ಇದು ನಾನು ಬರೆಯಲೆತ್ನಿಸಿರುವ ಮೊದಲ ಲಲಿತ ಪ್ರಬಂಧ. ಸಿಕ್ಕಾಪಟ್ಟೆ ಉದ್ದ ಆಯ್ತು ಆದ್ದರಿಂದ ಎರಡು ಭಾಗದಲ್ಲಿ ಹಾಕ್ತಿದಿನಿ. ಇದು ಮೊದಲನೆಯ ಭಾಗ.
*************************************************
ಜಗಳಗಳಿಗೆ ಕಾರಣ ಬೇಕಿಲ್ಲ, ಯುದ್ಧಗಳಿಗೂ ಇತ್ತೀಚೆಗೆ ಹೇಳಿಕೊಳ್ಳುವಂತಹ ಮುಖ್ಯಕಾರಣ ಬೇಕಿಲ್ಲ. ನಮ್ಮ ಮನೆಯಲ್ಲಿ ನಡೆದಿದ್ದು ಜಗಳವೋ, ಯುದ್ಧವೋ ಗೊತ್ತಿಲ್ಲ. ಆದರೆ ಅದು ಅವೆರಡರ ಸಮಾನಾಂಶವಾದ ಭೀಕರತೆಯನ್ನು ಹೇರಳವಾಗಿ ಹೊಂದಿತ್ತು.
ಉಚ್ಛ ಸ್ವರದ ಮಾತಿಂದ ಒಂದು ಕರಾಳ ದಿನದ ಬೆಳಂಬೆಳಿಗ್ಗೆ ಆರಂಭವಾದ ನನ್ನ ಮತ್ತು ನನ್ನ ಕುಟುಂಬದ ಸದಸ್ಯರೊಂದಿಗಿನ ಜಗಳ ಅದು ಯಾವ ಘಳಿಗೆಯಲ್ಲಿ ಯುದ್ಧಕ್ಕೆ ತಿರುಗಿತೋ ನನಗೆ ಇಂದಿಗೂ ನೆನಪಾಗುತ್ತಿಲ್ಲ. ಮಾತಲ್ಲೆ ಅಸ್ತ್ರ ಪ್ರತ್ಯಸ್ತ್ರಗಳನ್ನು ಪ್ರಯೋಗಿಸುತ್ತಿದ್ದೆವು. ಕಡೆಗೊಂದು ಅಸ್ತ್ರಕ್ಕೆ ನಾನು ಬಲಿಯಾದೆ. ಅದೇ ” ಎಲ್ಲಾದರೂ ಹೋಗಿ ಸಾಯಿ! ನಮಗೆ ನಿನ್ನಂಥವರ ಅವಶ್ಯಕತೆ ಇಲ್ಲ. ನೀನು ಸತ್ತರೆ ಯಾರೂ ಅಳುವುದೂ ಇಲ್ಲ! ನಾವಂತೂ ಒಂದು ಹನಿ ಕಣ್ಣೀರು ಹಾಕೆವು. ತೊಲಗು! ” ಎಂಬ ಮಾತುಗಳು.
ತಾಳ್ಮೆ ತಲೆಯ ತಾರ್ಸಿಯಿಂದ ಎಂದಿಗೋ ಹಾರಿಹೋಗಿತ್ತು. ಬುದ್ಧಿಯೂ ಆವಿಯಾಗಿ ಅನಂತ ದಿಙ್ಮೂಢತೆ ವ್ಯಾಪಿಸಿತ್ತು. ಮನೆಯಿಂದ ಆ ಕ್ಷಣವೇ ಹೊರಟುಬಿಟ್ಟೆ. ಎಲ್ಲಿಗೆ ಪಯಣ ಅಂತ ನನಗೇ ಗೊತ್ತಿಲ್ಲ. ಕಾಲು ಹೋದ ಕಡೆ ದೇಹ ಚಲಿಸುತ್ತಿತ್ತು, ಆದರೆ ಮನಸೆಲ್ಲಿ ಹಾರಿಹೋಗಿತ್ತೋ !
ನಮ್ಮ ಮನೆಯಿಂದ ಅನತಿದೂರದಲ್ಲಿ ಒಂದು ಪಾಳು ಬಾವಿ ಇದೆಯೆಂದು ನನಗೆ ನ್ಯೂಸ್ ಪೇಪರ್ ಮುಖಾಂತರ ಗೊತ್ತಿತ್ತು. ಯಾಕಂದರೆ ಅಲ್ಲಿ ಆತ್ಮಹತ್ಯೆಗಳು ಬಹಳವಾಗಿ ಆಗುತ್ತಿತ್ತು. ಆ ಬಾವಿಯನ್ನು ಮುಚ್ಚಲು ಶತಪ್ರಯತ್ನ ನಡೆದಿದ್ದರೂ ಅದನ್ನು ಮಾಡಲು ಎಲ್ಲರೂ ಹೆದರುತ್ತಿದ್ದರು. ಮುನ್ನೆಡೆಯುತ್ತಿರುವ ಭಾರತ ದೇಶದ ಬುದ್ಧಿವಂತಿಕೆಗೆ ಅಪವಾದವೆಂಬಂತೆ ದೆವ್ವ ಭೂತಗಳ ಮತ್ತು ಪ್ರೇತಲೀಲೆಯ ನಂಬಿಕೆಗಳೂ ಅಲ್ಲಿ ತಾಂಡವವಾಡುತ್ತಾ, ಜನರ ಧೈರ್ಯಗೆಡಿಸಿ, ಆ ಬಾವಿ ಹಾಗೇ ಪಾಳುಬಿದ್ದಿತ್ತು. ಆ ಬಾವಿ ಸಾಕ್ಷಾತ್ ಮೃತ್ಯುಕೂಪವೆಂದೂ, ಅಲ್ಲಿ ಸತ್ತವರು ಅಂತರ್ಪಿಶಾಚಿಯಾಗಿಯೇ ಆಗುತ್ತಾರೆಂದು, ಎಲ್ಲಿ ಸತ್ತರೂ ಅಲ್ಲಿ ಮಾತ್ರ ಸಾಯಬಾರದೆಂಬ ಕುಖ್ಯಾತಿಯನ್ನು ಆ ಬಾವಿ ಪಡೆದಿತ್ತು. ಆದರೆ, ಈ ಬಾವಿ ಎಲ್ಲಿದೆ ಎಂದು ನಿಖರವಾಗಿ ನನಗೆ ಗೊತ್ತಿರಲಿಲ್ಲ.
