“ಟೇಬಲ್ ಕ್ಲೀನ್ ಮಾಡದಿದ್ದರೆ ಮನೆಯಿಂದ ಓಡಿಸುತ್ತೇನೆ ” ಅನ್ನೋ ಅಮ್ಮಂದಿರ ಬೆದರಿಕೆ ಪ್ರಾಯಶಃ ಎಲ್ಲರ ಜೀವನದಲ್ಲೂ ಸಾಮಾನ್ಯವೆನಿಸುತ್ತದೆ. ಕೆಲವೊಮ್ಮೆ ಅಮ್ಮಂದಿರೇ ಕ್ಲೀನ್ ಮಾಡಲಿಕ್ಕೂ ಹೋಗಿರುತ್ತಾರೆ. ಅವರು ಕ್ಲೀನ್ ಮಾಡಿದರೆ ನಾವು ಬಚ್ಚಿಟ್ಟುಕೊಂಡ ವಸ್ತುಗಳೆಲ್ಲಾ ಹೊರಗೆಬಂದು, ” ಇದೆಲ್ಲಾ ಯಾಕೆ ಇಟ್ಟುಕೊಂಡಿದಿಯಾ ? ಸುಮ್ಮನೆ ಜಾಗ ಹಾಳುಮಾಡ್ತಿ” ಅಂತೆಲ್ಲಾ ಬೈದು, ಕೆಲ ಅತ್ಯಮೂಲ್ಯ ವಸ್ತುಗನ್ನು ನಿರ್ದಾಕ್ಷಿಣ್ಯವಾಗಿ ಕಸದಬುಟ್ಟಿಗೆ ರವಾನಿಸುತ್ತಾರಾದ್ದರಿಂದ ನಾವೇ ನಮ್ಮ ಟೇಬಲ್ಲು, ಕಪಾಟುಗಳನ್ನು ಶುದ್ಧಗೊಳಿಸಿಕೊಳ್ಳುವುದು ನಮ್ಮ ಜಾಣ್ಮೆಯನ್ನು ತೋರಿಸುತ್ತದೆ.
ನಿಜ ಹೇಳಬೇಕೆಂದರೆ ಅಮ್ಮಂದಿರಿಗೆ ಒಂದು ವಿಷಯ ಅರ್ಥವೇ ಆಗೊಲ್ಲ. ನಮ್ಮ ಟೇಬಲ್ಲು ಚೆನ್ನಾಗಿಲ್ಲದಿದ್ದರೇನೆ ನಮಗೆ ಬೇಕಾದ ವಸ್ತುಗಳು ಸಿಕ್ಕೋದು ! ನೀಟಾಗಿ, ಜೋಪಾನವಾಗಿ ವಸ್ತುಗಳನ್ನ ಇದ್ದಲ್ಲಿ ಇಟ್ಟುಬಿಡಿ, ಆಮೇಲೆ ನಿಮಗೆ ಬೇಕಾದಾಗ ಅವುಗಳು ಸಿಗುತ್ತವಾ ನೋಡಿ !
ಇದೇ ವಾದವನ್ನು ಮಂಡಿಸಿದೆ ನಾನು ನಮ್ಮಮ್ಮನ ಮುಂದೆ ಇವತ್ತು. ಅಮ್ಮ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿಬಿಟ್ಟರು ! ” ಇದೆಲ್ಲಾ ಸೋಮಾರಿತನದ ಲಕ್ಷಣ. ಮರ್ಯಾದೆಯಾಗಿ ಕ್ಲೀನ್ ಮಾಡಿಕೊಂಡರೆ ಸರಿ, ಇಲ್ಲಾಂದ್ರೆ ನಿಜವಾಗಲು ಮನೆಯಿಂದ ಹೊರಗೇನೆ ಹೋಗ್ತಿ ನೀನು” ಅಂದದ್ದೇ ಸೂಟ್ಕೇಸ್ ಕೆಳಗಿಳಿಸಿದರು !
