ಇಂದು ನಡೆದ ಅನಿರೀಕ್ಷಿತ ಎಸ್.ಎಮ್.ಎಸ್ ಸಂಭಾಷಣೆಯೊಂದು ಈ ಬ್ಲಾಗಿಗೆ ಪೋಸ್ಟ್ ಒಂದನ್ನು ಬರೆಯಲು ಅವಕಾಶ ಒದಗಿಸಿತು.
ನಡೆದದ್ದು ಇಷ್ಟು :
ಮಧ್ಯಾಹ್ನದ ತುಂತುರು ಮಳೆಯಲ್ಲಿ ಯಾಕೋ ನೆನೆಯಬೇಕೆನಿಸಿತು. ಟೆರೇಸ್ ಮೇಲೆ ಹೋದೆ ನೆನೆಯಲು. ಆಗ ಸುಮ್ಮನೆ ಟೈಮ್ ಪಾಸ್ ಗೆ ಒಂದು ಹನಿಕವನ ಬರೆಯೋಣ ಅನ್ನಿಸಿ ಈ ಕವನ ಬರೆದೆ:
ನೀನಿನ್ನೂ ಸಿಗದಿದ್ದಾಗ ಮಳೆ ನೀರಬೀಳಾಗಿತ್ತು
ನೀ ಸಿಕ್ಕಾಗ ಮಳೆ ಮುತ್ತಗಣಿಯಾಯ್ತು
ನೀನೆನ್ನ ಅಗಲಿದಾಗ ಮಳೆ ನನ್ನ ಅಳುವಾಯ್ತು
ನಿನ್ನ ನೆನಪ ಮುತ್ತ ಹೊತ್ತು ಮಳೆಯಿಂದು ಹನಿಯುತ್ತಿತ್ತು.
ಇದನ್ನು ನಮ್ಮನಾಡಿನ ಸದಸ್ಯರಿಗೆಲ್ಲರಿಗೂ ಎಸ್.ಎಮ್.ಎಸ್ ಮಾಡಿದೆ. ಐದು ನಿಮಷದಲ್ಲಿ ಗುರುಗಳಾದ ಅರುಣರ ಮೆಸೇಜಿದೆಯೆಂದು ಹಿರಣ್ಮಯಿ ಹೇಳಿದಳು. ಅವರು ಕವನವನ್ನು ಈ ರೀತಿ ಮುಂದುವರೆಸಿದ್ದರು…
ಇಂದು ಮಳೆಯ ಹನಿಯಾಯ್ತು
ಅದುವೆ ಮನದ ದನಿಯಾಯ್ತು
ದನಿಯು ಹನಿಯ ಜೊತೆಗೂಡಿ
ಜಗವೆ ಸುಖದ ಖನಿಯಾಯ್ತು !
ನಾನು ಹಿರಣ್ಮಯಿಯ ದೂತೆಯ ಮೂಲಕ “ಆಹಾ ! ಸೂಪರ್ರು ! ” ಎಂದು ಸಂದೇಶ ಮುಟ್ಟಿಸಿದೆ. ಮತ್ತೆ ಐದು ನಿಮಿಷದಲ್ಲಿ ಹಿರಣ್ಮಯಿ ಮತ್ತೊಂದು ಸಂದೇಶವೆಂದಳು. ಗುರುಗುಳು ಹೀಗೆಂದಿದ್ದರು…
ಕವನವದು ನಿನ್ನದೇ, ಪದವು ಮಾತ್ರ ನನ್ನದೆರಡು
ಭಾವ,ಜೀವ,ಜಾವ ನಿನ್ನದೇ !
ಭಲೆಯು ಭೇಷು ಎಲ್ಲಾ ನಿನಗೆ, ನಾನು ಇಲ್ಲಿ ಬರಿಯೆ ಕುರುಡು !
ನಾನು ಹೀಗೆಂದೆ :
ಕವನ ನನ್ನದಾದರೇನು ಅಕ್ಷರ ತಮ್ಮ ದೇಯವು !
ಭಲೇ ಭೇಷ್ ಎನಗೆಂದರೂ ಅದು ತಮ್ಮವೇ ಸರ್ವವೂ !
ಅರುಣರಿಂದಲೇ ನಾನು ಕವನ ಬರೆಯಲು ಕಲಿತದ್ದು ! ನನಗೆ ಕವನಗಳು ಬರೆಯುವುದು ನಿಜವಾಗಿಯೂ ಬರುತ್ತಿರಲಿಲ್ಲ. ನಮ್ಮನಾಡಿಗೆ ನನ್ನ ಸೇರ್ಪಡೆಯಾದ ಮೇಲೆ ಗುರುಗಳ ಬ್ಲಾಗ್ ಓದಿ ಓದಿ ಕವನ ಬರೆಯುವುದರ “ಅ ಆ ಇ ಈ…”ಯ ಅಭ್ಯಾಸವಾಯ್ತು. ಅಲ್ಲಿಂದ ಹಿಡಿದು ನಾನು ಇಲ್ಲಿಯವರೆಗೂ ಬಂದಿದ್ದೇನೆಂದರೆ ಇದೆಲ್ಲ ಅವರ ಕರುಣೆ, ನನ್ನ ಪ್ರಯತ್ನ ಅಷ್ಟೇ ! ಆದ್ದರಿಂದ ಈ ಬ್ಲಾಗಿನ ಪ್ರಥಮ ಪೋಸ್ಟನ್ನು ಗುರುಗಳಿಗೆ ಅರ್ಪಿಸುತ್ತಿದ್ದೇನೆ.
ಥ್ಯಾಂಕ್ಸ್ ಗುರುಗಳೆ !