ಮಾನಸ ಗಂಗೋತ್ರಿಯ ಮುಗ್ಧ ಮಾನಿನಿ ನಾನು
ಕೈಲಾಸದ ಕಮನೀಯನ ಕೈಹಿಡಿಯ ಬಯಸಿದೆನು
ಶಿವಗಂಗೆಯರ ಮಿಲನ ಲೋಕಕೇಕೆ ರುಚಿಸದು ?
ಜಹ್ನುವಂಥ ಕಾಲ ನಮ್ಮನೇಕೆ ಸೇರಗೊಡದು ?
ಆದರೂ ಜಾಹ್ನವಿಯಾಗಿ ಹೊರಬಂದೆ ನಾನು
ಮಂದಾಕಿನಿಯಾಗಿ ನಿನ್ನ ಸೇರೆ ಹವಣಿಸಿದೆನು
ಅಲಕೆ ನೀನಳುಕದಿದಿರೆಂದು ನೀ ಕೇದಾರದಲ್ಲಿ ನಿಂತೆ
ನಾ ಬರುವ ವೇಳೆಗೆ ನೀ ಕಲ್ಲಾದೆಯಂತೆ ?
ಹತಾಶ ವಿಪಾಶೆ ನಾ ಭಾಗೀರಥಿಯಾದೆ
ನಿನ್ನ ಹೇಗಾದರೂ ಸೇರಿಯೇ ತೀರುವೆನೆಂದೆ
ಸಾಗರದಾಚೆ ಅರಸಿದೆ, ಧರೆಯೆಲ್ಲಾ ಅಲೆದೆ
ಸುಂದರವನವ ನಿರ್ಮಿಸಿ ನಿನಗಾಗಿ ನಾ ಕಾದೆ
ನೋಡಲೆಂದು ನೀನನ್ನ ದುಃಖ ಹರಿಯು ದ್ವಾರ ತೆಗೆದನು
ತನ್ನ ಗೆಳತಿ ಅತ್ತಳೆಂದು ಯಮುನೆ ಕಪ್ಪಗಾದಳು
ಕೋಪದಿಂದ ಸರಸ್ವತಿ ತಾನೂ ಕೆಂಪಗಾದಳು
ಗುಪ್ತವಾಗಿ ನಿನ್ನವಳು ಪಾಪ ಹುಡುಕಹೊರಟಳು !
ಆಗದೆಂದೇ ಬಗೆದೆ ನಾ ನಮ್ಮಿಬ್ಬರ ಸಮಾಗಮ
ಲೋಕಕೆಲ್ಲಿ ತಿಳಿಯುವುದು ನಿಷ್ಕಾಮ ಪ್ರೇಮ
ಕಡೆಗೊಂದು ದಿನ ಬಿತ್ತೆನ್ನಮೇಲೆ ಪುಟ್ಟದೊಂದು ಹನಿ
ಹೇಳಿತದು ನನಗೆ ನಿನ್ನ ಮನದಾಳದ ಧ್ವನಿ
ನೀ ಬರುವೆಯಂತೆ ಹೀಗೆಯೇ ಮಳೆಯ ಹನಿಯಾಗಿ
ನೊಂದ ನನ್ನೀಮನಕೆ ಸಾಂತ್ವನದ ನುಡಿಯಾಗಿ
ಶ್ರಾವಣದ ಮೂದಲ ದಿನ ಬಂದೆ ನೀ ಮಳೆಯಾಗಿ
ನಿಂತಿತೆಮ್ಮ ಮಿಲನಕೆ ಇಳೆಬಾನು ಸಾಕ್ಷಿಯಾಗಿ