ಸೂಟ್ ಕೇಸ್ ನೋಡಿದ್ದೇ ನನಗೆ ಪುಕಪುಕಶುರುವಾಯ್ತು. ನಾನು ಮನೆಬಿಟ್ಟು ಹೋಗೋದು, ಪಾರ್ಕಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಮಲಗೋದು…ಇವೆಲ್ಲ ಕಣ್ಣೆಂಬ ಸೆವೆಂಟಿ ಎಮೆಮ್ ಪರದೆಯ ಮೇಲೆ ಒಮ್ಮೆ ಬಂದು ಹೋದವು. ಯಾಕಿವೆಲ್ಲಾ ಸುಮ್ಮನೆ ಅಂತ ನನ್ನ ಟೇಬಲ್ಲನ್ನು ಕ್ಲೀನ್ ಮಾಡಲು ಟೊಂಕ ಕಟ್ಟಿ ನಿಂತೆ.
ಹೇಳಿಕೊಳ್ಳುವಂಥಾ ಕಷ್ಟಕರವಾದ ಮತ್ತು ದೊಡ್ಡ ಕೆಲಸವೇನಲ್ಲ ಎಂದುಕೊಂಡಿದ್ದ ನನ್ನ ಉತ್ತರಕುಮಾರನಂತಹ ಪೌರುಷ ಟೇಬಲ್ ಮುಂದೆ ಸಾಲದಾಯ್ತು. ಅದು ಏನೇನು ತುಂಬಿಸಿದ್ದೆ ನಾನು ಅದರ ಮೇಲೆ ! ಏನೆಲ್ಲ ತುಂಬಿಸಿಲ್ಲಾ ಅಂತ ಕೇಳಬೇಕು ನ್ಯಾಯವಾಗಿ ! ಹೋದ ವರ್ಷದ ಪ್ರಜಾವಾಣಿ ದೀಪಾವಾಳಿ ಕಥಾಸ್ಪರ್ಧೆಯ ಪೇಪರ್ ಕಟಿಂಗ್ ಇಂದ ಹಿಡಿದು ಮೊನ್ನೆ ನೆರೆ ಸಂತ್ರಸ್ಥರ ಪರಿಹಾರಧನಕ್ಕೆ ಕೊಟ್ಟ ಹಣಕ್ಕೆ ರಸೀತಿಯವರೆಗೂ ಎಲ್ಲಾ ಇದ್ದವು !
ಇದ್ದ ಹಾಳೆಗಳ ರಾಶಿಯಲ್ಲಿ ಯಾವ್ಯಾವುದನ್ನು ಬಿಸಾಕಲಿ ಅಂತ ತೀರ್ಮಾನಿಸುವುದರಲ್ಲಿ ನನ್ನ ಜೀವಮಾನವೇ ಕಳೆದುಹೋಗುತ್ತದೆ ಅನ್ನೋ ಅನುಮಾನ ನನಗೆ ಬರದಿರಲಿಲ್ಲ. ಅಮ್ಮ ಬೇರೆ ಎರಡು ಘಂಟೆಗಳ ಗಡುವು ಕೊಟ್ಟಿದ್ದರು. ನಾನು ಏನು ಮಾಡಲಿ ಅಂತ ಯೋಚನೆ ಮಾಡುವಷ್ಟರಲ್ಲಿಯೇ ಅರ್ಧಘಂಟೆ ಆಗಿಹೋಗಿತ್ತು. ” ಎರಡು ಘಂಟೆಯಲಲ್ಲಿ ಖಂಡಿತಾ ಕ್ಲೀನ್ ಮಾಡಕ್ಕೆ ಆಗಲ್ಲ ” ಅಂತ ಗೊಣಗಿದೆ. ಅಮ್ಮ ಅಷ್ಟೇ ನಿರ್ಲಿಪ್ತರಾಗಿ ” ಕ್ಲೀನ್ ಆಗೋವರ್ಗು ಊಟ ಇಲ್ಲ” ಅಂದುಬಿಟ್ರು !
ಉದರನಿಮಿತ್ತಂ ಬಹುಕೃತವೇಷಂ ಅಂತ ಸುಮ್ಮನೇ ಬರೆದಿಲ್ಲ ಹಿರಿಯರು ಅಂದುಕೊಂಡೆ.
