ಟೈಂ ಪಾಸ್ ಬರಹಗಳು

October 10, 2008

ಟೆರೇಸು

Filed under: kavana — saagari @ 11:17 pm

ಕಾಂಕ್ರೀಟು ಕಾಡಿನಲ್ಲಿ ಜೀವನ ಸಾಕಾಗಿ

ಹೊರಹೋಗಲೂ ಆಗದೆ ಕಟ್ಟಿ ಹಾಕಿದಂತಾಗಿ

ಮನಸ್ಸು ಚಿಂತೆಯಲ್ಲಿ ಚಿತೆಯಾಗಿರುವಾಗ

ಟೆರೇಸೇ ನಮ್ಮ  ಏಕಾಂತದ ಜಾಗ

ನೆನಪಿನ ದೋಣಿಗೆ ಅಂಬಿಗ ಟೆರೇಸು

ಹುಟ್ಟು ಹಾಕುವುದರಲ್ಲಿ ಸ್ಪೀಡ್ ಪೇಸು

ಒಬ್ಬನೇ ಪಯಣಿಗನಿದ್ದರೆ ಲೇಸು

ಕೊಡಬೇಕಿಲ್ಲ ಇದಕ್ಕೆ ಯಾವುದೇ ಫೀಸು !

ವ್ಯಾಯಾಮವಿರಲಿ ಬೆಳದಿಂಗಳೂಟವಿರಲಿ

ಸಂಡಿಗೆಗಳ ಮಾಡಿ ಒಣಗಿಸಲಿಕ್ಕಾಗಲಿ

ಮನೆಯಲ್ಲಿ ಶುಭಕಾರ್ಯ ಯಾವುದೇ ಬರಲಿ

ಟೆರೇಸಿಗಿಂತ ಪ್ರಶಸ್ತ ಜಾಗ ಬೇಕೇ ಹೇಳಿ ?

ಈಗೀಗ ಹೆಚ್ಚುತ್ತಿದೆ ಅಪಾರ್ಟ್ಮೆಂಟ್ ಅಬ್ಬರ

ಕಡಿಮೆಯಾಗುತ್ತಿದೆ ಟೆರೇಸಿನ ಮರ್ಮರ

ಟೆರೇಸಲ್ಲಿ ನಿಂತು ಚಂದ್ರನ ನೋಡದವರ

ಜೀವನ ನಿಜವಾಗಿಯೂ ಮಹಾದುಸ್ತರ.

ಈ ಕವನ ಬರೆಯಲು ಒಂದು ಕಾರಣ ಇದೆ. ನಮ್ಮ ಮನೆಯ ಇಕ್ಕೆಲಗಳಲ್ಲೂ ನಾಲ್ಕು ನಾಲ್ಕು ಅಂತಸ್ತಿನ ಮನೆಗಳು ಬಂದು ನನಗೆ ಸೂರ್ಯ ಚಂದ್ರರನ್ನೂ ನೋಡದ ಹಾಗಾಗಿದೆ. ಕೋಲು ಬಿಸಿಲೂ ಕಾಣದಾಗಿದೆ. ನಮ್ಮ ಮನೆಯ ಟೆರೇಸು ನನ್ನ favourite  ಜಾಗ. ಈಗ ಅಲ್ಲಿ ಹೋಗದ ಹಾಗೆ ಆಗೋಗಿದೆ. ಹೋದರೆ ಮನೆಗಳಲ್ಲಿ, ವಟ ವಟಾ..ಡಬ ಡಬ ಶಬ್ದ…ಶಾಂತಿಯೇ ಇಲ್ಲ !! ನನ್ನ ಆಲೋಚನೆ, ಆತ್ಮಾವಲೋಕನಕ್ಕೆ ಇದ್ದ ಏಕೈಕ ಜಾಗವನ್ನು ನನ್ನಿಂದ ಕಿತ್ತುಕೊಂಡ hopeless  ನಗರೀಕರಣದ ಬಗ್ಗೆ ನನಗೆ ಜಿಗುಪ್ಸೆ ಬಂದಿದೆ. ಅದಕ್ಕೆ ಇದನ್ನ ಬರ್ದಿದಿನಿ.

September 27, 2008

ವೃದ್ಧಾಪ್ಯ

Filed under: kavana — saagari @ 11:02 pm

ದಿನಕಳೆದಂತೆ ಅನಿಸುತಿದೆ ತಾಯಿಗೆ

ತನಗೀಗ ವಯಸ್ಸಾಗಿದೆ.

ದಿನಕಳೆದಂತೆ ಅನಿಸುತಿದೆ ತಂದೆಗೆ

ಈ ಬದುಕು ಸಾಕಾಗಿದೆ. (more…)

August 28, 2008

ಮಗಳು ಬೆಳೆದುಬಿಟ್ಟಳಲ್ಲಾ !