ದುಡ್ದು ಮರೆತರೂ, ನನ್ನ ಹೆಸರನ್ನೇ ಮರೆತರೂ, ನನ್ನ ನೋಕಿಯಾ ನ್ಯಾವಿಗೇಟರ್ ಮೊಬೈಲನ್ನು ನಾನು ಮರೆಯುತ್ತಲೇ ಇರಲಿಲ್ಲ. ಮನೆಯಲ್ಲಿ ಎಷ್ಟೇ ಘೋರವಾದ ಯುದ್ಧ ವಾಗ್ವಾದಗಳು ನಡೆದಿದ್ದರೂ ನನ್ನ ಕೈ ನನ್ನ ಮೊಬೈಲನ್ನು ಕೈಬಿಟ್ಟಿರಲಿಲ್ಲ. ನನ್ನ ಕೈಯ ಜಾಣ್ಮೆಯನ್ನು ಮೆಚ್ಹಿದೆ. ನ್ಯಾವಿಗೇಟರ್ ನಲ್ಲಿ ಬಾವಿಯನ್ನು ಹುಡುಕಿ, ಅಲ್ಲಿ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಿನ ಮೂಲೆ ಮೂಲೆಗಳಲ್ಲಿದ್ದ ಧೈರ್ಯವನ್ನು ಒಟ್ಟುಗೂಡಿಸಿ ದೃಢ ನಿರ್ಧಾರ ಮಾಡಿದೆ. ನಿರ್ವಿಘ್ನವಾಗಿ, ಮೊದಲನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿ ಸಾಯಬೇಕೆಂದು ನಿರ್ಧರಿಸಿ ನನ್ನ ಸಾವು ನಿರ್ವಿಘ್ನವಾಗಿ ನೆರವೇರಲಿ ಎಂದು ಗಣಪತಿಯಲ್ಲಿ ಬೇಡಿಕೊಂಡೆ.
ಆದರೆ ನನ್ನ ಪ್ರಾರ್ಥನೆ ದೇವರನ್ನು ಮುಟ್ಟಲಿಲ್ಲ ಎಂಬುದು ” ನೊ ಮ್ಯಾಚಸ್ ಫೌಂಡ್ ” ಎಂಬ ನನ್ನ ನ್ಯಾವಿಗೇಟರ್ ಉತ್ತರದಿಂದ ಗೊತ್ತಾಯ್ತು. ಏನೇ ಟೈಪಿಸಿದರೂ ಇದೇ ಉತ್ತರ! ವೆಲ್ಲ್, ಓಲ್ಡ್ ವೆಲ್ಲ್, ಎಂಬುದು ಎಲ್ಲೂ ಕಾಣಿಸಲಿಲ್ಲ. ಮಿಕ್ಕೆಲ್ಲ ಬಿಲ್ಡಿಂಗಿನ , ರಸ್ತೆಗಳ ನಕ್ಷತ್ರ ಕುಲ ಗೋತ್ರಗಳು ಮೊಬೈಲಲ್ಲಿ ರಾರಾಜಿಸುತ್ತಿದ್ದವು, ಪಾಳು ಬಾವಿ ಮತ್ತು ಅದರ ಕಡೆಗೆ ಹೋಗುವ ದಾರಿಯೊಂದನ್ನು ಬಿಟ್ಟು. ದೇವರು ಕೈಬಿಟ್ಟರೇನೆ ಮನುಷ್ಯ ಸಾಯುವುದು ಎಂಬುದು ತಲೆಗೆ ತೋಚಿತು. ಆ ಸಮಯದಲ್ಲಿ ನಾನು ವೇದಾಂತದ ಉತ್ತುಂಗಕ್ಕೆ ಹೋಗಿದ್ದೆನೇನೋ, ಎಲ್ಲವೂ ನಶ್ವರ ಎಂದು ಒಂದು ವಿಕಟನಗೆ ಬೀರಿದೆ.