ರಾಶಿ ಬಿದ್ದಿದ್ದ ಒಂದೊಂದೆ ಹಾಳೆ ಓದುತ್ತಾ ಹೋದೆ. “ಇದಿರಲಿ, ಇದು ಬೇಕಾಗತ್ತೆ, ಯಾವುದಕ್ಕೂ ಇರಲಿ, ಹಾಳಾಗೋಗ್ಲಿ ಹತ್ತರ ಮಧ್ಯ ಹನ್ನೊಂದು” ಅಂತ ಇಟ್ಟುಕೊಂಡಿದ್ದ ಹಾಳೆಗಳನ್ನೆಲ್ಲಾ ಮುಖಾ ಮುಲಾಜಿಲ್ಲದೇ ಬಿಸಾಕಿದೆ. ಮತ್ತೆ ಅದರ ಕಡೆ ನೋಡಿದರೆ ಎಲ್ಲಿ ಮನಸ್ಸು ಬದಲಾಯಿಸಿಬಿಡುತ್ತೀನೋ ಅಂತ ಕವರ್ ಒಳಗೆ ಹರಿದು ಹರಿದು ಹಾಕಿದೆ. ಅದೂ ಕಣ್ಣು ಮುಚ್ಚಿಕೊಂಡು !ರೀಫಿಲ್ ಇಲ್ಲದ, ರೀಫಿಲ್ ಸಿಗದ ಪೆನ್ನುಗಳನ್ನು ನಿರ್ದಾಕ್ಷಿಣ್ಯವಾಗಿ ಬಿಸಾಕಬೇಕಾಯ್ತು. ಮುದ್ದು ಮುದ್ದಾದ,ಚೆನ್ನಾಗಿ ಬರೆಯುತ್ತಿದ್ದ ಪೆನ್ನುಗಳಿದ್ದವಾದರೂ ಅವೆಲ್ಲ ” use and throw ” ಆಗಿದ್ದವು. ಉಪಯೋಗಿಸಿದ್ದೆ, ಬಿಸಾಡಿರಲಿಲ್ಲ, ಅದನ್ನೂ ಮಾಡಿ ಆಯ್ತು.
ನನ್ನ ಟೇಬಲ್ ಕ್ಲೀನಾಯ್ತು.ಇನ್ನು ಕಪಾಟಿನ ಸರದಿ. ಮೊದಲನೆಯ ವಿಭಾಗದಲ್ಲಿ ಕೆಲ ಮುಖ್ಯ ದಾಖಲೆಗಳ ಜೆರಾಕ್ಸುಗಳು ಅನಾಥವಾಗಿ ಬಿದ್ದಿದ್ದವು. ಇದ್ದ ದಾಖಲೆಗಳನ್ನೇ ಇಲ್ಲವೆಂದುಕೊಂದು ಹಲವಾರು ಬಾರಿ ಜೆರಾಕ್ಸ್ ಮಾಡಿಸಿದ ನನ್ನ ಅವಸರಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಎಲ್ಲವನ್ನು ಒಂದು ಫೈಲಿನಲ್ಲಿ ಹಾಕಿಟ್ಟು, ಯಾವ್ಯಾವ ದಾಖಲೆ ಎಷ್ಟೆಷ್ಟು ಪ್ರತಿಗಳಿವೆ ಎಂದು ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡೆ. ಆಮೇಲೆ ಈಡೈರಿಯನ್ನು ಹುಡುಕಬೇಕಾದ ಪರಿಸ್ಥಿತಿ ಬರಬಹುದು ಅನ್ನೋದು ನನಗೆ ಆಗ ಹೊಳೆದಿರಲಿಲ್ಲ.