Filed under: kavana — saagari @ 11:04 pm

ಅಪ್ಪ ಗಾಣದ  ಎತ್ತು ಅಮ್ಮ ಅಡುಗೆಮನೆಯರಸಿ

ಇಬ್ಬರ ಯಾತನೆ ನೋಡಲಾಗುವುದಿಲ್ಲ

ನಾಟಕ ಸಿನೆಮಾ ಲೋಲಾಕು ಬುಲಾಕುಗಳಿಗೆ

ಕಾಸು ಕೇಳಲು ಬಾಯೇ ಬರುವುದಿಲ್ಲ

ಓದು ಮುಗಿದಿದೆ ಮನೆಯಲ್ಲಿ ಸುಮ್ಮನಿರು ಎಂದರೂ

ನನಗೆ ಮನೆಯಲ್ಲಿರಲು ಇಛ್ಛೆಯಿಲ್ಲ

ಕೆಲಸಕ್ಕೆ ಸೇರುವೆನೆಂದು  ಸಾರಿ ಸಾರಿ ಹೇಳಿದರು

ಅವರನ್ನುವರು- ನಿನೆಮ್ಮಸಾಕಬೇಕಿಲ್ಲ

ವಯಸ್ಸಾಗುತಿದೆ ನಮಗೆ ಇವಳ ದಡ ಸೇರಿಸಬೇಕು

ಎನ್ನುವ ಚಿಂತೆ ಇವರ ಬಿಟ್ಟಿಲ್ಲ

ಸ್ವಲ್ಪ ವರ್ಷ ತಾಳಿ ಏನವಸರ ಮದುವೆಗೆಂದರೂ

ಇವರು ಕೇಳುವ ಹಾಗೆ ಕಾಣೊಲ್ಲ

ಭೀಮನ ಅಮಾವಾಸ್ಯೆ ಲಕ್ಷ್ಮೀ ಗೌರಿ ಗಣಪತಿಗೆ

ಆದ ಖರ್ಚು ಕಮ್ಮಿಯೇನು ಅಲ್ಲ

ಹಬ್ಬವೊಂದಕ್ಕೆ  ಬಟ್ಟೆ ಕೊಡಿಸದಿರೆ ಹಲುಬುವಳು ತಂಗಿ

ನನಗೇಕೆ ದುಡಿವ ಅಣ್ಣನಿಲ್ಲ ?

ನನಗಾಗಿ  ದುಡಿವೆ  ನಿಮಗೆ ಹೊರೆಯಾಗಲಾರೆ

ಇಷ್ಟು ವರ್ಷ ಸಾಕಿದ್ದೀರಲ್ಲ

ಹೀಗೆನ್ನಲು ನಾನು ಉದ್ಗರಿಸುವರು  ಅವರು

ಮಗಳು ಬೆಳೆದುಬಿಟ್ಟಳಲ್ಲಾ !

August 22, 2008

ಮೌನ

Filed under: kavana — saagari @ 11:00 am

ನೋಡದಾಗ ಮಾತಾಡಿದ್ದೆಷ್ಟು ಆಸೆ ಕನಸು ಹೆಣೆದಿದ್ದೆಷ್ಟು
ಕಣ್ಮುಂದೆ ಬಂದಾಗ ನೀನು ಅದೇಕೋ ನೀರವ ಮೌನ
ಸಖರು ನಾವಿಬ್ಬರೂ ನೋವು ನಲಿವ ಸಹಭಾಗಿಗಳು
ಹೇಗಿದ್ದೀಯಾ ಎಂದಿಂದು ಕೇಳಲೂ ಬಿಡದೀ ಮೌನ

ವರನೊಬ್ಬನ ಹುಡುಕಾಟದಲ್ಲಿ ಮನೆಯವರು ಇರುವಾಗ
ನಾನಾಗಲೆಂದೆನ್ನ ನೀನು ಕೇಳಲೇಕೆ ಬಿಡದು ಮೌನ ?
ನೀನೆನ್ನ ಆಪ್ತ ಗೆಳೆಯ ಎಂದು ನಾನು ಅಂದಾಗ
ಹೌದೆನ್ನುವ ಬದಲು ನೀನೇಕೆ ವಹಿಸಿದೆ ಮೌನ ?

ಯಾರೆಂದರು ನಾರಿಮನವ ಅರಿಯಲಾಗದು
ಶುದ್ಧ ಸುಳ್ಳದು ಎಂದು ಹೇಳುವೆ ನಾನಿಂದು
ನಿನ್ನ ಮೌನದ ಭಾಷೆ ನನಗೆ ಅರ್ಥವಾಗದು
ಮೌನವನರ್ಥೈಸುವ ಸಾಹಸ ಬಹು ದೊಡ್ಡದು

ಕಾಣುತಿದೆ ನಿನ್ನ ಕಂಗಳಲ್ಲಿ ಕಾಂತಿಯೊಂದು ಹೊಸ ಥರ
ಅದನೋಡಿದೆನ್ನ ಮನ ನಡುಗುತಿದೆ ಥರ ಥರ
ಕಾಯಿಸುತಿರುವೆ ನೀನು ಇಂದು ಅದೇಕೆ ಈ ಥರ
ಕಾಡಿಸದಿರು ನೀ ಹಾಡಿ ಹೇಳಲೊಂಥರಾ ಥರಾ !