ಮನೆಯಲ್ಲಿ ಸತ್ತಿದ್ದರೇನೇ ಚೆನ್ನಾಗಿತ್ತು ಅನ್ನಿಸಿತು ನನಗೆ ಒಂದು ನಿಮಿಷ. ಆದರೆ ಅಲ್ಲಿ ಕೆಲವು ಸಮಸ್ಯೆಗಳಿದ್ದವು. ನೇಣು ಹಾಕಿಕೊಲ್ಳಲು ಸೀರೆ, ಫ್ಯಾನುಗಳಿದ್ದವಾದರೂ ನಿಲ್ಲಲು ಸರಿಯಾದ ಎತ್ತರದ ಸ್ಟೂಲಿರಲಿಲ್ಲ. ಮಂಚದ ಮೇಲೆ ನಿಂತುಕೊಂಡು ನೇಣು ಹಾಕಿಕೊಳ್ಳಲು ಆಗುವುದಿಲ್ಲ. ವಿಷದ ಬಾಟಲಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಮತ್ತೆ ಮನೆಯವರ ಬಳಿ ಕೈಚಾಚುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆ. ಫೆನಾಯಿಲು ಮುಗಿದಿದೆ ಎಂದು ಕೆಲಸದವಳು ನೆನ್ನೆಯೇ ಹೇಳಿಬಿಟ್ಟಿದ್ದಳು. ನಿದ್ರೆ ಮಾತ್ರೆ ನಮ್ಮ ಮನೆಯಲ್ಲಿ ದುರದೃಷ್ಟವಷಾತ್ ಯಾರೂ ನುಂಗುತ್ತಿರಲಿಲ್ಲ. ಮನೆಯಲ್ಲಿ ಸಾಯುವ ಯಾವ ದಾರಿಯೂ ನನಗೆ ಅನುಕೂಲಕರವಾಗಿರಲಿಲ್ಲ. ಹೊರಗೆ ಸಾಯದೇ ವಿಧಿಯಿರಲಿಲ್ಲ.
ಮನಸ್ಸಿಗೆ ಬಂದ ಯೋಚನೆಯನ್ನು ನೀರಿನ ಗುಳ್ಳೆ ಒಡೆದಂತೆ ಒಡೆದು ಹಾಕಿ, ಈಗ ಬಾವಿಯ ವಿಳಾಸ ಪತ್ತೆ ಮಾಡುವ ದಾರಿ ಯೋಚಿಸತೊಡಗಿದೆ. ಬೆಂಗಳೂರಿನಂಥಾ ಮಹಾನಗರದಲ್ಲಿ ಮನೆಗಳನ್ನ ಹುಡುಕುವುದೇ ಮಹಾಕಷ್ಟ. ಇನ್ನು ಬಾವಿಗಳನ್ನು ಹುಡುಕುವುದು ಹೇಗೆ ? ಕೇವಲ ೨೭ ಪ್ರತಿಶತ ಕನ್ನಡಿಗರನ್ನು ಮಾತ್ರ ಹೊಂದಿರುವ ಈ ಭವ್ಯ ನಗರಿಯಲ್ಲಿ ಹತ್ತು ಜನರಿಗೆ ಇಬ್ಬರು ಕನ್ನಡಿಗರು ಸಿಗುತ್ತಾರೆ. ಬೆಂಗಳೂರಿಗರಲ್ಲದವರು, ಕನ್ನಡೇತರರಿಗೆ ಆಂಗ್ಲದಲ್ಲಿ ಕೇಳಿದರೆ ಅತೀ ಸುಲಭದ ಉತ್ತರವಾದ ” I don’t know” ಕೇಳಸಿಗುತ್ತದೆ. ಮತ್ತೆ ಕೆಲವರು ಎಫ್ ಎಮ್ ಕೇಳುವಲ್ಲಿ ಲೀನರಾಗಿರುತ್ತಾರಾದ್ದರಿಂದ, ನಮ್ಮ ಪ್ರಶ್ನೆ ಅವರಿಗೆ ಕೇಳಿತೋ ಬಿಟ್ಟಿತೋ, ಅಡ್ಡಡ್ಡ ತಲೆಯ್ಲಲ್ಲಾಡಿಸುತ್ತಾರೆ. ಇನ್ನು ಕನ್ನಡಿಗರು ಸಿಕ್ಕರೂ ಅವರಿಗೆ ವಿಳಾಸ ಗೊತ್ತಿರಲಿ ಬಿಡಲಿ, ನಾವು ಯಾಕೆ ಆ ವಿಳಾಸಕ್ಕೆ ಹೋಗುತ್ತಿದ್ದೇವೆ ಎಂಬ ಕೆಟ್ಟ ಕುತೂಹಲವಂತೂ ಇದ್ದೇ ಇರುತ್ತದೆ. ನಾನು “ಪಾಳು ಬಾವಿ ಎಲ್ಲಿದೆ ಹೇಳ್ತಿರಾ ?” ಎಂದು ಕೇಳಿ, ಅವರು “ನೀವು ಸಾಯಕ್ಕೆ ಹೋಗ್ತಿದೀರಾ ? ಸಾಯಕ್ಕೆ ನಿಮಗೇನ್ ಬಂದಿದೆ ಧಾಡಿ ?” ಎಂದೆಲ್ಲ ಮರುಪ್ರಶ್ನೆಗಳ ಸುರಿಮಳೆಗರೆದು, ನನ್ನನ್ನು ಬಾಯಿ ತೆರೆಯಲೂ ಬಿಡದೆ “ಸಾಯ್ಬೇಡಿ! ಹಾಗೆಲ್ಲಾ ಸಾಯೋ ಯೋಚನೆ ಮಾಡ್ಬಾರ್ದು. ಈಸಬೇಕು ಇದ್ದು ಜೈಸಬೇಕೆಂದು ದಾಸರು ಹೇಳಿಲ್ಲವೇ ? ” ಎಂದೆಲ್ಲಾ ವೇದಾಂತ ಶುರು ಮಾಡುತ್ತಾರೆ. ಇದನ್ನು ಕೇಳುತ್ತಲೇ ಕ್ಷಣ ಮಾತ್ರದಲ್ಲೇ ಜನ ಜಮಾಯಿಸಿ ಎಲ್ಲರೂ ನಾವೇಕೆ ಸಾಯಲು ಹೊರಟಿದ್ದೇವೆ, ಸಾಯಲು ಇರುವ ಕಾರಣ ಸಾಧುವೇ ಅಲ್ಲವೇ ಎಂಬಿತ್ಯಾದಿ ಮಹತ್ವದ ವಿಚಾರಗಳ ಬಗ್ಗೆ ಬೇಡದಿದ್ದರೂ ಚರ್ಚಿಸಿ, ನಮಗೆ ಕೇಳುವ ಇಚ್ಛೆಯಿಲ್ಲದಿದ್ದರೂ ತಮ್ಮ ಇಂಗಿತ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ನಮ್ಮನ್ನು ಇಬ್ಬಂದಿಗೆ ಸಿಕ್ಕಿಸುತ್ತಾರೆ. ಆದ್ದರಿಂದ ಸಾಯಲು ಹೋಗುವಾಗ ನಾವು ಯಾರನ್ನೂ ಮಾತಾಡಿಸದಿದ್ದರೆ ಒಳಿತು. ಆಗ ನಾವು ಹೇಗೆ ಸಾಯಬೇಕು ಎಂಬುದರ ಬಗ್ಗೆ ಮತ್ತಷ್ಟು ಏಕಾಗ್ರತೆಯಿಂದ ಯೋಚನೆ ಮಾಡಬಹುದು.