ಎರಡನೆಯ ಕಪಾಟಿನಲ್ಲಿ ನನ್ನ ನೆನಪಿನ ಕಂತೆಗಳಿದ್ದವು. ಹೈ ಸ್ಕೂಲಿನ ಮೊದಲನೆಯ ದಿನ ಸಿಕ್ಕ ಗೆಳತಿಯ “books to buy” ಹಾಳೆ, ನವಿಲುಗರಿ, ಫೇವರೈಟ್ ಟೀಚರ್ ಕೊಟ್ಟ ಪೆನ್ನು, ಬಹಳ ಕಷ್ಟಪಟ್ಟು ಆರಿಸಿ ಹುಡುಕಿ ಜತನದಿಂದ ಕಾಪಾಡಿದ್ದ ಪೆನ್ ಪೆನ್ಸಿಲ್ಲು,…ಇವೆಲ್ಲವನ್ನು ಹೊರಹಾಕಲು ನನಗೆ ಮನಸ್ಸೇ ಬರಲಿಲ್ಲ. ನಾನು ನನ್ನ ಆಪ್ತಗೆಳತಿ ಆಡದ ಗಾಸಿಪ್ಪಿರಲಿಲ್ಲ, ಅರಿಯದ ಕೋಡ್ language ಇರಲಿಲ್ಲ ! ಅವೆಲ್ಲದರ ಒಂದೊಂದು ಪ್ರತಿ ಇಟ್ಟುಕೊಳ್ಳಬೇಕೆನಿಸಿತ್ತು ನನಗೆ, ಆದರೆ ಅದೇಕೋ ಆಗಲಿಲ್ಲ. ಹುಡುಗರು ನನ್ನ ಪೆನ್ ಪೆನ್ಸಿಲ್ಲನ್ನು ಕದ್ದಾಗ ಅತ್ತಿದ್ದಂತೂ ಮರೆಯಲಾರೆ ! ಇಂಥಾ ನವಿರು ಭಾವನೆಗಳ , ಮರೆಯದ ನೆನಪುಗಳಭರಪೂರ ರಾಶಿ ಹೊತ್ತ ಆ ವಸ್ತುಗಳನ್ನು ಬಿಸಾಕಲು ಆಗುತ್ತದೆಯೇ ? ಹೇಗೆ ಜೋಪಾನವಾಗಿ ತೆಗೆದೆನೋ ಹಾಗೆಯೇ ಮತ್ತೆ ಅಲ್ಲಿಯೇ ಇರಿಸಿದೆ, ಅಮ್ಮ ಬೈದರೂ ಸರಿ, ಅದನ್ನು ಬಿಸಾಡುವುದಿಲ್ಲ ಎಂದು ಸಾವಿರದ ನೂರ ಹನ್ನೊಂದನೆಯ ಸರ್ತಿ ಪ್ರತಿಜ್ಞೆ ಮಾಡಿ.
ಇನ್ನು ಕಾಲೇಜಿನ ನೆನಪುಗಳಿದ್ದ ಕಪಾಟಿನ ವಿಭಾಗವನ್ನು ತೆಗೆದಾಗ ಅವೆಲ್ಲವನ್ನು ಅರೆಕ್ಷಣದಲ್ಲಿ ನಿರ್ದಾಕ್ಷಿಣ್ಯವಾಗಿ ಬಿಸಾಡಿಬಿಟ್ಟೆ. ಕಾಲೇಜಿನಲ್ಲಿ ಯಾಕೋ ಎಲ್ಲರೂ ಬರೀ ಕಾರ್ಯವಾಸಿಗಳು, ಭಾವನಾಶೂನ್ಯರೇ ಸಿಕ್ಕರು ನನಗೆ ಸ್ನೇಹಿತೆಯರಾಗಿ. ಅವರ ನೆನಪುಗಳನ್ನು ಹೊಂದದಿರುವುದೇ ಸರಿಯೆನಿಸಿತು. ಮನಸ್ಸು ಇಂಥವುಗಳನ್ನೆಲ್ಲಾ ಸುಲಭಕ್ಕೆ ಮರೆಯುವುದಿಲ್ಲವಾದರೂ, ಯಾರೋ ಸಿಕ್ಕಾಗ, “ಅವಳು ಹೇಗಿದ್ದಾಳೆ ? ಇವಳು ಹೇಗಿದ್ದಾಳೆ ? ಅವಳ ಮದುವೆಗೆ ನೀನ್ಯಾಕೆ ಬರಲಿಲ್ಲ ?” ಅಂತೆಲ್ಲಾ ಕೇಳಿ ನೆನಪಿಸಿದಾಗ ” ಗೊತ್ತಿಲ್ಲ” ಅಂದು ತಪ್ಪಿಸಿಕೊಳ್ಳುವುದು ಸುಲಭ. ಆದರೇ ಈ ನೆನಪಿನ ನೇಣುಹಗ್ಗದ ನಿಧಾನದ ಜಗ್ಗುವುಕೆಯನ್ನು ಏಗುವುದು ಕಷ್ಟ. ನನ್ನನ್ನೇ ಸಾಯಿಸುವ ಶಕ್ತಿಯುಳ್ಳ ನೆನಪನ್ನು ನಾನು ಸಾಯಿಸಿ ಬದುಕುವುದು ಆ ಕ್ಷಣದ ಅನಿವಾರ್ಯತೆಯಾಯ್ತು ನನಗೆ.ಸ್ಲಾಂ ಬುಕ್ಕುಗಳನ್ನ ತೂಕಕ್ಕೆ ಇಟ್ಟೆ, ಯೋಗರಾಜ ಭಟ್ಟರಿಂದ ಪ್ರೇರಿತಳಾಗಿ. ಫೋಟೋಗಳನ್ನ ಸುಟ್ಟು ಹಾಕಿದೆ, ಕರೀನಾಳ ಪ್ರಭಾವದಿಂದ.