ನನಗೆ ಒಬ್ಬರು ಚಾಲೆಂಜ್ ಮಾಡಿದ್ದರು..ನೀನು ಜನ್ಮದಲ್ಲಿ ಸೈಲೆಂಟಾಗಿರಕ್ಕಾಗಲ್ಲ, ಮತ್ತೆ silence ಬಗ್ಗೆ ಕವನ ನ ಬರ್ಯಕ್ಕೂ ಆಗಲ್ಲ ಅಂತ ! ಆದ್ದರಿಂದ ನಾನು silent ಆಗಿರೋದನ್ನ practice ಮಾಡ್ತಾ , one of the dimensions of silence ನ concept ಆಗಿ ಇಟ್ಕೊಂಡು ಕವನ ಬರ್ದಿದಿನಿ…
ಟೈಮ್ ಪಾಸಿಗಷ್ಟೆ…ನಿಜ ಅಂತೆಲ್ಲ ಅಂದುಕೋಬೇಡಿ ಯಾರು !

August 11, 2008

ಟೈಟಲ್ಲು ತೋಚದ ಕವನ !

Filed under: kavana — saagari @ 5:02 pm

15-04-2006 ರಂದು ಬರೆದ ಕವನ ಇದು. ಇವತ್ತು ಸಿಕ್ಕಿತು. ಸಿಕ್ಕಾ ಪಟ್ಟೆ editing ಮಾಡಿ ಇದನ್ನ ಇಲ್ಲಿ ಹಾಕಿದಿನಿ. once again, time pass ಗೆ ! ಎಂಥಾ ದೊಡ್ಡ ಮನುಷ್ಯಳೆಂದರೆ ನಾನು….ಕವನಕ್ಕೆ ಟೈಟಲ್ಲೇ ಬರ್ದಿರ್ಲಿಲ್ಲ…ಈಗ ಎಷ್ಟು ತೋಚಿದರೂ ಒಂದು ಟೈಟಾಲ್ಲೂ ಹೊಳೀತಿಲ್ಲ. ಯಾರಾದರೂ ಒಂದು ಒಳ್ಳೆ ಟೈಟಲ್ಲು ಸಜ್ಜೆಸ್ಟ್ ಮಾಡಿ ಪುಣ್ಯ ಕಟ್ಟಿಕೊಳ್ಳಿ !

ನಾ ಆವಿಯಂತೆ ಮೇಲೇರಿದೆ, ಬಾನಾಗಿ ನೀನೆನ್ನ ಪೊರೆದೆ
ನಾ ದಿಕ್ಕುದಿಕ್ಕಲ್ಲಿ ಓಡಿದೆ, ನನ್ನ ಸ್ವೇಚ್ಛೆಗೆ ನೀ ತಡೆಯೊಡ್ಡದೆ ಇದ್ದೆ.
ನನ್ನ ಆರ್ಭಟದಿಂದಾಯ್ತು ಧರಣಿದೇವಿಗೆ ದಿಗಿಲು
ಎಲ್ಲಿ ಕೊಚ್ಚಿ ಹೋಗುವವೋ ಅವಳ ಕಂದಮ್ಮಗಳು

ನನ್ನ ಪ್ರತಾಪ ಹೆಚ್ಚುತ್ತಿದ್ದರೂ ನೀ ಸುಮ್ಮನಿದ್ದೆ
ಏರಲು ನನ್ನಟ್ಟಹಾಸ ನೀನೊಮ್ಮೆ ಗುಡುಗಿದ್ದೆ
ನಿನ್ನ ಮುನಿಸ ನೋಡಿ ಸರಿಹೋಗಲಿಲ್ಲ ನಾನು
ಗರ್ವದಲ್ಲಿ ನನ್ನಾಯುಷ್ಯವ ಮರೆತುಬಿಟ್ಟೆ ನಾನು

ಏರುತ್ತ ಮೇಲೆ ಮರೆಯುತ್ತ ಎಲ್ಲರನು
ಏಣಿಯ ಹತ್ತುತ್ತಾ ಮರೆಯುತ್ತ ಕಾಲ್ಗಳನು
ಆಸೆ ಅಪರಿಮಿತ ಅಹಂಕರವು ತಾನಗಾಧ
ಅಂತ್ಯಗೊಳಿಸಿಬಿಡುತ್ತದೆ ಕಾಲವೆಂಬ ಆಯುಧ

ಕುಗ್ಗಲು ನನ್ನ ಯೌವ್ವನ ಕಪ್ಪಗಾದೆ ನಾನು
ಮಿಂಚಿನ ನಿನ್ನ ನಗೆಯಿಂದ ಎದೆಯ ಚುಚ್ಚಿದೆ ನೀನು
ಮೇಲೇರಿದರೇನು ಕೆಳಗಿಳಿಯುವುದೆಂದೆ ನೀನು
ಅಳಿಸಿ ನನ್ನಹಂಕಾರವ ಪಾಠ ಕಲಿಸಿದೆ ನೀನು

ಓ ಅನಂತವೇ ಕೊಡು ಎನಗೆ ಶಕ್ತಿ
ನನ್ನ ಹತೋಟಿಯಲ್ಲಿರಲಿ ನನ್ನ ಯುಕ್ತಿ
ಇರಲೆಂದಿಗೂ ಸದಾ ನಿನ್ನಲ್ಲಿ ಅಚಲ ಭಕ್ತಿ
ಅಳಿಸೆನ್ನ ಅಹಂಕಾರವ, ಸಿಗಲಿ ಎನಗೆ ಮುಕ್ತಿ !