ಆದ್ದರಿಂದ ನಾನು ಪಾಳು ಬಾವಿಯ ವಿಳಾಸ ಯಾರನ್ನೂ ಕೇಳಬಾರದೆಂದು ನಿರ್ಧರಿಸಿದೆ. ಹೇಗೂ ಮನೆಬಿಟ್ಟಾಗಿದೆ, ಬಾವಿಯನ್ನು ಹುಡುಕಿ ಸತ್ತೇ ಸಾಯಬೇಕೆಂದು ತೀರ್ಮಾನಿಸಿದೆ. ಗಣಪತಿ ಕೈಬಿಟ್ಟರೇನು ? ಅವರಪ್ಪ ಶಿವನಿಲ್ಲವೇ ? ಅವನ ಪಾದ ಸೇರಬೇಕೆಂಬ ನನ್ನ ಉತ್ಕಟವಾದ ಆಕಾಂಕ್ಷೆಯನ್ನು ಶಿವ ನೆರವೇರಿಸಿಯೇ ತೀರುತ್ತಾನೆಂದು ಬಲವಾದ ನಂಬಿಕೆಯಿತ್ತು. ಆ ನಂಬಿಕೆಯಿಂದಲೇ ನಡೆದೂ ನಡೆದೂ ಮುಖ್ಯ ರಸ್ತೆಗೆ ಬಂದು ತಲುಪಿದೆ.
ರಸ್ತೆಯಲ್ಲಿ ಎಲ್ಲಿ ನಿಂತು ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚನೆ ಮಾಡುವುದು ಎಂಬುದು ನನ್ನ ಮುಂದಿನ ಸಮಸ್ಯೆ ಆಯ್ತು. ರಸ್ತೆ ಮಧ್ಯದಲ್ಲಿ ನಿಂತು ಯೋಚನೆ ಮಾಡಲು ನಾನು ಸಿನೆಮ ಹೀರೋ ಅಲ್ಲ. ಫುಟ್ ಪಾತ್ ಎಂಬುದು ಮಹಾನಗರದಲ್ಲಿ ಇನ್ನು ನಾಮಾವಶೇಷ ಮಾತ್ರ, ನಡೆಯಲು ದಾರಿಗೊತ್ತಿಲ್ಲ, ಪಯಣದಲ್ಲಿ ಸಂಗಡಿಗರಿಲ್ಲ. ಇಂತಹ ಬರಗೆಟ್ಟ ಪರಿಸ್ಥಿತಿಯನ್ನು ನಾನು ಹಿಂದೆಂದೂ ಎದುರಿಸಿರಲಿಲ್ಲ. ಇದ್ದಿದ್ದರಲ್ಲಿ ಸೇಫ್ ಜಾಗವೆಂದು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಂತೆ.
ದಾರಿತೋರದೇ ನಾನು ಓದಿದ ಪಾಳು ಬಾವಿ ಆತ್ಮಹತ್ಯಾಕಾಂಡದ ತುಣುಕುಗಳನ್ನು ನೆನಪಿಸಿಕೊಳ್ಳತೊಡಗಿದೆ. “….ಪಾಳು ಬಾವಿಯಲ್ಲಿ ಬಿದ್ದು ಸತ್ತಿದ್ದಾರೆ…..ಸುತ್ತ ಮುತ್ತಲಿನ ಮಾಂಸದಂಗಡಿಯವರ ಕಣ್ಣು ತಪ್ಪಿಸಿ…. “ಎಂದು ನೆನಪಾದೊಡನೇ ನನಗೆ ಪಾಳು ಬಾವಿಯ ದಾರಿ ಹೊಳಿಯಿತು. ದಾರಿಯಲ್ಲಿರುವವರನ್ನು “ಮಾಂಸದಂಗಡಿ ಬೀದಿ ಎಲ್ಲಿದೆ ಹೇಳ್ತಿರಾ” ಎಂದರೆ ಹೆಚ್ಚು ಪ್ರಶ್ನೆ ಕೇಳದೇ ದಾರಿ ತೋರಿಸುತ್ತಾರೆಂದು ಸಂತೋಷಿಸಿ, ಒಬ್ಬರನ್ನು ಕೇಳಿದೆ. ಅವರು ” ಮುಂದೆ ಒಂದು ಬಸ್ ಸ್ಟಾಪ್ ಬರತ್ತೆ…ಅಲ್ಲಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ, ಅದೇ ಬೀದಿ ” ಎಂದರು. ನಾನು ನನ್ನ ಕೃತಜ್ಞತೆಯನ್ನು ನಗೆಯಲ್ಲಿ ಸೂಚಿಸಿ ಮುಂದೆ ನಡೆದೆ.