ಹಳೇ ನೆನಪುಗಳ ಕಂತೆ ತೆಗೆದಾಗಲೆಲ್ಲ ಮನಸ್ಸೆಂಬ ಹುಚ್ಚುಕುದುರೆಗೆ ಹುಚ್ಚು ಹೆಚ್ಚಾಗುತ್ತದೆ ! ಲಗಾಮು ಹಾಕುವುದು ಸುಲಭದ ಮಾತಲ್ಲ. ಹೀಗೇ ಕಪಾಟನ್ನು ಕ್ಲೀನ್ ಮಾಡುತ್ತಿದ್ದಾಗ ನಾಲ್ಕು ತಾಸು ಕಳೆದಿದ್ದು ಗೊತ್ತೇ ಆಗಿರಲಿಲ್ಲ ! ಅಮ್ಮ ಅನ್ನವನ್ನು ತಟ್ಟೆಯಲ್ಲಿ ತಂದಿಟ್ಟು, ” ಅನ್ನ ತಿನ್ನು ಮೊದಲು ! ಆಮೇಲೆ ಮುಂಡುವರೆಸು ನಿನ್ನ ಶ್ರಮದಾನ ! ಎಲ್ಲ ಕ್ಲೀನಾದಮೇಲೆ ಬಿಸಾಕೋದೆಲ್ಲವನ್ನ ಆ ಸೂಟ್ ಕೇಸಿನಲ್ಲಿ ಹಾಕಿಡು, ಅದರ ಸಮೇತ ನಾಳೆ ಹಳೇ ಪೇಪರ್ ನವನಿಗೆ ಕೊಡೋಣಂತೆ ! ” ಅಂದು ಹೊರಟರು. ಆಮೇಲೆ ನಾನು ಮಾಡಿದ ಕೆಲಸಗಳನ್ನೆಲ್ಲಾ ಟಿಕ್ ಮಾಡಲು ಡೈರಿ ಹುಡುಕಿದೆ, ಮತ್ತೆ ನಾಪತ್ತೆ ! ಕ್ಲೀನ್ ಮಾಡಿದ್ದರ ಪರಿಣಾಮವಾಗಿ ನಾನು ಡೈರಿಯನ್ನು ಎಲ್ಲೋ ಇಟ್ಟಿದ್ದೆ. ಹುಡುಕಲು ಹೋಗಿ ಮತ್ತೆ ಟೇಬಲ್ ಗಲೀಜಾಯ್ತು ! ಆಮೇಲೆಲ್ಲೋ ಸಿಕ್ಕಿತು. ಅದನ್ನ ಬೇರೆಕಡೆ ಇಟ್ಟು, ಮತ್ತೆ ಎಲ್ಲ ಸರಿಮಾಡುತ್ತಾ ಕೂತೆ. ಆರು ತಾಸಿನ, ಅರ್ಧ ಘಂಟೆ ಲಂಚ್ ಬ್ರೇಕಿನ ನನ್ನ ಟೇಬಲ್ ಮತ್ತು ಕಪಾಟು ಸ್ವಚ್ಛತಾ ಅಭಿಯಾನ ಸಾಂಗವಾಗಿ ನೆರವೇರಿತ್ತು.
ಕ್ಲೀನ್ ಆದ ಮೇಲೂ ನನಗೆ ನೆನಪುಗಳು ಕಾಡುತ್ತಿದ್ದವು. ವಸ್ತುಗಳನ್ನು ನಾಶಮಾಡಿಯಾಗಿತ್ತು. ಆದರೆ ಕೆಟ್ಟ, ಕಾಡುವ ನೆನಪನ್ನೆಲ್ಲಾ ಸೂಟ್ ಕೇಸ್ ನಲ್ಲಿ ಹಾಕಿಟ್ಟು ಬಿಸಾಕುವಂತಿದ್ದರೆ ಎಷ್ಟು ಚೆಂದ ಇರ್ತಿತ್ತು ಅಲ್ವಾ ?