July 31, 2008

ಅಳಲು

Filed under: kavana — saagari @ 7:48 am

ಹಿಂದೆ ಯಾವತ್ತೋ ಬರೆದಿದ್ದ ಕವನ. ಇವತ್ತು ಕೈಗೆ ಸಿಕ್ಕಿತು…ಇಲ್ಲಿ ಹಾಕ್ತಿದ್ದೇನೆ..timepass ಗೆ !

ಅಳಲು
_________________________________________

ಸಾಗರವದೇನು ಅಲೆಯಿಲ್ಲದಿರಲು ?
ಕ್ಷೀರವದೇನು ಕೆನೆಯಿಲ್ಲದಿರಲು ?
ಆಗಸವದೇನು ರವಿ ಇಲ್ಲದಿರಲು ?
ನನ್ನ ಬಾಳದೇನು ನೀನಿಲ್ಲದಿರಲು ?

ದೇಗುಲವದೇನು ದೇವನಿಲ್ಲದಿರಲು ?
ದೀಪವದೇನು ತೈಲವಿಲ್ಲದಿರಲು ?
ದೇಹವದೇನು ಉಸಿರಿಲ್ಲದಿರಲು ?
ನನ್ನ ಮನಸದೇನು ನೀನಲ್ಲಿಲ್ಲದಿರಲು ?

ನಿನಗಾಗಿ ಕಾದಿರುವೆ ಹಗಲಿರುಳು
ನಾನು ನಾನಲ್ಲ ನೀನಿಲ್ಲದಿರಲು
ನಾನು ಉಳಿಯೊಲ್ಲ ನೀ ಬಾರದಿರಲು
ಇನ್ನಾದರೂ ಕೇಳು ನೀ ನನ್ನೀ ಅಳಲು !

July 15, 2008

ನಾಯಿ, ದೇವಲೋಕ, ಮತ್ತು ಆ ಗಾದೆ

Filed under: lalita prabandha — saagari @ 5:53 pm
ನಾನು ಎಮ್. ಎಸ್ಸಿ ಮುಗಿಸಿದ ಮೇಲೆ ಮನೆಯಲ್ಲಿ ಇರಲೇಬೇಕೆಂದು ಅಪ್ಪ ಅಮ್ಮನ strict order ಆದಮೇಲಂತೂ ನನಗೆ ಅಡಿಗೆ, ಬ್ಲಾಗಿಂಗ್ ಬಿಟ್ಟರೆ ಬೇರೇನು ಕೆಲಸವೇ ಇಲ್ಲ. ಟೈಮ್ ಪಾಸಿಗೆಂದೇ ಒಂದು ಬ್ಲಾಗ್ ಪ್ರಾರಂಭಿಸಿ ಅನ್ನಿಸಿದ ಕಥೆ ಕವನವನ್ನೆಲ್ಲಾ ಗೀಚಲು ಆರಂಭಿಸಿದ್ದೇನೆ ಎಂದಮೇಲೆ ನಾನೆಷ್ಟು ಆರಾಮಾಗಿದ್ದೇನೆ ಎಂದು ನಿಮ್ಮೆಲ್ಲರಿಗೂ ಗೊತ್ತಾಗತ್ತೆ.

ಮೊನ್ನೆ ಮದ್ಯಾಹ್ನ ಮನೆ ಗೇಟಿನ ಮುಂದೆ ಬಂದು ನಿಂತೆ. ಏನೂ ವಿಶೇಷವಿರಲಿಲ್ಲ, ಸುಮ್ಮನೇ ಟೈಮ್ ಪಾಸಿಗೆ. ಕರೆಂಟಿರಲಿಲ್ಲ, ಕಂಪ್ಯುಟರ್ ಗೆ ಬ್ರೇಕ್ ಸಿಕ್ಕಿತ್ತು ನನ್ನಿಂದ. ಅಪರಾಹ್ನ ಮೂರು ಘಂಟೆಗೆ ನಮ್ಮ ರಸ್ತೆ ಹೇಗೆ ಕಾಣತ್ತೆ ಅನ್ನೋ ಒಂದು ಕಲ್ಪನೆ ನನಗೆ ಇಷ್ಟು ವರ್ಷಗಳಿಂದ ಇರಲಿಲ್ಲ. ಅದನ್ನು ಪ್ರತ್ಯಕ್ಷ ನೋಡಲು ಮೊನ್ನೆ ಇದ್ದಕ್ಕಿದ್ದ ಹಾಗೇ ಅನ್ನಿಸಿತು…ಅನ್ನಿಸಿದ್ದನ್ನು ಮಾಡಬೇಕೆಂಬುದು ನನ್ನ ಪಾಲಿಸಿ.

ಪಕ್ಕದ ಮನೆಯವರು ಅವರ ಮನೆ ಮೇಲೆ ಇನ್ನೊಂದು ಮನೆ ಕಟ್ಟಿಸುತ್ತಿದ್ದಾರೆ…ಅದರ ಧೂಳು, ಇಟ್ಟಿಗೆ, ಮರಳು ರಸ್ತೆಯನ್ನು ವ್ಯಾಪಿಸಿ ಒಂಥರಾ ಮಬ್ಬುಗೊಳಿಸಿತ್ತು. ಬೆಂಗಳೂರಿನ ನಾಗರಿಕರ ಗುಣಲಕ್ಷಣವನ್ನು ಎತ್ತಿ ತೋರಿಸುವಂತೆ, ಎಲ್ಲರ ಮನೆಯ ಬಾಗಿಲುಗಳೂ ಬಿಗಿಯಾಗಿಯೇ ಜಡಿದಿದ್ದವು. ಮರಗಳು ಆಷಾಢದ ಗಾಳಿಗೆ ಓಲಾಡುತ್ತಿದ್ದವು. ಇವೆಲ್ಲದರ ಮಧ್ಯೆ ನಾನು ಕಿಂಕರ್ತವ್ಯಮೂಢಳಾಗಿ ಗೇಟಿನ ಮುಂದೆ ರಸ್ತೆಯನ್ನು ದಿಟ್ಟಿಸುತ್ತಾ ನಿಂತಿದ್ದೆ.