ಬ್ರಾಹ್ಮಣ ಸಂಪ್ರದಾಯದವರು ನಾವು. ಬೀಟ್ ರೂಟನ್ನೇ ಮಾಂಸದ ಸಮಾನವೆಂದು, ತಿನ್ನಬಾರದೆಂದು ನಮ್ಮ ಅಜ್ಜಿ ತಾತ ಕಟ್ಟಪ್ಪಣೆಗೈದಿದ್ದರು. ನಾನು, ಮನೆಯ ಕುಲಪುತ್ರಿ, ಮಾಂಸದ ಬೀದಿಯಲ್ಲಿ ಎಡಗಾಲಿನ ಉಂಗುಷ್ಟವನ್ನಿಟ್ಟರೂ ಮಾನಸ ಸರೋವರದಲ್ಲಿ ಮುಳುಗಿ ಪಾಪ ತೊಳೆದುಕೊಳ್ಳಬೇಕೆಂದು ಕಟ್ಟಾಜ್ಞೆ ಹೊರಡುತ್ತಿತ್ತು. ನಡೆದುಕೊಂಡೇ ಹೋಗೆನ್ನುತ್ತಿದ್ದರೇನೋ ಹಿರಿಯರು…ಪಾಪ ಸವೆಯಲಿ ಅಂತ. ಮನೆಯವರೇ ನನ್ನ ಕಡೆಗಾಣಿಸಿದಮೇಲೆ ಕಟ್ಟಲೆಗಳ ಕಾಟವೇಕೆ ಎಂದುಕೊಂಡು ಧೈರ್ಯವಾಗಿ ಮಾಂಸದ ಅಂಗಡಿ ಬೀದಿಯಲ್ಲಿ ಬಲಗಾಲಿಟ್ಟೆ.
ಕಾಲಿಟ್ಟ ಕೂಡಲೆ ಮೇಕೆ ಕುರಿಗಳ, ಕೋಳಿಗಳ ಆರ್ತನಾದ ಕೇಳಿಸಿ ಮನಸ್ಸನ್ನು ಕಡೆಗೋಲು ಹಾಕಿ ಕಡೆದಂತಾಯ್ತು. ಕತ್ತೆತ್ತಿ ನೋಡಲು ಧೈರ್ಯವಿಲ್ಲ, ರಕ್ತ ಕಂಡರೆ ಭಯ ಬೇರೆ ! ಅದಕ್ಕೆ ನಾನು ಪ್ರಾಣ ಹೋದರೂ ಡಾಕ್ಟರ್ ಆಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ. ಕತ್ತು ಬಗ್ಗಿಸಿ ನಡೆದರೆ ಜನರಿಗೆ ಅನುಮಾನ ಬಂದು ಅವರು ನನ್ನ ಆತ್ಮಹತ್ಯೆಯ ಪ್ರಯತ್ನಕ್ಕೆ ಭಂಗ ತಂದರೆ ? ಕತ್ತೆತ್ತಿ ನೋಡಿದರೆ ಪ್ರಾಣಿ ಹತ್ಯೆ ಕಂಡು ನನಗೆ ಭಯವಾಗಿ ನಾನು ಕಿಟಾರನೆ ಚೀರುತ್ತೇನೆಂದು ಗೊತ್ತಿತ್ತು. ಕಣ್ಮುಚ್ಚಿ ನಡೆಯುವುದು ಅಸಾಧ್ಯ. ಏನಪ್ಪಾ ಈ ಗತಿ ಬಂತು ನನಗೆ ಅಂತ ನನ್ನನ್ನು ನಾನೇ ಹಳಿದುಕೊಂಡೆ. ಕಡೆಗೆ, ಲೋಕಾಭಿರಾಮವಾಗಿ ಎಲ್ಲೆಡೆ ನೋಡುತ್ತಾ ನಡೆದರೆ ಜನರಿಗೆ ಅನುಮಾನ ಬರುವುದಿಲ್ಲ ಅಂತ ಅನ್ನಿಸಿ, ಸಾಯುವಾಗ ಧೈರ್ಯ ಇರ್ಬೇಕು…ಸಾಯೋ ಪ್ರಾಣಿಗಳನ್ನ ನೋಡಿ ಧೈರ್ಯ ತಗೋಬೇಕೆಂದು ತೀರ್ಮಾನಿಸಿದೆ. ಸ್ಲೋ ಮೋಷನ್ನಲ್ಲಿ ಕತ್ತೆತ್ತುವುದು ಹೇಗೆ ಮಾಡಬೇಕೆಂದು ಜನ ನನ್ನನ್ನ ನೋಡಿ ಕಲಿಯಬೇಕೆಂದೆಸಿತು…ಅಷ್ಟು ನಿಧಾನಕ್ಕೆ ಕತ್ತೆತ್ತಿದೆ.
