we don’t know and understand English, we wear collars…which implies we are taught to obey orders in English !

shock ಆಗೋದೆ ನಾನು !!

ನಾನು ನಮ್ಮ ಮನುಕುಲದ ಮರ್ಯಾದೆ ಹೀಗೆ ಹರಾಜಾವುದನ್ನು ನೋಡಲು ತಯಾರಿರಲಿಲ್ಲ. ನಾನಂದೆ, ನೋಡು, ನಾವು ಮನಸ್ಸಿಟ್ಟು ಪ್ರಾರ್ಥನೆ ಮಾಡುತ್ತೀವಿ…ಅದು ದೇವರನ್ನ ಮುಟ್ಟತ್ತೆ.

ಅದು : ನಮಗೆ ಮನಸ್ಸಿಲ್ಲ ಅಂತ ನೀವು ಹೇಗೆ assume ಮಾಡಿಕೊಂಡಿರಿ ? ನಮಗೆ ಮಾತು, ಬೈಗುಳ, ಪ್ರಾರ್ಥನೆ, ಎಲ್ಲ ಬೊಗಳಿಕೆಯೇ. ಹಾಗಾದರೆ ನಮ್ಮ ಪ್ರಾರ್ಥನೆ ದೇವರು ಕೇಳಿಸಿಕೊಳ್ಳುವುದಿಲ್ಲವೇ ? ನಿಮ್ಮ ಮಾತು ಮಾತು, ನಮ್ಮ ಬೊಗಳಿಕೆ ಮಾತೇ ಅಲ್ಲವೇ ? ಹ ? ಮಾತಾಡು ! rather, ಬೊಗಳು !

checkmate question !ನಾಯಿಯೊಂದರ ಮುಂದೆ ನಾನು ನಿರುತ್ತರಳಾದೆ !

ಅದು ಮುಂದುವರಿಸಿತು. ನೋಡು, ನಮಗೂ ಮನಸ್ಸಿದೆ. ನೀವು ನಮ್ಮ ಬೊಗಳಿಕೆಯನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ಅನ್ನುವ ಮಾತ್ರಕ್ಕೆ ದೇವಲೋಕವನ್ನು ಅದು ತಲುಪುವುದಿಲ್ಲ ಎಂದುಕೊಳ್ಳಬೇಡ. ಆನೆ ಕೂಗಿದ್ದಕ್ಕೆ ವಿಷ್ಣು ಬಂದ, ನಾವು ಕೂಗಿದರೆ ಹರಿಹರಬ್ರಹ್ಮಾದಿಗಳು ಬರ್ತಾರೆ ! ತಿಳೀತಾ ? ನಾವು ವಿಶ್ವ ಶ್ವಾನ ಹಕ್ಕು ಪುನಸ್ಸ್ಥಾಪನಾ ಸಂಘದಿಂದ ಆಷಾಢ ಅಮಾವಾಸ್ಯೆಯಂದು ಒಕ್ಕೊರಲಿನಿಂದ ಬೊಗಳಿ ಮತ್ತು ಊಳಿಟ್ಟು ನಮ್ಮ ಬೇಡಿಕೆಯನ್ನು ಸಲ್ಲಿಸಲಿದ್ದೇವೆ. ನೋಡು ಆಗ ಏನಾಗತ್ತೆ ಅಂತ !

ಅಷ್ಟೊತ್ತಿಗೆ ಅಮ್ಮ ” ಲೇ…ಏನೆ ಮಾಡ್ತಿದ್ಯಾ…ಗೇಟ್ ಮೇಲೆ ನಿದ್ದೆ ಮಾಡುವ ಹಣೆಬರಹ ಯಾಕೆ ? ನೋಡಿದವರು ಹಾಸಿಗೆ ಗತಿ ಇಲ್ಲ ಅಂದುಕೊಳ್ಳಬೇಕೆ ? “

ಕಣ್ಣು ಬಿಟ್ಟೆ.ಅಯ್ಯೋ…ನಾನು ನಿದ್ದೆ ಮಾಡಿದ್ದೆನೆ ? ಅದೂ ಗೇಟ್ ಮುಂದೆ ನಿಂತು ತೂಕಡಿಸಿದ್ದೆನೆ ? ಕನಸು ಬೇರೆ ಬಿದ್ದಿತ್ತೇ ? ಟಿಪ್ಪೂ ? ಮಾಯ ! ಸದ್ಯ…ಕನಸಿನಲ್ಲಿ ಅವಮಾನ ಆಯ್ತು…ನಿಜವಾಗಿಯೂ ಅಲ್ಲ !

ಅಮ್ಮ : ನೋಡಿದವರು ಆಡಿಕೊಳ್ಳುತ್ತಾರೆ…ಹುಡುಗಿ ಹೊರಗೆ ಸುಮ್ಮನೆ ಕಣ್ಣಾಡಿಸುತ್ತ ಇರ್ತಾಳೆ ಕೆಲ್ಸ ಇಲ್ಲದೇ !

ನಾನು : ಬಿಡಮ್ಮ…ನಾಯಿ ಬೊಗಳಿದರೆ…

ನನಗೆ ಯಾಕೋ ಆ ಗಾದೆ ಹೇಳಲು ಮನಸ್ಸೇ ಆಗಲಿಲ್ಲ.

Create a free website or blog at WordPress.com.