ನಮ್ಮ ಬೀದಿಯಲ್ಲಿ ಎರಡು ನಾಯಿಗಳಿವೆ. ಒಂದರ ಹೆಸರು ಟಿಪ್ಪು. ಇನ್ನೊಂದರ ಹೆಸರು ವಿವಾದದಲ್ಲಿ ಸಿಲುಕಿರುವಾಗಲೇ ಆ ನಾಯಿ ಶಿವನ ಪಾದ ಸೇರಿತೆಂದು ವರದಿ ಬಂದಿತು. ಅದಕ್ಕೆ ರೋಹಿಣಿ ಮತ್ತು ಟೋನಿ ಎಂಬ ಎರಡು ಹೆಸರಿದ್ದವು. ಆದರೆ ಅದರ ಹೆಸರು ಯಾವುದೆಂದು ಯಾರೂ ನಿರ್ಧರಿಸಲು ಆಗಿಲ್ಲವಾದ್ದರಿಂದ ನಾನು ಅವೆರಡೂ ಹೆಸರನ್ನು ಸೇರಿಸಿ ಟೋಹಿನಿ ಎಂದು ನಾಮಕರಣ ಮಾಡುವ ಹೊತ್ತಿಗೆ ಅದು ದೈವಾಧೀನವಾಗಿತ್ತು.

ಇದನ್ನು ಇಲ್ಲಿ ಯಾಕೆ ಬರೆದೆನೆಂದರೆ, ನಾನು ಕಿಂಕರ್ತವ್ಯಮೂಢಳಾಗಿ ನಿಂತಿದ್ದಾಗ ಟಿಪ್ಪುವಿನ ಆಗಮನವಾಯ್ತು. ಅದೂ ನಮ್ಮ ಮನೆಯ ಗೇಟಿನ ಮುಂದೆಯೇ.

ಬಂದದ್ದೇ ನನ್ನ ನೋಡಿ ಅದು ಸಲ್ಪ ದಿಗ್ಭ್ರಮೆಗೊಂಡಿತು. ಬಾಯಿ ಬಿಟ್ಟು ಆಶ್ಚರ್ಯಚಕಿತವಾಗಿ ನನ್ನನ್ನೇ ದಿಟ್ಟಿಸಿ ನೋಡಿತು ಬೇರೆ !

ನಾನು : ಏನೋ ಟಿಪ್ಪು….ಹೇಗಿದ್ದೀಯ ?

ಅದು : ಕೇಳ್ಬೇಡ.

ಈಗ ದಿಗ್ಭ್ರಮೆಗೊಳ್ಳುವ ಸರದಿ ನನ್ನದಾಗಿತ್ತು. ನಾಯಿ ಮನುಷ್ಯರ ದನಿಯಲ್ಲಿ ಮಾತಾಡುತ್ತಿತ್ತು…ಅದೂ ನಮ್ಮ ಟಿಪ್ಪು !

ನಾನು : ಯಾಕೋ, ಅಮ್ಮ bread ಹಾಕೋದನ್ನ ನಿಲ್ಲಿಸಿದರಾ ?

ಅದು : ಇಲ್ಲ, ಸಂಪದ್ಭರಿತವಾಗಿ ಊಟಗಳು ಸಿಗುತ್ತಿವೆ. ಜನ ಊಟವನ್ನ ಚೆನ್ನಾಗೇ ಚೆಲ್ಲುತ್ತಿದ್ದಾರೆ. ಸದ್ಯಕ್ಕೆ ತೊಂದರೆ ಅದಲ್ಲ.

ನಾನು: ಆಹ…11.3 % inflation rate ನಲ್ಲೂ ಜನ ಊಟ ಚೆನ್ನಾಗೇ ಚೆಲ್ಲುತ್ತಿದ್ದಾರೆಯೇ ? ಭೇಷ್ ! ಮತ್ತಿನ್ನೇನು ತೊಂದರೆ ನಿಂದು ?

ಅದು: ಗಾದೆಯಿಂದ ನಮ್ಮ ಮಾನ ಮರ್ಯಾದೆ ಹರಾಜಾಗಿದೆ !

ನಾನು : ಗಾದೆನೆಲ್ಲಾ ಬೈಯ್ಯಬೇಡ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ತಿಳಿಯಿತೇ ?

ಅದು : ಹಾಗಂತ ನಮ್ಮ ಮಾನ ತೆಗೆಯುವುದು ಎಷ್ಟು ಸರಿ ?

ನಾನು : ನಿನ್ನ ಮಾನ ಕಳೆದಿರುವ ಗಾದೆ ಯಾವುದು ?