ಅಷ್ಟೊತ್ತಿಗೆ ಯಾವ್ದೋ ಅಂಗಡಿಯಲ್ಲಿ ಹೆಂಗಸೊಬ್ಬಳು ಕುರಿ ಬೇಕು..ಅಂದಳು. ಅವ ಕುರಿಯನ್ನು ಎಳೆತಂದ. ಅದೇ ಸಮಯದಲ್ಲಿ ರೇಡಿಯೋ ನಲ್ಲಿ “ಕೊಲ್ಲೇ ನನ್ನನ್ನೇ…”ಅಂತ ಶುರುವಾಗಿದ್ದೇ ಅವ ಅತ್ಯುತ್ಸಾಹದಿಂದ ಕುರಿಯ ತಲೆಯನ್ನು ಕಚಕ್ಕನ್ನಿಸಿದ. “ಬ್ಯಾ ಬ್ಯಾ” ಎಂಬ ಆರ್ತ ಧ್ವನಿಯಲ್ಲಿ ಕುರಿ ಅಸು ನೀಗಿತು. ನಾನು ನನ್ನ ಜೀವನದಲ್ಲಿ ಅದೇ ಮೊದಲು ಪ್ರಾಣಿ ಹತ್ಯೆಯನ್ನು ನೋಡಿದ್ದು. ಚೀರಲೂ ಸಹ ನನ್ನಲ್ಲಿ ಶಕ್ತಿಯುಳಿಯಲಿಲ್ಲ..ಅದೆಷ್ಟು ಬೇಗ ಆಗಿಹೋಯ್ತೆಂದರೆ…ನಾನು ಕಣ್ಣನ್ನೂ ಮಿಟುಕಿಸಿರಲಿಲ್ಲ!
ನಾನೇ ಕುರಿಯೆಂಬಂತೆ, ಆ ಮಾತುಗಳೇ ಮಚ್ಚಾಗಿ, ಸಮಾಜವೆಂಬ ಬಲಿಪೀಠದ ಮೇಲೆ ನಮ್ಮ ಮನೆಯವರೇ ನನ್ನನ್ನು ಬಲಿ ಹಾಕುತ್ತಿರುವ ಹಾಗೆ ಭಾಸವಾಯ್ತು ನನಗೆ. ಸತ್ತ ಮೇಲೆ ಎಲ್ಲಾ ಸರಿಹೋಗತ್ತೆ ಅನ್ನಿಸಿತು. ನೋವಾದರು ಅದು ಕ್ಷಣಿಕ, ಶಾಶ್ವತ ಮುಕ್ತಿ ಮುಖ್ಯ ಅನ್ನಿಸಿತು. ಸಾವು ತನ್ನ ತೋಳ್ಬೀಸಿ ನನ್ನನ್ನು ಕರೆದಂತೆ ಆಯ್ತು . ಆ ಕರೆಯಲ್ಲಿ ನನಗೆ ಎಲ್ಲಿಲ್ಲದ ಆತ್ಮೀಯತೆ ಕಂಡುಬಂತು. ಕರೆಗೆ ಓಗೊಟ್ಟು ಬಾವಿಯಲ್ಲಿ ಬಿದ್ದು ಸಾಯಲೇಬೇಕೆಂದು ದಡ ದಡ ಧಾವಿಸಿದೆ. ಆ ಓಟದಲ್ಲಿ ನಾನು ರಸ್ತೆ ಕೊನೆ ತಲುಪಿದೆನೆ ಹೊರತು ಹೊರತು ಬಾವಿ ಕಾಣಲಿಲ್ಲ. ಬಲಕ್ಕೆ ತಿರುಗಲೋ ಏದಕ್ಕೆ ತಿರುಗಲೋ ಎನ್ನುವುದು ನನ್ನ ಮುಂದಿನ ಸಮಸ್ಯೆಯಾಯ್ತು. ಬಲಕ್ಕೆ ನೋಡಿದೆ. ಅಲ್ಲಿ ಜನರ ಸಂಚಾರ ಹೆಚ್ಚಿತ್ತು. ಎಡಕ್ಕೆ ತಿರುಗಿದೆ. ಅಲ್ಲೊಂದು ಮುರಿದು ಬಿದ್ದ ಗೇಟಿತ್ತು. ಪಾಳು ಬಿದ್ದಂತಾ ಜಾಗ, ಮುರುಕಲು ಮನೆ. ಇದೇ ಪಾಳು ಬಾವಿಯ ಜಾಗ ಎಂದು ನನ್ನ ಅತೀಂದ್ರಿಯ ಪ್ರಜ್ಞೆ ಹೇಳಿತು. ಎಲ್ಲೇ ಹೋದರೂ ಮೊದಲು ಬಲಗಾಲಿಟ್ಟು ಹೋಗಬೇಕಾದ್ದರಿಂದ, ಯಶಸ್ವಿಯಾಗಿ ಸಾಯಲು ಇಚ್ಛಿಸಿ ಆ ಪಾಳು ಬಾವಿಯ ಜಾಗಕ್ಕೆ ಬಲಗಾಲಿಟ್ಟೆ.
