ಹೀಗೊಂದು ಮಾತಿದೆಯಂತೆ
ಲೋಕದಲ್ಲಿ ಚಂದ್ರನನ್ನು
ಕಾತರದಿ ನೋಡುವವರು
ಇಬ್ಬರೇ ಇಬ್ಬರಂತೆ;
ಒಬ್ಬ ಕವಿಯಂತೆ,
ಇನ್ನೊಬ್ಬ ಪ್ರೇಮಿಯಂತೆ !
ಕವಿಯು ಪ್ರೇಮಕವಿತೆ
ನಿನ್ನ ನೋಡಿ ಬರೆದರೆ
ಪ್ರೇಮಿ ನಿನ್ನ ನೋಡಿ
ತಾ ಕವಿಯಾಗುವನಂತೆ !
ಅಮಾವಾಸ್ಯೆಯನ್ನ ಇಬ್ಬರೂ
ವಿಪರೀತ ಬೈವರಂತೆ !!
ನಿನ್ನ ನೋಡಿ ಕಲಿಯಬೇಕು
ಅಂತ ಕವಿ ಅಂದನಂತೆ
ಕುಗ್ಗಿ ಹಿಗ್ಗಿ ಬದುಕೇ ಇದೆಂದು
ನೀನೆ ಅವನಿಗೆ ಹೇಳಿದೆಯಂತೆ !
ನೀನಿಲ್ಲದೇ ಅವನ ಕಾವ್ಯ
ಪೂರ್ಣವೇ ಅಲ್ಲವಂತೆ !
ಪ್ರೇಮಿ ನಿನ್ನ ಋಣಿಯಂತೆ
ಪ್ರೇಯಸಿಗೆ ತನ್ನ ದೂತನಾಗಿ
ಬೇರಾರೂ ಸಲ್ಲರಂತೆ
ಮೌನವನ್ನೇ ಮಾತಾಗಿಸುವ
ಕಲೆಯದು ನಿನಗಿಂತ
ಬೇರಾರಿಗೂ ಚೆನ್ನಾಗಿ ಒಲಿದಿಲ್ಲವಂತೆ !
ನಿನಗೆ ಶಾಪಸಿಕ್ಕಿದ್ದು ಪಾಪವಂತೆ
ನೀನು ಲೋಕಕ್ಕೆ ದೀಪವಂತೆ
ನಿನ್ನ ನೋಡೆ ಮನದ ತಾಪ
ಮಾತಾಡದೇ ಕಥೆಯಿಲ್ಲದೇ
ಸುಮ್ಮನೆ ತಾನಿಳಿವುದಂತೆ !