ಅದು : ನಾವು ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲವಂತೆ ?

ನಾನು : ಹೌದು, ಹಾಳಾಗುವುದಿಲ್ಲ.

ಅದು : ನೀವು ಭಕ್ತಿಯಿಂದ ಕೇಳಿಕೊಂದರೆ ಅಥವ ಕುಪಿತಗೊಂಡರೆ ದೇವಲೋಕಕ್ಕೆ ಒಳಿತು ಕೆಡಕುಗಳಾಅಗುತ್ತವೆಯೋ ?

ನಾನು : ಹೌದು.

ಅದು : ನಿನ್ನ ತಲೆ !

ನನಗೆ ರೇಗಿ ಹೋಯ್ತು. ನಾಯಿಯೊಂದು ಈ ತರಹ ನನ್ನನ್ನ ಬೈದಿದ್ದು ನನಗೆ ಸರ್ವಥಾ ಸಮ್ಮತವಾಗಲಿಲ್ಲ. ನಾನಂದೆ, ನೋಡು, sound waves do not travel through vacuum, ಅದಕ್ಕೆ ನಿನ್ನ ಬೊಗಳಿಕೆ ದೇವಲೋಕಕ್ಕೆ ಕೇಳೋಲ್ಲ.

ಅದು : ನೀವು ಗಂಟೆ ಜಾಗಟೆಗಳನ್ನ ಬಾರಿಸಿದರೆ ಕೇಳತ್ತೋ ?

ನಾನು for the first time, struck ಆದೆ. ನನ್ನದೇ physics ನಲ್ಲಿ !

ಅದು : see ! you people don’t know what you are doing ! don’t think we don’t know and understand English, we wear collars…which implies we are taught to obey orders in English !

shock ಆಗೋದೆ ನಾನು !!

ನಾನು ನಮ್ಮ ಮನುಕುಲದ ಮರ್ಯಾದೆ ಹೀಗೆ ಹರಾಜಾವುದನ್ನು ನೋಡಲು ತಯಾರಿರಲಿಲ್ಲ. ನಾನಂದೆ, ನೋಡು, ನಾವು ಮನಸ್ಸಿಟ್ಟು ಪ್ರಾರ್ಥನೆ ಮಾಡುತ್ತೀವಿ…ಅದು ದೇವರನ್ನ ಮುಟ್ಟತ್ತೆ.

ಅದು : ನಮಗೆ ಮನಸ್ಸಿಲ್ಲ ಅಂತ ನೀವು ಹೇಗೆ assume ಮಾಡಿಕೊಂಡಿರಿ ? ನಮಗೆ ಮಾತು, ಬೈಗುಳ, ಪ್ರಾರ್ಥನೆ, ಎಲ್ಲ ಬೊಗಳಿಕೆಯೇ. ಹಾಗಾದರೆ ನಮ್ಮ ಪ್ರಾರ್ಥನೆ ದೇವರು ಕೇಳಿಸಿಕೊಳ್ಳುವುದಿಲ್ಲವೇ ? ನಿಮ್ಮ ಮಾತು ಮಾತು, ನಮ್ಮ ಬೊಗಳಿಕೆ ಮಾತೇ ಅಲ್ಲವೇ ? ಹ ? ಮಾತಾಡು ! rather, ಬೊಗಳು !

checkmate question !ನಾಯಿಯೊಂದರ ಮುಂದೆ ನಾನು ನಿರುತ್ತರಳಾದೆ !

ಅದು ಮುಂದುವರಿಸಿತು. ನೋಡು, ನಮಗೂ ಮನಸ್ಸಿದೆ. ನೀವು ನಮ್ಮ ಬೊಗಳಿಕೆಯನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ಅನ್ನುವ ಮಾತ್ರಕ್ಕೆ ದೇವಲೋಕವನ್ನು ಅದು ತಲುಪುವುದಿಲ್ಲ ಎಂದುಕೊಳ್ಳಬೇಡ. ಆನೆ ಕೂಗಿದ್ದಕ್ಕೆ ವಿಷ್ಣು ಬಂದ, ನಾವು ಕೂಗಿದರೆ ಹರಿಹರಬ್ರಹ್ಮಾದಿಗಳು ಬರ್ತಾರೆ ! ತಿಳೀತಾ ? ನಾವು ವಿಶ್ವ ಶ್ವಾನ ಹಕ್ಕು ಪುನಸ್ಸ್ಥಾಪನಾ ಸಂಘದಿಂದ ಆಷಾಢ ಅಮಾವಾಸ್ಯೆಯಂದು ಒಕ್ಕೊರಲಿನಿಂದ ಬೊಗಳಿ ಮತ್ತು ಊಳಿಟ್ಟು ನಮ್ಮ ಬೇಡಿಕೆಯನ್ನು ಸಲ್ಲಿಸಲಿದ್ದೇವೆ. ನೋಡು ಆಗ ಏನಾಗತ್ತೆ ಅಂತ !