ಒಳಬಂದು ಆ ಜಾಗವನ್ನು ಸ್ಥೂಲವಾಗಿ ಪರೀಕ್ಷಿಸಿದೆ. ಹುಲ್ಲೆಲ್ಲಾ ಎತ್ತರೆತ್ತರಕ್ಕೆ ಬೆಳೆದಿತ್ತು. ಇನ್ನೂ ಎಂಥೆಂತದೋ ಗಿಡಗಳು. ಹೆಸರು ಹುಡುಕುವ ಗೋಜಿಗೆ ಹೋಗಲಿಲ್ಲ. ಗಿಡದ ಮಧ್ಯ ಹಾವಿದ್ದು, ಅದು ನನ್ನನ್ನೇ ಹುಡುಕಿಕೊಂಡು ಬಂದು ಕಚ್ಚಿ, ಬೇಗ ಪ್ರಾಣ ಹೋಗಲಪ್ಪಾ…ಬದುಕು ನನಗೆ ಸಾಕಾಗಿ ಹೋಗಿದೆ ಎನ್ನಿಸಿತು. ಹುಲ್ಲುಗಳ ಮಧ್ಯವೇ ನಡೆದೆ. ಹಾವಿರಲಿ…ನನ್ನ ಬರಗೆಟ್ಟಾ ಹಣೇಬರಹಕ್ಕೆ ಇರುವೆಯೂ ಕಚ್ಚಲಿಲ್ಲ. ಹುಲ್ಲು ಗಿಡಗಳ ಆಚೆ, ಕಡೆಗೂ ನಾನು ನೋಡಲು ಆಶಿಸುತ್ತಿದ್ದ, ಬೀಳಲು ತವಕಿಸುತ್ತಿದ್ದ ಪಾಳು ಬಾವಿ ಕಾಣಿಸಿತು. ಆದರೆ ಬಾವಿ ಕಟ್ಟೆಯ ಮುಂದೆ ಕಪಾಳಕ್ಕೆ ಹೊಡೆದಂತೆ ಒಂದು ಬೋರ್ಡ್ ಕಾಣಿಸಿತು – ” Closed for renovation”
ಬೋರ್ಡ್ ನೋಡಿದ ತಕ್ಷಣ ನನ್ನ ಜಂಘಾಬಲವೇ ಉಡುಗಿ ಹೋಯಿತು. ನಾನು ಸಾಯುವ ದಿನವೇ ಇವರಿಗೆ ನವೀಕರಣಕ್ಕೆ ಸುಮುಹೂರ್ತವೇ ? ನನ್ನ ಗ್ರಹಚಾರ ಈಮಟ್ಟಿಗೆ ಕೆಟ್ಟಿದೆ ಎಂದು ನಾನು ಖಂಡಿತಾ ಎಣಿಸಿರಲಿಲ್ಲ. ಆ ಕ್ಷಣಕ್ಕೆ ಆತ್ಮಹತ್ಯೆಯ ಬೇರೆ ವಿಧಾನಗಳೂ ತೋಚಲಿಲ್ಲ. ತಲೆ ತಿರುಗಿದ ಹಾಗಾಯ್ತು. ಆದರೂ, ಇಷ್ಟೆಲ್ಲಾ ಕಷ್ಟಪಟ್ಟ ಮೇಲೆ ಸಾಯದಿದ್ದರೆ ನಾನು ಸಾಯಲು ಪಟ್ಟ ಇಚ್ಛೆಗೇ ಅವಮಾನ ಅನ್ನಿಸಿತು.”Break the rules purposefully”ಅನ್ನೋದೂ ಒಂದು ನಿಯಮ. ಇದನ್ನ ಭಾರತೀಯರು ಅತ್ಯಂತ ಶಿಸ್ತಿನಿಂದ ಪಾಲಿಸುತ್ತಾರಾದ್ದರಿಂದ ಅಪ್ಪಟ ಭಾರತೀಯಳಾದ ನಾನು ಇದನ್ನು ಪಾಲಿಸಲು ಇಚ್ಛಿಸಿದೆ. ಬೋರ್ಡನ್ನು ಒಮ್ಮೆ ಅತಿ ತಿರಸ್ಕಾರ ಭಾವದಿಂದ ನೋಡಿ, ಅದನ್ನು ದಾಟಿ ಬಾವಿಕಟ್ಟೆಯ ಬಳಿಗೆ ಬಂದೇಬಿಟ್ಟೆ. ಇನ್ನೇನು ಎಗರಿ ಬೀಳಬೇಕು…..ಅಷ್ಟರಲ್ಲಿ, ” ಬೀಳಬೇಡಿ…ನಿಲ್ಲಿ !!!!!” ಅಂತ ಕೂಗಿದರು ಯಾರೋ. ನಾನು ಆ ಕೂಗನ್ನೂ ಸಹ ಕಡೆಗಾಣಿಸಿ ಎಗರಲು ಮುಂದೆ ವಾಲಿದೆ.
[ಮುಂದುವರೆಯುವುದು]
ಲಲಿತ ಪ್ರಬಂಧ ಹೆಸರಿಗೆ ಧಕ್ಕೆಯಾಗದ ಹಾಗೆ ಸಾಗಿದೆ ಬರವಣಿಗೆ. ಇದು ಮೊದಲ ಪ್ರಯತ್ನ ಎಂದು ಪ್ರಾರಂಭದಲ್ಲಿ ಸ್ವಲ್ಪ ಅನ್ನಿಸಿದರೂ ನಿರರ್ಗಳವಾಗಿ ಓದಿಸಿಕೊಂಡು ಹೋಯಿತು. ಅನೇಕ ಭಾಗಗಳಲ್ಲಿ ಉಕ್ಕುಕ್ಕಿ ನಗೆ ಬಂದಿತು. ಪ್ರಬಂಧ ಎಲ್ಲಿಯೂ drag ಮಾಡಿದ ಹಾಗೆ ಅನ್ನಿಸಲಿಲ್ಲ. ಕುರಿಯ ಕತ್ತು ಕಚಕ್ ಎಂದು ಕತ್ತರಿಸಿದಾಗ ಆತ್ಮಹತ್ಯೆಯ ನಶೆ ಇಳಿಯಿತೇನೋ ಅಂದುಕೊಂಡೆ.!! ಬಹಳ ಇಷ್ಟವಾದದ್ದು ’…ಗಣಪತಿ ಇಲ್ಲದಿದ್ದರೆ ಅವರಪ್ಪ ಶಿವ ಇಲ್ಲವೇ ’ ..” ಹಾವಿರಲಿ ಇರುವೆಯೂ ಕಚ್ಚಲಿಲ್ಲ ’ ಇಂತಹ ಇನ್ನೂ ಅನೇಕ ಭಾಗಗಳು
ಮುಂದಿನ ಭಾಗಕ್ಕೆ ಕುತೂಹಲದಿಂದ ಕಾಯುತ್ತಿದ್ದೇನೆ.
ಪ್ರತಿಕ್ರಿಯೆ by ಚಂದ್ರಕಾಂತ — ಜನವರಿ 18, 2009 @ 5:38 ಅಪರಾಹ್ನ |
ಅಯ್ಯೋ ಶಿವನೇ “ಆತ್ಮಹತ್ಯೆ” ಟೈಂ ಪಾಸ್ ಬರಹವಾ?
ಒಳ್ಳೆ ಗಟ್ಟಿ ಗುಂಡಿಗೆಯವ್ರು ನೀವು
-ಶೆಟ್ಟರು
ಪ್ರತಿಕ್ರಿಯೆ by ಶೆಟ್ಟರು (Shettaru) — ಜನವರಿ 19, 2009 @ 1:47 ಅಪರಾಹ್ನ |
ಸಾಯೋದು ಇಷ್ಟು ಕಷ್ಟ ಅಂತ ನಿಮ್ಮ ಈ ಬರಹ ನೋಡಿದ್ಮೇಲೆ ಗೊತ್ತಾಯ್ತ.. ಮುಂದುವರೆಸಿ 🙂
ಪ್ರತಿಕ್ರಿಯೆ by M G Harish — ಜನವರಿ 21, 2009 @ 12:22 ಅಪರಾಹ್ನ |
ಹಹ್! ಸಿಕ್ಕಾಪಟ್ಟೆ ಟೆನ್ಷನ್ ಕ್ರಿಯೇಟ್ ಮಾಡಿ ಇಲ್ಲಿಗೆ ನಿಲ್ಸೋದಾ?
ಚನಾಗ್ ಬರ್ದಿದೀರ.. ಆದ್ರೆ ಕಥೆ ಥರಾ ಓದಿಸಿಕೊಳ್ತಿದೆ.. ಲಲಿತ ಪ್ರಬಂಧದ ಹಾಗಿಲ್ಲ. ಮುಂದೇನಾಗತ್ತೇಂತ ಕಾಯೋದ್ರಲ್ಲಿ ನಾನು ’ಕುತೂಹಲಿ’. 😉
ಪ್ರತಿಕ್ರಿಯೆ by ಸುಶ್ರುತ ದೊಡ್ಡೇರಿ — ಜನವರಿ 21, 2009 @ 6:44 ಅಪರಾಹ್ನ |
ಏನಮ್ಮ ಇದು ?
ಬಾವಿ Close ಇದೆಯಾ ಪರವಾಗಿಲ್ಲ ನಂದಿ ಬೆಟ್ಟಕ್ಕೆ ಹೋಗ ಬಹುದು. ನಾನೂ ಜೊತೆಗೆ ಬರುತೀನಿ ತಳ್ಳೋಕೆ ಆದರೆ
“ಸತ್ತು ಸಾಧಿಸುವುದೇನು? ಇದ್ದು ಬಾಳಿದರೆ ಜೇನು” ಅನ್ನೋ ಅಗ್ರಜ ನುಡಿ ನೆನಪಿಟ್ಟಿಕೋ..ಮನಸ್ಸು ಬದಲಾಯಿಸಿಕೊ.
ಒಂದು ತಿಂಗಳಾಗುತ್ತಾ ಬಂತಲ್ಲಮ್ಮ ಮುಂದುವರಿಸು.
ಪ್ರತಿಕ್ರಿಯೆ by ಅಂತರ್ವಾಣಿ — ಫೆಬ್ರವರಿ 14, 2009 @ 8:50 ಅಪರಾಹ್ನ |
:),, ಅಪ್ಪ ಅಮ್ಮನಿಂದ ಒಂದು ನಾಲ್ಕು ವರ್ಷ ದೂರ ಇದ್ರೆ ಇಂತಾ ಯೋಚನೆ ಎಲ್ಲಾ ಬರೋಲ್ಲ! ಚೆನ್ನಾಗಿದೆ ನಿಂ ಲಲಿತ ಪ್ರಬಂಧ..
ಪ್ರತಿಕ್ರಿಯೆ by palachandra — ಫೆಬ್ರವರಿ 18, 2009 @ 5:32 ಅಪರಾಹ್ನ |
ಅರೆರೆ…, ಇದೇನಿದು… ನನ್ನ ಬ್ಲಾಗಿಗೆ ಬಂದು ಇದನ್ನು ನೋಡಿ ಅಂತ ಲಿಂಕಿಸಿದನ್ನು ನೋಡಿ ಇಲ್ಲಿ ಬಂದರೆ…..
ನೀವೇನು ಹೀಗೆ ಅತ್ಮಹತ್ಯೆಯ ಅನುಭವ[ನಿಜವೋ ಸುಳ್ಳೋ ಗೊತ್ತಿಲ್ಲ..ಅದ್ರೆ ಬರಹ ಚೆನ್ನಾಗಿದೆ.]ಓದಿಸೋದ ?…..ಇರಲಿ ನೋಡೋಣ…ಬದುಕಿದ್ದೀರಲ್ಲ….ಮುಂದಿನ ಭಾಗಕ್ಕಾಗಿ ಕಾಯುತ್ತೇನೆ…..
ಪ್ರತಿಕ್ರಿಯೆ by shivu.k — ಫೆಬ್ರವರಿ 25, 2009 @ 11:07 ಫೂರ್ವಾಹ್ನ |
its very interesting your way of writing is very good how the small things looking very bigger it shows in this novel
ಪ್ರತಿಕ್ರಿಯೆ by venkatesha — ಏಪ್ರಿಲ್ 8, 2009 @ 3:44 ಅಪರಾಹ್ನ |