ಅಷ್ಟೊತ್ತಿಗೆ ಅಮ್ಮ ” ಲೇ…ಏನೆ ಮಾಡ್ತಿದ್ಯಾ…ಗೇಟ್ ಮೇಲೆ ನಿದ್ದೆ ಮಾಡುವ ಹಣೆಬರಹ ಯಾಕೆ ? ನೋಡಿದವರು ಹಾಸಿಗೆ ಗತಿ ಇಲ್ಲ ಅಂದುಕೊಳ್ಳಬೇಕೆ ? “

ಕಣ್ಣು ಬಿಟ್ಟೆ.ಅಯ್ಯೋ…ನಾನು ನಿದ್ದೆ ಮಾಡಿದ್ದೆನೆ ? ಅದೂ ಗೇಟ್ ಮುಂದೆ ನಿಂತು ತೂಕಡಿಸಿದ್ದೆನೆ ? ಕನಸು ಬೇರೆ ಬಿದ್ದಿತ್ತೇ ? ಟಿಪ್ಪೂ ? ಮಾಯ ! ಸದ್ಯ…ಕನಸಿನಲ್ಲಿ ಅವಮಾನ ಆಯ್ತು…ನಿಜವಾಗಿಯೂ ಅಲ್ಲ !

ಅಮ್ಮ : ನೋಡಿದವರು ಆಡಿಕೊಳ್ಳುತ್ತಾರೆ…ಹುಡುಗಿ ಹೊರಗೆ ಸುಮ್ಮನೆ ಕಣ್ಣಾಡಿಸುತ್ತ ಇರ್ತಾಳೆ ಕೆಲ್ಸ ಇಲ್ಲದೇ !

ನಾನು : ಬಿಡಮ್ಮ…ನಾಯಿ ಬೊಗಳಿದರೆ…

ನನಗೆ ಯಾಕೋ ಆ ಗಾದೆ ಹೇಳಲು ಮನಸ್ಸೇ ಆಗಲಿಲ್ಲ.

July 10, 2008

ಹೀಗೊಂದು ಮಾತಿದೆಯಂತೆ….

Filed under: kavana — saagari @ 5:30 pm

ಹೀಗೊಂದು ಮಾತಿದೆಯಂತೆ
ಲೋಕದಲ್ಲಿ ಚಂದ್ರನನ್ನು
ಕಾತರದಿ ನೋಡುವವರು
ಇಬ್ಬರೇ ಇಬ್ಬರಂತೆ;
ಒಬ್ಬ ಕವಿಯಂತೆ,
ಇನ್ನೊಬ್ಬ ಪ್ರೇಮಿಯಂತೆ !

ಕವಿಯು ಪ್ರೇಮಕವಿತೆ
ನಿನ್ನ ನೋಡಿ ಬರೆದರೆ
ಪ್ರೇಮಿ ನಿನ್ನ ನೋಡಿ
ತಾ ಕವಿಯಾಗುವನಂತೆ !
ಅಮಾವಾಸ್ಯೆಯನ್ನ ಇಬ್ಬರೂ
ವಿಪರೀತ ಬೈವರಂತೆ !!

ನಿನ್ನ ನೋಡಿ ಕಲಿಯಬೇಕು
ಅಂತ ಕವಿ ಅಂದನಂತೆ
ಕುಗ್ಗಿ ಹಿಗ್ಗಿ ಬದುಕೇ ಇದೆಂದು
ನೀನೆ ಅವನಿಗೆ ಹೇಳಿದೆಯಂತೆ !
ನೀನಿಲ್ಲದೇ ಅವನ ಕಾವ್ಯ
ಪೂರ್ಣವೇ ಅಲ್ಲವಂತೆ !

ಪ್ರೇಮಿ ನಿನ್ನ ಋಣಿಯಂತೆ
ಪ್ರೇಯಸಿಗೆ ತನ್ನ ದೂತನಾಗಿ
ಬೇರಾರೂ ಸಲ್ಲರಂತೆ
ಮೌನವನ್ನೇ ಮಾತಾಗಿಸುವ
ಕಲೆಯದು ನಿನಗಿಂತ
ಬೇರಾರಿಗೂ ಚೆನ್ನಾಗಿ ಒಲಿದಿಲ್ಲವಂತೆ !

ನಿನಗೆ ಶಾಪಸಿಕ್ಕಿದ್ದು ಪಾಪವಂತೆ
ನೀನು ಲೋಕಕ್ಕೆ ದೀಪವಂತೆ
ನಿನ್ನ ನೋಡೆ ಮನದ ತಾಪ
ಮಾತಾಡದೇ ಕಥೆಯಿಲ್ಲದೇ
ಸುಮ್ಮನೆ ತಾನಿಳಿವುದಂತೆ !

ಜಗವೇ ನೀನೊಂದು ವಿಸ್ಮಯ

Filed under: kavana — saagari @ 4:30 am

ಕರಿಮೋಡದೊಡಲಲ್ಲಿ ಹನಿಮುತ್ತನಿಟ್ಟು
ಕಡುರಾತ್ರಿ ನಂತರದಿ ತಿಳಿಹಗಲನಿಟ್ಟು
ಕೆಡುಕಿನೊಳಗೆ ಒಳಿತನಡಗಿಸಿಹ
ಜಗವೇ ನೀನೊಂದು ವಿಸ್ಮಯ !

ಆಕಾಶದನಂತತೆಯಲಿ ಆನಂದವಿಟ್ಟು
ಅಬ್ಧಿಯಪ್ಪಳಿಕೆಯಲಿ ಆಸೆಯಿಟ್ಟು
ಆಸೆಯಿಂದ ಆನಂದವಂ ಅನ್ವೇಷಿಸಲು
ಪ್ರೇರಿಪ ಜಗವೇ ನೀನೊಂದು ವಿಸ್ಮಯ !

ಒಂದೆಡೆ ಹಿಮ ಇನ್ನೊಂದೆಡೆ ರಣಬಿಸಿಲು
ಒಂದೆಡೆ ಸಾಗರ ಮತ್ತೊಂದೆಡೆ ಮರುಭೂಮಿ
ಒಂದೇ ಭೂಮಿಯಲಿ ಹಲವು ಬಗೆಯ
ಹವೆಯಿಟ್ಟ- ಜಗವೇ ನೀನೊಂದು ವಿಸ್ಮಯ !

ಮಣ್ಣಲ್ಲಿ ಚಿನ್ನವಿಟ್ಟು ಚಿಪ್ಪಲ್ಲಿ ಮುತ್ತನಿಟ್ಟು
ಕಲ್ಲಲ್ಲಿ ವಜ್ರವಿಟ್ಟು ಅದಿರಲ್ಲಿ ಲೋಹವಿಟ್ಟು
ಹುಡುಕಲದ ನಾವು ಕಷ್ಟಪಟ್ಟು ಅದುವೆ ನೋಡು
ಸುಖದ ಗುಟ್ಟು ಎಂಬ ಜಗವೇ ನೀನೊಂದು ವಿಸ್ಮಯ !

July 9, 2008

ಗಂಗೆಯ ಸ್ವಗತ

Filed under: kavana — saagari @ 7:34 am

ಮಾನಸ ಗಂಗೋತ್ರಿಯ ಮುಗ್ಧ ಮಾನಿನಿ ನಾನು
ಕೈಲಾಸದ ಕಮನೀಯನ ಕೈಹಿಡಿಯ ಬಯಸಿದೆನು
ಶಿವಗಂಗೆಯರ ಮಿಲನ ಲೋಕಕೇಕೆ ರುಚಿಸದು ?
ಜಹ್ನುವಂಥ ಕಾಲ ನಮ್ಮನೇಕೆ ಸೇರಗೊಡದು ?

ಆದರೂ ಜಾಹ್ನವಿಯಾಗಿ ಹೊರಬಂದೆ ನಾನು
ಮಂದಾಕಿನಿಯಾಗಿ ನಿನ್ನ ಸೇರೆ ಹವಣಿಸಿದೆನು
ಅಲಕೆ ನೀನಳುಕದಿದಿರೆಂದು ನೀ ಕೇದಾರದಲ್ಲಿ ನಿಂತೆ
ನಾ ಬರುವ ವೇಳೆಗೆ ನೀ ಕಲ್ಲಾದೆಯಂತೆ ?

ಹತಾಶ ವಿಪಾಶೆ ನಾ ಭಾಗೀರಥಿಯಾದೆ
ನಿನ್ನ ಹೇಗಾದರೂ ಸೇರಿಯೇ ತೀರುವೆನೆಂದೆ
ಸಾಗರದಾಚೆ ಅರಸಿದೆ, ಧರೆಯೆಲ್ಲಾ ಅಲೆದೆ
ಸುಂದರವನವ ನಿರ್ಮಿಸಿ ನಿನಗಾಗಿ ನಾ ಕಾದೆ

ನೋಡಲೆಂದು ನೀನನ್ನ ದುಃಖ ಹರಿಯು ದ್ವಾರ ತೆಗೆದನು
ತನ್ನ ಗೆಳತಿ ಅತ್ತಳೆಂದು ಯಮುನೆ ಕಪ್ಪಗಾದಳು
ಕೋಪದಿಂದ ಸರಸ್ವತಿ ತಾನೂ ಕೆಂಪಗಾದಳು
ಗುಪ್ತವಾಗಿ ನಿನ್ನವಳು ಪಾಪ ಹುಡುಕಹೊರಟಳು !

ಆಗದೆಂದೇ ಬಗೆದೆ ನಾ ನಮ್ಮಿಬ್ಬರ ಸಮಾಗಮ
ಲೋಕಕೆಲ್ಲಿ ತಿಳಿಯುವುದು ನಿಷ್ಕಾಮ ಪ್ರೇಮ
ಕಡೆಗೊಂದು ದಿನ ಬಿತ್ತೆನ್ನಮೇಲೆ ಪುಟ್ಟದೊಂದು ಹನಿ
ಹೇಳಿತದು ನನಗೆ ನಿನ್ನ ಮನದಾಳದ ಧ್ವನಿ

ನೀ ಬರುವೆಯಂತೆ ಹೀಗೆಯೇ ಮಳೆಯ ಹನಿಯಾಗಿ
ನೊಂದ ನನ್ನೀಮನಕೆ ಸಾಂತ್ವನದ ನುಡಿಯಾಗಿ
ಶ್ರಾವಣದ ಮೂದಲ ದಿನ ಬಂದೆ ನೀ ಮಳೆಯಾಗಿ
ನಿಂತಿತೆಮ್ಮ ಮಿಲನಕೆ ಇಳೆಬಾನು ಸಾಕ್ಷಿಯಾಗಿ

« Previous PageNext Page »

Theme: Rubric. Blog at WordPress.com.

Follow

Get every new post delivered to your Inbox.